ಕಲ್ಪತರು ನಾಡಲ್ಲಿ ಸೆಲ್ಪಿ ತಂದ ಆಪತ್ತು: ಯುವತಿ ಪ್ರಾಣಕ್ಕೇ ಬಂದಿತ್ತು ಕುತ್ತು!

ಕಲ್ಪತರು ನಾಡಲ್ಲಿ ಸೆಲ್ಪಿ ತಂದ ಆಪತ್ತು: ಯುವತಿ ಪ್ರಾಣಕ್ಕೇ ಬಂದಿತ್ತು ಕುತ್ತು!

ತುಮಕೂರು:-  ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ, ಕಟ್ಟೆ ಜಲಾಶಯಗಳು ತುಂಬಿ ಹರಿಯುತ್ತಿದೆ. ಇಂತಹ ಸನ್ನಿವೇಶವನ್ನು ಅನಂದಿಸುವ‌ ಕ್ಷಣಕ್ಕಾಗಿ ಯುವಕ-ಯುವತಿಯರು ಪ್ರಾಣಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ‌.

ಅಂತಹದ್ದೇ ಘಟನೆ ತುಮಕೂರಿನ ಮೈದಾಳ ಕೆರೆಯಲ್ಲಿ ಘಟಿಸಿದೆ. ಸೆಲ್ಪಿ ಹುಚ್ಚಾಟಕ್ಕೆ ಯುವತಿ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದು, ಕೊನೆಗೂ ಬದುಕಿ ಬಂದಿದ್ದಾಳೆ.

ಹೌದು, ಇತ್ತೀಚಿನ ದಿನಗಳಲ್ಲಿ ಸೆಲ್ಫಿ ಹುಚ್ಚಾಟ ಜನರ ಜೀವಕ್ಕೆ ಮುಳುವಾಗುತ್ತಿದೆ. ಈ ಬಗ್ಗೆ ಸಾಕಷ್ಟು ಸುದ್ದಿಯಾಗುತ್ತಿದ್ದರೂ ಯುವ ಜನತೆ ಎಚ್ಚೆತ್ತುಕೊಳ್ಳುತ್ತಿಲ್ಲ. ತುಮಕೂರಿನ ಮಂದಾರಗಿರಿ ಬೆಟ್ಟದಲ್ಲಿನ ಮೈದಾಳ ಕೆರೆ ಕೋಡಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿ ಆಪತ್ತಿಗೆ ಸಿಲುಕಿದ್ದ ಯುವತಿಯನ್ನು ರಕ್ಷಿಸಲಾಗಿದೆ. ಕೋಡಿಯಲ್ಲಿ ಜಾರಿ ಬಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಸೋಮವಾರ ಮುಂದುವರಿಸಲಾಗಿತ್ತು. ಕಾರ್ಯಾಚರಣೆ ಯಶಸ್ವಿಯಾಗಿದೆ. ಯುವತಿ ಬದುಕಿ ಬಂದಿದ್ದಾಳೆ. ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ಯುವತಿ ಬದುಕಿ ಬಂದಿದ್ದಾರೆ.

ಹಂಸ (19) ಆಪತ್ತಿಗೆ ಸಿಲುಕಿದ್ದ ವಿದ್ಯಾರ್ಥಿನಿ. ಗುಬ್ಬಿ ತಾಲೂಕು ಶಿವರಾಂಪುರದ ನಿವಾಸಿ ಸೋಮನಾಥ್‌ ಅವರ ಪುತ್ರಿ ಹಂಸ ಅವರು ನಗರದ ಎಸ್‌ಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾರೆ. ಅವರು ಮೈದಾಳ ಕೆರೆ ಕೋಡಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಿದ್ದಿದ್ದರು. ನೀರಿನಲ್ಲಿ ಜಾರಿ ಹೋಗಿ, ಕಲ್ಲಿನ ಪೊಟರೆಯಲ್ಲಿ ಸಿಲುಕಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ತಡ ರಾತ್ರಿವರೆಗೂ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಆದರೆ ಆಕೆ ಸಿಲುಕಿರುವ ಜಾಗಕ್ಕೆ ಹೋಗುವುದು ಸವಾಲಿನ ಕೆಲಸವಾಗಿತ್ತು. ಹತ್ತಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಭಾನುವಾರ ರಕ್ಷಣಾ ಕಾರ್ಯ ಸ್ಥಗಿತಗೊಳಿಸಿದ್ದ ಅಗ್ನಿಶಾಮಕ ಸಿಬ್ಬಂದಿ, ಸೋಮವಾರ ಘಟನೆ ನಡೆದ ಮಂದಾರಗಿರಿ ಬೆಟ್ಟದ ಬಳಿ ಮೈದಾಳ ಕೆರೆ ಕೋಡಿ ಸ್ಥಳಕ್ಕೆ ಮತ್ತೆ ತೆರಳಿದ್ದು, ಬೆಳಿಗ್ಗೆಯಿಂದ ರಕ್ಷಣಾ ಕಾರ್ಯಾಚರಣೆ ಪುನಾರಂಭಿಸಿದ್ದರು. ಹಂಸ ಅವರ ತಂದೆ ಸೋಮನಾಥ್, ತಾಯಿ ರಾಧಾ ಮತ್ತು ಸಹೊದರ ಹರ್ಷ ಕೂಡ ಸ್ಥಳಕ್ಕೆ ದೌಡಾಯಿಸಿದ್ದರು.

ಕೋಡಿ ಹರಿಯುವ ಭಾಗದಲ್ಲಿ ಸುಮಾರು ಹದಿನೈದು ಅಡಿ ಆಳದಲ್ಲಿರುವ ಕಲ್ಲಿನ ಬಂಡೆ ನಡುವೆ ಹಂಸ ಸಿಲುಕಿರಬಹುದು ಎಂದು ಶಂಕಿಸಲಾಗಿತ್ತು. ಅದೀಗ ನಿಜವಾಗಿದೆ. ಕೋಡಿ ನೀರು ರಭಸದಿಂದ ಹರಿಯುತ್ತಿರುವ ಕಾರಣ, ಆಕೆಯ ಪತ್ತೆ ಹಾಗೂ ರಕ್ಷಣೆಗೆ ತೊಡಕಾಗಿತ್ತು. ಕೆರೆ ಕೊಡಿಯ ನೀರನ್ನು ಬೇರೆಡೆಗೆ ತಿರುಗಿಸುವ ಮೂಲಕ, ಆಕೆ ಸಿಲುಕಿದ್ದ ಕಲ್ಲಿನ ಪೊಟರೆಯ ಜಾಗಕ್ಕೆ ನೀರು ಹೋಗದಂತೆ ನೋಡಿಕೊಂಡು, ಬಳಿಕ ರಕ್ಷಣಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಯಿತು. ಹಂಸ ಮತ್ತು ಅವರ ಸ್ನೇಹಿತೆಯರು ಮಂದಾರಗಿರಿ ಬೆಟ್ಟದ ವೀಕ್ಷಣೆಗೆ ತೆರಳಿದ್ದರು. ಆಗ ಮೈದಾಳ ಕೆರೆ ಕೋಡಿ ಬಳಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ದುರ್ಗಮ ಜಾಗದಲ್ಲಿ ಒಂಟಿಯಾಗಿ ಇಡೀ ರಾತ್ರಿ ಕಳೆದ ಹಂಸಳ ಧೈರ್ಯವನ್ನು ಅನೇಕರು ಪ್ರಶಂಸಿಸಿದ್ದಾರೆ.

Leave a Reply

Your email address will not be published. Required fields are marked *