ಮೈಸೂರು: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನಿಸರ್ಗ ನಿರ್ಮಿತ ಹಲವು ತಾಣಗಳಿದ್ದು, ಕೆಲವು ಪ್ರಚಾರದ ಕೊರತೆಯಿಂದಾಗಿ ಮತ್ತು ಪಟ್ಟಣದಿಂದ ದೂರವಿರುವ ಕಾರಣದಿಂದಾಗಿ ಪ್ರವಾಸಿಗರು ಅತ್ತ ಸುಳಿಯುವುದು ಅಪರೂಪವಾಗಿದೆ. ಆದರೆ ಈ ತಾಣಗಳು ನಿಸರ್ಗ ಸುಂದರವಾಗಿಯೂ ದೈವಿಕ ತಾಣವಾಗಿಯೂ ಗಮನಸೆಳೆಯುತ್ತಿದ್ದು, ಸ್ಥಳೀಯರು ಇಲ್ಲಿಗೆ ಸದಾ ಭೇಟಿ ದೇವರ ದರ್ಶನ ಪಡೆಯುವುದಲ್ಲದೆ, ಹಬ್ಬದ ಸಂದರ್ಭಗಳಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಜನಜಾನುವಾರುಗಳನ್ನು ರಕ್ಷಿಸುವಂತೆ ಬೇಡಿಕೊಳ್ಳುತ್ತಾರೆ.
ಇಂತಹ ತಾಣಗಳ ಪೈಕಿ ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡು ಬಳಿ ಇರುವ ನಿಸರ್ಗ ಸುಂದರ ಪರಿಸರದ ಹೆಬ್ಬಂಡೆಗಳ ನಡುವೆ ನೆಲೆನಿಂತ ಕೈಲಾಸಬೆಟ್ಟವೂ ನಿಸರ್ಗ ಪ್ರೇಮಿಗಳಿಗೆ, ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ತಾಣವಾಗಿದ್ದು, ಇದೊಂದು ನಿಸರ್ಗ ನಿರ್ಮಿತ ತಾಣವಾಗಿ ಪ್ರಕೃತಿ ಚೆಲುವನ್ನು ಹೊದ್ದು ಕುಳಿತು ಆಸ್ತಿಕ ಮತ್ತು ನಾಸ್ತಿಕರೆನ್ನದೆ ಎಲ್ಲರನ್ನೂ ಸೆಳೆಯುವುದು ಇದರ ವಿಶೇಷತೆಯಾಗಿದೆ
ಸಾಮಾನ್ಯವಾಗಿ ಇತ್ತೀಚೆಗಿನ ವರ್ಷಗಳಲ್ಲಿ ಮಾಮೂಲಿ ತಾಣಗಳಿಗಿಂದ ಪ್ರಕೃತಿ ನಡುವೆ ಇರುವ ತಾಣಗಳನ್ನು ಹುಡುಕಿಕೊಂಡು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ನಗರದ ಗೌಜು ಗದ್ದಲದಲ್ಲಿ ಕಳೆದು ಹೋದವರು ನೆಮ್ಮದಿಯನ್ನು ಅರಸಿಕೊಂಡು ನಿಸರ್ಗ ಸುಂದರ ತಾಣಗಳಿಗೆ ತೆರಳುತ್ತಿದ್ದು ಅಂಥವರಿಗೆ ಕೈಲಾಸಬೆಟ್ಟ ನೆಮ್ಮದಿ ನೀಡುವ ತಾಣವಾಗಿ ಗಮನಸೆಳೆಯುತ್ತಿದೆ. ಒಂದು ವೇಳೆ ಇಲ್ಲಿಗೆ ತೆರಳುವ ಮನಸ್ಸು ಮಾಡಿದರೆ ಅಂತಹವರಿಗೆ ಇಲ್ಲಿನ ನಿಸರ್ಗ ಸುಂದರತೆ ಖಂಡಿತಾ ಮೋಸ ಮಾಡುವುದಿಲ್ಲ.

ಕೈಲಾಸಬೆಟ್ಟಕ್ಕೆ ತೆರಳುವುದು ಹೇಗೆ?
ಕೈಲಾಸಬೆಟ್ಟಕ್ಕೆ ತೆರಳುವ ಪ್ರತಿಯೊಬ್ಬರಿಗೂ ಹಸಿರನ್ನೊದ್ದ ಸುಂದರ ನಿಸರ್ಗ, ಬೆಟ್ಟದ ಮೇಲೆ ಆಳೆತ್ತರ ನಿಂತ ಬೃಹತ್ ಬಂಡೆಕಲ್ಲುಗಳು ಅದರ ನಡುವೆ ವಿರಾಜಮಾನನಾಗಿರುವ ಕಲ್ಲೂರೇಶ್ವರಸ್ವಾಮಿ ಹರಸಲು ನಿಂತಿದ್ದಾನೆಯೋ ಎಂಬಂತೆ ಭಾಸವಾಗುತ್ತದೆ. ಅಲ್ಲಿಂದ ನಿಂತು ನೋಡಿದರೆ ಸುತ್ತಲೂ ಕಂಡು ಬರುವ ದೃಶ್ಯ ಮನಮೋಹಕವಾಗಿರುತ್ತದೆ. ದೂರದ ಬೆಟ್ಟಗಳು, ಪಕ್ಕದಲ್ಲಿಯೇ ನಾಗರಹೊಳೆ ಅಭಯಾರಣ್ಯದ ವೈಭವ ಎಲ್ಲವೂ ಗಮನಾರ್ಹವಾಗಿದೆ.
ಕಲ್ಲೂರಪ್ಪನ ಗುಡ್ಡ ಅರ್ಥಾತ್ ಕೈಲಾಸಬೆಟ್ಟವು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿದ್ದು, ಇಲ್ಲಿಗೆ ಹುಣಸೂರಿನಿಂದ ನಾಗರಹೊಳೆ ರಸ್ತೆಯ ಮೂಲಕ ಹೊಸ ಪೆಂಜಳ್ಳಿ ಗೇಟ್ಗೆ ತೆರಳಿ ಅಲ್ಲಿಂದ ಹನಗೋಡಿಗೆ ಹೋಗುವ ರಸ್ತೆಯಿಂದ ಹರಳಹಳ್ಳಿ ಕಡೆಗೆ ತೆರಳಿದರೆ ಮಾದಳ್ಳಿ ಪಕ್ಕದಲ್ಲೇ ಕಲ್ಲೂರಪ್ಪನ ಗುಡ್ಡ ಸಿಗುತ್ತದೆ. ಇಲ್ಲಿಗೆ ಹನಗೋಡು ಕಡೆಯಿಂದ ಕಿರಂಗೂರು ಮಾರ್ಗವಾಗಿಯೂ ತೆರಳ ಬಹುದಾಗಿದ್ದು, ಹನಗೋಡಿನಿಂದ ಸುಮಾರು ಐದು ಕಿ.ಮೀ. ದೂರವಾಗುತ್ತದೆ.
ಆಮೆಯಂತೆ ಗೋಚರಿಸುವ ಬೃಹತ್ ಬಂಡೆಗಳು
ಕಲ್ಲೂರೇಶ್ವರ ಬೆಟ್ಟವನ್ನೇರಲು ರಸ್ತೆಯಿಂದ ಸುಮಾರು 70 ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು, ಈ ಮೆಟ್ಟಿಲುಗಳನ್ನೇರುತ್ತಾ ಹೋದರೆ ೫೦ಕ್ಕೂ ಹೆಚ್ಚು ತರಾವರಿ ಕಲ್ಲುಬಂಡೆಗಳು ನಮ್ಮನ್ನು ಆಕರ್ಷಿಸುತ್ತದೆ. ಈ ತಾಣದ ಪ್ರಮುಖ ಆಕರ್ಷಣೆಯೇ ಬಂಡೆಗಳಾಗಿದ್ದು, ಬೃಹತ್ ಗಾತ್ರದ ಬಂಡೆಗಳು ಗಮನಸೆಳೆಯುತ್ತವೆ. ಇನ್ನು ಇಲ್ಲಿ ಬೀಸಿ ಬರುವ ತಂಗಾಳಿ ಮೆಟ್ಟಿಲೇರುವಾಗ ಆಗುವ ಆಯಾಸವನ್ನು ತಣಿಸುತ್ತದೆ. ಗುಡ್ಡದ ಮೇಲಿನ ಎರಡು ಬೃಹತ್ ಬಂಡೆಗಳು ಯಾವುದೇ ಆಸರೆಯಿಲ್ಲದೆ ನಿಂತಿದ್ದು, ಮೇಲ್ನೋಟಕ್ಕೆ ಆಮೆಯಂತೆ ಗೋಚರಿಸುತ್ತದೆ.
ಈ ಎರಡು ಬೃಹತ್ ಬಂಡೆಗಳ ನಡುವೆ ಕಲ್ಲೂರೇಶ್ವರನ ಪ್ರತಿಮೆ, ನೂರೊಂದು ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿನ ಮತ್ತೊಂದು ಬಂಡೆಯ ಗುಹೆಯಲ್ಲಿ ಲಿಂಗವಿದ್ದು, ಈ ಲಿಂಗಕ್ಕೆ ನಿತ್ಯ ಪೂಜೆ ನಡೆಯುತ್ತದೆ. ಹಿಂದಿನ ಕಾಲದಲ್ಲಿ ಈ ಕೈಲಾಸ ಬೆಟ್ಟವು ದಟ್ಟಾರಣ್ಯದಿಂದ ಕೂಡಿ, ಹುಲಿಗಳ ಆವಾಸ ತಾಣವಾಗಿತ್ತು. ಆದರೆ ಈಗ ಸುತ್ತಲಿನ ಅರಣ್ಯವೆಲ್ಲ ಸಾಗುವಳಿ ಭೂಮಿಯಾಗಿದೆ. ಆದರೆ ಅವತ್ತು ಹುಲಿಗಳು ಇದ್ದವು ಎಂಬುದಕ್ಕೆ ಇಲ್ಲಿರುವ ಹುಲಿಗುಹೆ ಸಾಕ್ಷಿಯಾಗಿ ನಿಂತಿದೆ. ಒಟ್ಟಾರೆ ಈ ತಾಣ ಸದಾ ಪ್ರಶಾಂತತೆಯನ್ನು ಹೊದ್ದು ಕುಳಿತ ಕಾರಣ ಎಲ್ಲರಿಗೂ ಅಚ್ಚುಮೆಚ್ಚಿನ ತಾಣವಾಗುವುದರಲ್ಲಿ ಎರಡು ಮಾತಿಲ್ಲ.
