ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸಿ.ಪಿ ಯೋಗೇಶ್ವರ್ ರಾಜೀನಾಮೆ ನೀಡಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದ್ದಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ನಡುವೆ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಏನು ಹೇಳಿದ್ರು ..
ಇಂದು ಸಿ.ಪಿ ಯೋಗೇಶ್ವರ್ ಅವರು ಕಾಂಗ್ರೆಸ್ ಗೆ ಬಂದರೆ ಸ್ವಾಗತ ಎಂದು ಸಿಎಂ ಹಾಗೂ ಮಾಜಿ ಸಂಸದ ಸುರೇಶ್ ಅವರು ಹೇಳಿರುವ ಬಗ್ಗೆ ಕೇಳಿದಾಗ, ಈ ವಿಚಾರ ನನಗೆ ಗೊತ್ತಿಲ್ಲ. ಅವರು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಓದಿದ್ದೇನೆ. ಚನ್ನಪಟ್ಟಣದಲ್ಲಿ ಇಂದು ಸಭೆ ನಡೆಸುತ್ತಿದ್ದಾರೆ ಎಂದು ನಮ್ಮ ಮುಖಂಡರು ಕರೆ ಮಾಡಿ ತಿಳಿಸಿದರು ಎಂದರು.
ಬಿಜೆಪಿಯವರು ಕೂಡ ಯೋಗೇಶ್ವರ್ ಅವರ ಜತೆ ಚರ್ಚೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅವರು ಬಿಜೆಪಿ ಬಿಟ್ಟ ನಂತರ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಸಿಎಂ ಜತೆ ಚರ್ಚೆ ಮಾಡುತ್ತೇನೆ. ಈಗ ಅವರು ಬಿಜೆಪಿಯಲ್ಲೇ ಇದ್ದಾರೆ, ಬಿಜೆಪಿಯಲ್ಲಿರುವವರ ಬಗ್ಗೆ ನಾನೇಕೆ ಮಾತನಾಡಲಿ ಎಂದು ತಿಳಿಸಿದರು.