ಧಾರವಾಡ || ಜಿಲ್ಲೆಯಲ್ಲಿ ವರುಣಾರ್ಭಟ : schools, colleges ರಜೆ

ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಒಂದು ವಾರ ಮಳೆ.

ಧಾರವಾಡ/ಹುಬ್ಬಳ್ಳಿ: ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಡಿಯಾಗಿದೆ. ಹುಬ್ಬಳ್ಳಿ-ಧಾರವಾಡದ ಪ್ರಮುಖ ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದು, ಕೆರೆಯಂತಾಗಿದೆ. ವ್ಯಕ್ತಿಯೊಬ್ಬರು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆಯೂ ಸಂಭವಿಸಿದೆ.

ಕೆರೆಯಂತಾದ ನೀರಿನಲ್ಲೇ ಜನರು ವಾಹನಗಳನ್ನು ಚಲಾಯಿಸಿಕೊಂಡು ತೆರಳುತ್ತಿದ್ದಾರೆ. ಕಾರೊಂದರಲ್ಲಿ ಮಹಿಳೆಯರು ಸೇರಿದಂತೆ ಹಲವರು ಸಿಲುಕಿದ್ದು, ಸಾರ್ವಜನಿಕರು ಅವರಿಗೆ ನೆರವಾಗಿದ್ದಾರೆ. ಮುಂಜಾನೆಯಿಂದಲೂ ಭಾರಿ ಮಳೆಯಾಗುತ್ತಿದ್ದು, ಜನರ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯುಂಟಾಗಿದೆ.

ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ: ಮಳೆ ನೀರಿನಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿಕೊಂಡು ಹೋದ ಘಟನೆ ಕಸಬಾಪೇಟ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗಲಿ ರಸ್ತೆಯಲ್ಲಿ ನಡೆದಿದೆ. ಬೀರಬಂದ ಓಣಿಯ ಹುಸೇನ ಕಳಸ ಎಂಬವರೇ ಕೊಚ್ಚಿಕೊಂಡು ಹೋದವರು. ರಸ್ತೆ ಪಕ್ಕದ ಚರಂಡಿಯ ನೀರಿನಲ್ಲಿ ಆಯತಪ್ಪಿ ಜಾರಿ ಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಹುಡುಕಾಟ ನಡೆಸಿದ್ದಾರೆ. ಆದರೆ, ಇದುವರೆಗೂ ಪತ್ತೆಯಾಗಿಲ್ಲ.

ತುಂಬಿ ಹರಿಯುತ್ತಿರುವ ಉಣಕಲ್ ಕೆರೆ: ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಹತ್ತಿರ ಇರುವ ಲಕ್ಷ್ಮೀ ಕಾಂಪ್ಲೆಕ್ಸ್ನಲ್ಲಿ ಅಂಗಡಿಗಳ ಒಳಗೆ ಮಳೆ ನೀರು ನುಗ್ಗಿದೆ. ನಗರದ ಹಲವಾರು ಭಾಗಗಳಲ್ಲಿ ಬುಧವಾರ ಸುರಿದ ಮಳೆಯಿಂದ ಭಾರಿ ಪ್ರಮಾಣದಲ್ಲಿ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ನಗರದ ಪ್ರಮುಖ ರಾಜಕಾಲುವೆಗಳು ತುಂಬಿ ಹರಿಯುತ್ತಿವೆ. ಉಣಕಲ್ ಕೆರೆಯೂ ಭರ್ತಿಯಾಗಿದ್ದು, ತುಂಬಿ ಹರಿಯುತ್ತಿರುವ ದೃಶ್ಯ ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.

ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಲ್ಲೂ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ನವಲಗುಂದ ತಾಲೂಕಿನ ಯಮನೂರ ಗ್ರಾಮದಲ್ಲಿ ಸಾಕಷ್ಟು ಮನೆಗಳಿಗೆ ನೀರು ನುಗ್ಗಿದೆ. ನೀರು ಹೊರಹಾಕಲು ಜನರು ಹರಸಾಹಸಪಡುತ್ತಿದ್ದಾರೆ.

ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ: ರೆಡ್ ಅಲರ್ಟ್ ಘೋಷಣೆ ಹಾಗೂ ಜಿಲ್ಲೆಯ ಬಹುತೇಕ ಕಡೆ ನಿನ್ನೆ ಸಂಜೆಯಿಂದಲೇ ನಿರಂತರ ಮತ್ತು ವ್ಯಾಪಕ ಮಳೆ ಆಗುತ್ತಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ಧಾರವಾಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜುಗಳಿಗೆ ಇಂದು (ಜೂ.12) ರಜೆ ಘೋಷಿಸಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *