ಕೋಲಾರ: ಕೋಲಾರ ಜಿಲ್ಲಾ ಕಾಂಗ್ರೆಸ್ ನಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದ್ದು, ಪಕ್ಷದ ಸಭೆಯಲ್ಲಿ ಕಾರ್ಯಕರ್ತರ ನಡುವೆ ಗದ್ದಲ ನಡೆದಿದೆ.
ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿನಾರಾಯಣ ಬಣಗಳ ನಡುವೆ ಸಂಘರ್ಷ ಏರ್ಪಟ್ಟಿದ್ದು, ಕೋಲಾರ ನಗರ ಹೊರವಲಯದ ನಂದಿನಿ ಪ್ಯಾಲೇಸ್’ನಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ, ಕೆಪಿಸಿಸಿ ಉಪಾಧ್ಯಕ್ಷ ಎಂ.ನಾರಾಯಣಸ್ವಾಮಿ ನೇತೃತ್ವದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ಗಲಾಟೆ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿನಾರಾಯಣ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಬೆಂಬಲಿಗರು ಗದ್ದಲ ಎಬ್ಬಿಸಿದರು.ಆರಂಭದಲ್ಲಿ ನಿರ್ಲಕ್ಷ್ಯ ಬಗ್ಗೆ ಕೆ.ಎಚ್.ಮುನಿಯಪ್ಪ ಪರ ಬೆಂಬಲಿಗರು ಧ್ವನಿ ಎತ್ತಿದರು. ನಂತರ ರಮೇಶ್ ಕುಮಾರ್ ಬೆಂಬಲಿಗರು ಅನ್ಯಾಯ ಎಂದು ಕೂಗು ಎಬ್ಬಿಸಿದರು.
ರಮೇಶ್ ಕುಮಾರ್ ಅವರನ್ನು ಜಿಲ್ಲಾ ಕಾಂಗ್ರೆಸ್’ನಿಂದ ನಿರ್ಲಕ್ಷಿಸಲಾಗುತ್ತಿದೆ. ಬ್ಯಾನರ್’ನಲ್ಲಿ ಅವರ ಫೋಟೊ ಕೂಡ ಹಾಕಿಲ್ಲ ಎಂದು ಆಕ್ಷೇಪ ತೆಗೆದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿನಾರಾಯಣ ಅವರನ್ನು ಆಚೆಗೆ ಕಳುಹಿಸಿದರು. ಆಗ ಮಾತಿನ ಚಕಮಕಿ ನಡೆದು ನೂಕಾಟ, ತಳ್ಳಾಟ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ತಿಳಿಗೊಳಿಸಬೇಕಾಯಿತು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕರಾದ ಕೆ.ವೈ.ನಂಜೇಗೌಡ, ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ಕುಮಾರ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಕೋಲಾರ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕೆ.ವಿ.ಗೌತಮ್ ಹಾಗೂ ನೂರಾರು ಕಾರ್ಯಕರ್ತರು ಇದ್ದರು.