ತುಮಕೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 26 ಮತ್ತು 27ರಂದು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ.
ಕ್ರೀಡಾಕೂಟವನ್ನು ಸೆ.26ರಂದು ಪುರುಷರು ಹಾಗೂ ಸೆ.27ರಂದು ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದು, ನಿಗಧಿಪಡಿಸಿದ ದಿನಾಂಕದಂದು ಬೆಳಿಗ್ಗೆ 9 ಗಂಟೆಗೆ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬಹುದಾಗಿದೆ.
ಈಗಾಗಲೇ ಸಂಘಟಿಸಲಾಗಿರುವ 2024-25ನೇ ಸಾಲಿನ ಜಿಲ್ಲೆಯ ಎಲ್ಲಾ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಾಲಿಬಾಲ್, ಖೋ-ಖೋ, ಕಬಡ್ಡಿ, ಫುಟ್ಬಾಲ್, ಥ್ರೋಬಾಲ್, ಯೋಗ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ, ಅಥ್ಲೆಟಿಕ್ಸ್ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.
ಕ್ರೀಡಾಪಟುಗಳು ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುವ ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಹ್ಯಾಂಡ್ಬಾಲ್, ಟೇಬಲ್ ಟೆನ್ನಿಸ್, ಬ್ಯಾಸ್ಕೆಟ್ಬಾಲ್, ಬಾಲ್ ಬ್ಯಾಡ್ಮಿಂಟನ್, ಯೋಗ, ಟೆನ್ನಿಸ್, ನೆಟ್ಬಾಲ್, ಈಜು ಕ್ರೀಡೆಗಳಲ್ಲಿ ಭಾಗವಹಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್ ತಿಳಿಸಿದ್ದಾರೆ.