ಬೀದರ್: ಜಿಲ್ಲೆಯ ಔರಾದ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗುಂಡಪ್ಪ ವಕೀಲ್ ಅವರನ್ನು ವಂಚಿಸಲಾಗಿದ್ದು, ಸಿಐಡಿಯ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ತನಿಖೆ ಕೈಗೊಳ್ಳಲಾಗಿದ್ದು, ಹಣ ವರ್ಗಾವಣೆಯಾದ ಖಾತೆಗಳ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಂಚನೆ: ಆಗಸ್ಟ್ 12ರಂದು ಗುಂಡಪ್ಪ ವಕೀಲ್ ಅವರಿಗೆ ಕರೆ ಮಾಡಿದ್ದ ವಂಚಕ ತಾನು ಸಿಬಿಐ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಿಬಿಐನಿಂದ ಬಂಧನವಾಗಿರುವ ಆರೋಪಿಯೊಬ್ಬನ ಬಳಿ ನಿಮ್ಮ ಬ್ಯಾಂಕ್ ಖಾತೆಯ ದಾಖಲೆಗಳು, ಎಟಿಎಂ ಕಾರ್ಡ್ ದೊರೆತಿವೆ. ನಿಮ್ಮನ್ನು ಬಂಧಿಸುತ್ತಿದ್ದೇವೆ ಎಂದು ಬೆದರಿಸಿದ್ದಾನೆ. ತನಿಖಾಧಿಕಾರಿಯ ಹೆಸರಿನಲ್ಲಿ ಕರೆ ಮಾಡಿದ್ದ ಮತ್ತೋರ್ವ ಆರೋಪಿ, ಗುಂಡಪ್ಪ ವಕೀಲ್ ಅವರ ಮಾಹಿತಿ ಹಾಗೂ ಪ್ರಾಪರ್ಟಿ ದಾಖಲೆಗಳನ್ನು ಪಡೆದುಕೊಂಡು ‘ಡಿಜಿಟಲ್ ಅರೆಸ್ಟ್’ ಮಾಡಿರುವುದಾಗಿ ತಿಳಿಸಿದ್ದ.
ಕೋರ್ಟ್ ರೂಂ ಡ್ರಾಮಾ: ಮಾರನೇ ದಿನ ನೀವು ತಪ್ಪಿತಸ್ಥರಲ್ಲ ಎಂದು ನ್ಯಾಯಾಧೀಶರ ಮುಂದೆ ಮುಚ್ಚಳಿಕೆ ಬರೆದುಕೊಡಬೇಕು ಎಂದು ಮತ್ತೋರ್ವ ಆರೋಪಿಯೆದುರು ನಕಲಿ ಕೋರ್ಟ್ ರೂಂ ಸೃಷ್ಟಿಸಿ ವಿಡಿಯೋ ಕರೆ ಮೂಲಕ ಮಾತನಾಡಿಸಿದ್ದು, ವಾದ-ಪ್ರತಿವಾದ ನಡೆಸಿ, ನ್ಯಾಯಾಧೀಶರು, ತಾನು ತಪ್ಪಿತಸ್ಥನಲ್ಲ ಎಂದು ಪ್ರಮಾಣ ಪತ್ರ ಬರೆಯುವಂತೆ ಆದೇಶಿಸಿದ್ದು, ಆರ್ಟಿಜಿಎಸ್ ಮೂಲಕ 10 ಲಕ್ಷ ರೂ.ಗಳನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸೂಚಿಸಿದ್ದಾರೆ. ಈ ಹಣವನ್ನು ತನಿಖೆ ಪೂರ್ಣವಾದ ನಂತರ ನಿಮಗೆ ಮರಳಿಸುತ್ತೇವೆ. ಅಲ್ಲಿಯವರೆಗೂ ನೀವು ತನಿಖೆಗೆ ಸಹಕರಿಸಬೇಕು ಎಂದು ಬೆದರಿಸುತ್ತಾ ಆಗಸ್ಟ್ 18ರವರೆಗೂ ಒಟ್ಟು 8 ದಿನಗಳಲ್ಲಿ ಆರೋಪಿಗಳು ಹಂತಹಂತವಾಗಿ ಒಟ್ಟು 30.99 ಲಕ್ಷ ರೂ ಪಡೆದಿದ್ದಾರೆ. ಇದಾದ ಬಳಿಕ ಯಾವುದೇ ಹಣ ಹಿಂದಿರುಗಿಸದೇ ಆರೋಪಿಗಳು ಸಂಪರ್ಕಕ್ಕೆ ಸಿಗದಿದ್ದಾಗ ತಾವು ವಂಚನೆಗೊಳಗಾಗಿರುವದನ್ನು ಅರಿತ ಗುಂಡಪ್ಪ ವಕೀಲ್ ಅವರು ಸಿಐಡಿಯ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
For More Updates Join our WhatsApp Group :




