ಚನ್ನಪಟ್ಟಣ (ರಾಮನಗರ): ‘ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ನಾವು ಕನಕಪುರದ ಮೂರು ಕಡೆಗಳಲ್ಲಿ ದೊಡ್ದಆಲಹಳ್ಳಿ ಕೆಂಪೇಗೌಡರ 25 ಎಕರೆ ಜಮೀನು ದಾನ ಮಾಡಿದ್ದೇವೆ. ದೇವೇಗೌಡರ ಕುಟುಂಬದವರು ಹಾಸನ, ರಾಮನಗರ, ಚನ್ನಪಟ್ಟಣದಲ್ಲಿ ಒಂದೇ ಒಂದು ಗುಂಟೆ ಜಾಗ ದಾನ ಮಾಡಿದ್ದಾರಾ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
‘ಡಿ.ಕೆ ಸಹೋದರರು ಕನಕಪುರದಲ್ಲಿ ಭೂಮಿ ಲೂಟಿ ಮಾಡಿದ್ದಾರೆ’ ಎಂಬ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಆರೋಪಕ್ಕೆ ಶುಕ್ರವಾರ ತಾಲ್ಲೂಕಿನ ಚಕ್ಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರವಾಗಿ ನಡೆದ ಪ್ರಚಾರಸಭೆಯಲ್ಲಿ ಅವರು ತಿರುಗೇಟು ನೀಡಿದರು.
‘ನಾವು ಜಮೀನು ಕಬ್ಜ ಮಾಡಿಕೊಂಡಿದ್ದು, ಶಾಲೆ ಕಟ್ಟಲು ಜಾಗ ನೀಡುತ್ತಿಲ್ಲ. ಜಾಗ ಕೇಳಿದರೆ ದುಡ್ಡು, ದುಡ್ಡು ಅಂತಾರೆ ಎಂದು ದೇವೇಗೌಡರು ಆರೋಪಿದ್ದಾರೆ. ನಿಮಗೆ ಕನಕಪುರದಲ್ಲಿ ಸಂಬಂಧಿಕರಿದ್ದರೆ ಕೇಳಿ ನೋಡಿ. ಹಳ್ಳಿ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂದು ಶಾಲೆಗಳ ನಿರ್ಮಾಣಕ್ಕೆ ನಾವು 3 ಕಡೆ ಜಾಗ ದಾನ ಮಾಡಿದ್ದೇವೆ. ಯಾರು ಬೇಕಾದರೂ ಹೋಗಿ ನೋಡಬಹುದು’ ಎಂದು ಸವಾಲು ಹಾಕಿದರು.
‘ಕುಮಾರಸ್ವಾಮಿ ಹಾಗೂ ದೇವೇಗೌಡರೇ, ನೀವು ಎಲ್ಲಾದರೂ ಒಂದು ಎಕರೆ ಜಾಗ ದಾನ ಮಾಡಿದ್ದೀರಾ? ನಾನು ನಿಮ್ಮ ಹಾಗೂ ನಿಮ್ಮ ಜಮೀನಿನ ವಿಚಾರಗಳನ್ನು ಮಾತನಾಡಲು ಹೋಗುವುದಿಲ್ಲ. ಚುನಾವಣೆಗಾಗಿ ಟೀಕಿಸುವುದಿಲ್ಲ. ನಿಮ್ಮ ವಯಸ್ಸಿಗೆ ಗೌರವ ನೀಡುತ್ತೇನೆ. ಬಡವರಿಗೆ ಆಗಿರುವ ಮೋಸದ ಬಗ್ಗೆ ಧ್ವನಿ ಎತ್ತಲು ನಾನು ಈ ಪ್ರಶ್ನೆ ಕೇಳಬೇಕಾಗಿದೆ ನಿಮ್ಮ ಕುಟುಂಬದವರು ಒಂದು ಗುಂಟೆ ಜಮೀನನ್ನು ನೀಡಿದ್ದೀರಾ?’ ಎಂದು ಪ್ರಶ್ನಿಸಿದರು.
‘ಕುಮಾರಸ್ವಾಮಿ ಅವರೇ ನೀವು ಹಾಗೂ ನಿಮ್ಮ ಪತ್ನಿ ಕೋವಿಡ್ ಸಮಯದಲ್ಲಿ ಜನರಿಗೆ ನೆರವಾಗಿದ್ದೀರಾ? ಡಿ.ಕೆ. ಸುರೇಶ್ ಜನರಿಗೆ ನೆರವಾಗಲಿಲ್ಲವೇ? ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡಲಿಲ್ಲವೇ? ಇಂತಹ ಒಂದು ಕೆಲಸವನ್ನು ನೀವು ಮಾಡದೆ ಮನೆಯಲ್ಲಿ ಕುಳಿತಿದ್ರಿ. ಯಾರಿಗೂ ಸಹಾಯ ಮಾಡಲಿಲ್ಲ. ಕಷ್ಟಕ್ಕಾಗದ ನಿಮ್ಮೊಂದಿಗೆ ಜನ ಯಾಕೆ ನಿಲ್ಲುತ್ತಾರೆ?’ ಎಂದರು.
ಕಾರ್ಯಕರ್ತರ ಸ್ಥಿತಿ ಏನು?: ‘ಕುಮಾರಸ್ವಾಮಿ ಅವರು ಕ್ಷೇತ್ರದ ಯಾವುದಾದರೂ ಒಬ್ಬ ಕಾರ್ಯಕರ್ತನಿಗೆ ಅಧಿಕಾರ ಕೊಟ್ಟಿದ್ದಾರಾ? ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿದ್ದಾರಾ? ಕುಮಾರಸ್ವಾಮಿ ಅವರು ಕ್ಷೇತ್ರ ಖಾಲಿ ಮಾಡಿದ ನಂತರ ನಾನು ಜನರ ಮನೆಬಾಗಿಲಿಗೆ ಸರ್ಕಾರ ಹಾಗೂ ಅಧಿಕಾರಿಗಳನ್ನು ಕರೆದುಕೊಂಡು ಬಂದು ಕಷ್ಟ ಆಲಿಸಿದೆ. 26 ಸಾವಿರ ಜನರಿಂದ ಮನೆ, ನಿವೇಶನ, ಸಾಲ ಸೌಲಭ್ಯ, ಪಿಂಚಣಿ, ರಸ್ತೆ, ನೀರಾವರಿ ಸೌಲಭ್ಯ ಸೇರಿದಂತೆ ತಮ್ಮ ಅನೇಕ ಸಮಸ್ಯೆಗಳನ್ನು ಆಲಿಸಿದ್ದೇನೆ. ಎಲ್ಲವನ್ನೂ ಹಂತಹಂತವಾಗಿ ಬಗೆಹರಿಸುವೆ. ಇಂತಹ ಒಂದು ಕೆಲಸವನ್ನಾದರೂ ಕುಮಾರಸ್ವಾಮಿ ಮಾಡಿದ್ದಾರಾ?’ ಎಂದು ಶಿವಕುಮಾರ್ ಪ್ರಶ್ನಿಸಿದರು.
ಚಕ್ಕರೆಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಭಾಗಿಯಾದರು. ಸಚಿವರಾದ ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ಡಾ. ಎಂ.ಸಿ. ಸುಧಾಕರ್, ಸಂಸದ ಶ್ರೇಯಸ್ ಪಟೇಲ್, ಶಾಸಕ ಶ್ರೀನಿವಾಸ್, ಉದಯ್, ರಂಗನಾಥ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮಾಜಿ ಶಾಸಕರಾದ ಸಿ.ಎಂ. ಲಿಂಗಪ್ಪ, ಎಂ.ಸಿ. ಅಶ್ವಥ್ ಸೇರಿದಂತೆ ಹಲವರು ಇದ್ದರು.
ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿಮೊಮ್ಮಗನ ಪಟ್ಟಾಭಿಷೇಕ ಮಾಡುವವರೆಗೂ ನಾನು ಬದುಕಿರುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ. ಹಾಗಾದರೆ ಅವರಿಗಾಗಿ ದುಡಿದ ಕಾರ್ಯಕರ್ತರ ಪರಿಸ್ಥಿತಿ ಏನಾಗಬೇಕು ಎಂದು ಅವರನ್ನು ಕೇಳಲು ಬಯಸುತ್ತೇನೆಎಚ್.ಸಿ. ಬಾಲಕೃಷ್ಣ ಮಾಗಡಿ ಶಾಸಕಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಂಡ್ಯದ ಜನ ಸುಮಲತಾ ಅವರಿಗೆ ಸ್ವಾಭಿಮಾನಿ ಅಂತ ಮತ ಕೊಟ್ಟು ಗೆಲ್ಲಿಸಿದರು. ನೀವು ಕೂಡ ನಿಮ್ಮೂರ ಸ್ವಾಭಿಮಾನಿ ಮಗನಿಗೆ ಅದೇ ರೀತಿ ಮತ ಕೊಟ್ಟು ದೇವೇಗೌಡರ ಕುಟುಂಬಕ್ಕೆ ಪಾಠ ಕಲಿಸಬೇಕು ‘ಋಣ ತೀರಿಸಲು ಕೈ ಜೋಡಿಸಿದ ಸಿಪಿವೈ’
‘ಯೋಗೇಶ್ವರ್ ಕೆರೆಗಳಿಗೆ ನೀರು ತುಂಬಿಸಿ ರೈತರಿಗೆ ನೆರವಾಗಿದ್ದಾರೆ. ನಾವು ಸತ್ತೇಗಾಲದಿಂದ ನೀರು ತರುವ ಯೋಜನೆ ಮಾಡುತ್ತಿದ್ದೇವೆ. ಕಾಂಗ್ರೆಸ್ನವರು ಜನರ ಬದುಕು ಬದಲಿಸುವಂತಹ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಅಂತಹ ಒಂದೇ ಒಂದು ಕಾರ್ಯಕ್ರಮವನ್ನು ಕುಮಾರಸ್ವಾಮಿ ಹಾಗೂ ದೇವೇಗೌಡರು ಮಾಡಿದ್ದಾರಾ? ಅವರೇನಾದರೂ ಕೊಟ್ಟಿದ್ದರೆ ಕೂಡಲೇ ನಾನು ಈ ಚುನಾವಣಾ ಪ್ರಚಾರ ನಿಲ್ಲಿಸಿ ಇಲ್ಲಿಂದ ಹೊರಟು ಹೋಗುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಜೆಡಿಎಸ್ 19 ಕ್ಷೇತ್ರದಲ್ಲಿ ಗೆದ್ದಿತ್ತು. ಈಗ 18 ಸ್ಥಾನಕ್ಕೆ ಕುಸಿದಿದೆ. ಇಲ್ಲಿ 5 ಬಾರಿ ಶಾಸಕರಾಗಿ ವಿಧಾನ ಪರಿಷತ್ ಸದಸ್ಯರಾಗಿದ್ದ ಯೋಗೇಶ್ವರ್ ಆ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಪಕ್ಷ ಸೇರಲು ದಡ್ಡರೇ? ಈ ಕ್ಷೇತ್ರದ ಜನರ ಋಣ ತೀರಿಸಬೇಕು ಎಂದರೆ ಕಾಂಗ್ರೆಸ್ ಸರ್ಕಾರದ ಜತೆ ಕೈಜೋಡಿಸಬೇಕು. ಆಗ ಮಾತ್ರ ಜನರ ಬದುಕು ಬದಲಾವಣೆ ಮಾಡಲು ಸಾಧ್ಯ ಎಂದು ಅರಿತಿದ್ದಾರೆ. ನಾನು ಕೆಲವು ಬಾರಿ ಅವರನ್ನು ಬೈದಿದ್ದೇನೆ ತಿಳುವಳಿಕೆ ಹೇಳಿದ್ದೇನೆ. ಆದರೂ ಇದು ನಮ್ಮ ಕ್ಷೇತ್ರ ನಮ್ಮ ಜನ ಇದ್ದಾರೆ. ನನ್ನ ಹೆಣವನ್ನು ದೊಡ್ಡಾಲಹಳ್ಳಿಯಲ್ಲಿ ಯೋಗೇಶ್ವರ್ ಅವರ ಹೆಣ ಚಕ್ಕೆರೆಯಲ್ಲಿ ಹಾಕುತ್ತಾರೆಯೇ ವಿನಾ ಹಾಸನಕ್ಕೆ ಹೋಗುವುದಿಲ್ಲ. ನಮ್ಮ ಪಲ್ಲಕ್ಕಿ ಹಾಗೂ ಚಟ್ಟ ಹೋರುವುದು ಇಲ್ಲೇ. ಹಾಗಾಗಿ ನಮ್ಮವರನ್ನೇ ಶಾಸಕರನ್ನಾಗಿ ಆಯ್ಕೆ ಮಾಡಿ’ ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದರು. ನೀರಾವರಿ ಮಾಡಿದ ತೃಪ್ತಿ ಇದೆ: ಸಿಪಿವೈ
‘ಈ ಮಣ್ಣಿನ ಮಗನಾಗಿ ರೈತರ ಕಣ್ಣೀರು ಹೊರೆಸುವ ಸಲುವಾಗಿ ನೀರಾವರಿ ಯೋಜನೆ ಜಾರಿಗೊಳಿಸಿ ಬರ ನಿವಾರಿಸಿದ ಆತ್ಮತೃಪ್ತಿ ನನಗಿದೆ. ನೀರಾವರಿಯಿಂದಾಗಿ ಕೃಷಿ ಮತ್ತು ಪಶುಸಂಗೋಪನೆಯಲ್ಲಿ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಇದೇ ವಿಚಾರವಾಗಿ ಮುಖ್ಯಮಂತ್ರಿ ಬಹಿರಂಗ ಸಭೆಯಲ್ಲಿ ಹಾಲಿನ ದರವನ್ನು ಹೆಚ್ಚಿಸುವಂತೆ ಮನವಿ ಮಾಡಿರುವೆ. ಅವರು ಸಹ ಭರವಸೆ ನೀಡಿದ್ದಾರೆ.
ತಾಲ್ಲೂಕಿನ ಎಲ್ಲಾ ಕೆರೆ-ಕಟ್ಟೆ ತುಂಬಿ ರೈತರ ಬದುಕು ಹಸನಾಗಿಸಬೇಕಾದರೆ ನೀವೆಲ್ಲರೂ ನನಗೆ ಮತ ನೀಡಬೇಕು’ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಮನವಿ ಮಾಡಿದರು. ‘ಎಲ್ಲಂದಲೋ ಬಂದವರು ಶಾಸಕರಾಗಬಾರದು’ ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾನು ಈ ಜಿಲ್ಲೆಯವರಾಗಿ ನಮ್ಮೂರಿಗೆ ಶಾಸಕರಾಗಿದ್ದೇವೆ. ಅದೇ ರೀತಿ ಯೋಗೇಶ್ವರ್ ಅವರು ಸಹ ಅವರ ಊರಿಗೆ ಶಾಸಕರಾಗಬೇಕೇ ಹೊರತು ಎಲ್ಲಿಂದಲೋ ಬಂದವರು ಆಗಬಾರದು. ಕೆಲ ದಿನಗಳಿಂದ ಕುಮಾರಣ್ಣ ಚಕ್ಕೆರೆಯಲ್ಲಿ ನಿಂತು ಹುಟ್ಟೂರನ್ನು ಯೋಗೇಶ್ವರ್ ಅಭಿವೃದ್ಧಿ ಮಾಡಿಲ್ಲ ಎಂದಿದ್ದಾರೆ. ಆರು ವರ್ಷದಿಂದ ತಾಲ್ಲೂಕಿನಲ್ಲಿ ಅಧಿಕಾರದಲ್ಲಿದ್ದವರು ಯಾರು ಸ್ವಾಮಿ? ಇಲ್ಲಿ ಅಭಿವೃದ್ಧಿಯಾಗಿಲ್ಲ ಅಂದರೆ ಅದು ನಿಮ್ಮ ಲೋಪವೇ ವಿನಾ ಯೋಗೇಶ್ವರ್ ಅವರದ್ದಲ್ಲ’ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.