ಬೆಂಗಳೂರು : ಮುಖ್ಯಮಂತ್ರಿ ಗಾದಿಯ ತಿರುಕನ ಕನಸು ಕಾಣುತ್ತಿರುವ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಎಂದು ಕರ್ನಾಟಕ ಬಿಜೆಪಿಯೂ ವ್ಯಂಗ್ಯವಾಡಿದೆ.
ಅಧಿಕಾರಕ್ಕೆ ಸಂಬಂಧಿಸಿ ಒಪ್ಪಂದವಾಗಿದ್ದು, ಅದನ್ನು ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ, ಆ ಕುರಿತು ಸಮಯ ಬಂದಾಗ ಹೇಳುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿಕೆ ಕುರಿತು ರಾಜ್ಯ ಬಿಜೆಪಿ ಟ್ವೀಟ್ ಮಾಡಿದ್ದು, ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ, ಇನ್ನೊಂದೆಡೆ ಡಿಕೆ ಶಿವಕುಮಾರ್ ಬಣದ ಮೂಲಕ ಕಾಂಗ್ರೆಸ್ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಡೆಸುತ್ತಿದೆ ಎಂದು ಬಿಜೆಪಿ ಹೇಳಿದೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಡೆಸುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅಧಿಕಾರ ಹಂಚಿಕೆಯ ಒಪ್ಪಂದವಾಗಿತ್ತು ಎಂಬ ಸತ್ಯವನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಇಂದು ಬಹಿರಂಗವಾಗಿ ಹೇಳಿದ್ದಾರೆ. ಡಿಕೆ ಶಿವಕುಮಾರ್ ಯವರ ಸಿಎಂ ಕುರ್ಚಿ ಕನಸನ್ನು ಸಿದ್ದರಾಮಯ್ಯ ಅವರು ಕಮರಿಸುವ ಯತ್ನವನ್ನು ನಿರಂತರವಾಗಿ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಡಿಕೆಶಿ ಅವರಿಗೆ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿತ್ತು. ಶಾಸಕರನ್ನು ತನ್ನ ಅಂಕೆಯಲ್ಲಿಟ್ಟುಕೊಂಡು ಆಟವಾಡುತ್ತಿರುವ ವಲಸಿಗ ಸಿದ್ದರಾಮಯ್ಯ ಅವರಿಂದ ಡಿಕೆಶಿಯ ಸಿಎಂ ಕುರ್ಚಿ ಕನಸು ಕನಸಾಗಿಯೇ ಉಳಿದಿದೆ. ಮುಡಾ ಹಗರಣ ನಡೆದರೂ ಸಿದ್ದರಾಮಯ್ಯರನ್ನು ಸಿಎಂ ಗಾದಿಯಿಂದ ಇಳಿಸಲು ಡಿಕೆಶಿಗೆ ಸಾಧ್ಯವಾಗಿಲ್ಲ. ಇದೀಗ ಸಿದ್ದರಾಮಯ್ಯರವರ ಶಕ್ತಿ ಪ್ರದರ್ಶನಕ್ಕೆ ಹೈಕಮಾಂಡ್ ಮೊರೆ ಹೋಗಿ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಸಿದ್ದು ಮತ್ತು ಡಿಕೆಶಿ ಕುರ್ಚಿ ಕಾಳಗದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಎಂಬುದೇ ಮರೀಚಿಕೆಯಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ರೈತರ ಬಗ್ಗೆ ದ್ವೇಷ, ಹಿಂದೂಗಳ ಕುರಿತು ಆಕ್ರೋಶ ಯಾಕೆ?: ವಿಜಯೇಂದ್ರ ವಕ್ಫ್ ಕಾರಣಕ್ಕೆ ರೈತರಿಗೆ, ಮಠಮಾನ್ಯಗಳಿಗೆ ಅನ್ಯಾಯ ಆಗಬಾರದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ಜಂಟಿ ಸಂಸದೀಯ ಸಮಿತಿ ರಚಿಸಿದ್ದಾರೆ. ಆ ಸಮಿತಿಯು ದೇಶಾದ್ಯಂತ ಪ್ರವಾಸ ಮಾಡಿದೆ. ವಕ್ಫ್ ಕಾಯಿದೆ ತಿದ್ದುಪಡಿಗೆ ಪ್ರಧಾನಿಯವರು ಮುಂದಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆಯಂತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಜಿಲ್ಲಾ ಪ್ರವಾಸ ಮಾಡಿ ಜಿಲ್ಲಾಧಿಕಾರಿಗಳನ್ನು ಕಟ್ಟಿಹಾಕಿ ಸಿಎಂ ಆದೇಶವನ್ನು ತಿಳಿಸಿ, ವಕ್ಫ್ ಮೂಲಕ ಜಮೀನು ಕಿತ್ತುಕೊಳ್ಳಲು ಸೂಚಿಸಿದ್ದಾರೆ ಎಂದು ಆಕ್ಷೇಪಿಸಿದರು. ಸಿದ್ದರಾಮಯ್ಯನವರು ಒಂದು ಕೋಮು, ಒಂದು ಧರ್ಮಕ್ಕೆ ಮುಖ್ಯಮಂತ್ರಿ ಆಗಿದ್ದಾರಾ ಅಥವಾ ನಾಡಿನ ಆರೂವರೆ ಕೋಟಿ ಜನರಿಗೆ ಸಿಎಂ ಆಗಿದ್ದಾರಾ ಎಂಬ ಅನುಮಾನ ಬರುವಂತಾಗಿದೆ ಎಂದು ತಿಳಿಸಿದರು.