ದರ್ಶನ್ಗೆ ಹೀಗಾಯಿತಲ್ಲ ಎಂಬ ನೋವು ಸುದೀಪ್ಗೆ ಕಾಡುತ್ತಿದೆಯಾ? ಕಿಚ್ಚನ ಈ ಮಾತಿನ ಮರ್ಮವೇನು?

ಬೆಂಗಳೂರು: ನಟ ದರ್ಶನ್ ಮತ್ತು ಕಿಚ್ಚ ಸುದೀಪ್ ಸಂಬಂಧದ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಒಂದು ಕಾಲದಲ್ಲಿ ಕುಚುಕು ಗೆಳೆಯರಂತಿದ್ದ ಇಬ್ಬರು ಆನಂತರದಲ್ಲಿ ಮನಸ್ತಾಪಗಳಿಂದ ಬೇರೆ ಬೇರೆಯಾದರು. ಕಿಚ್ಚನ ಸ್ನೇಹ ಬೇಡ ಅಂತ ಮೊದಲು ತಿರಸ್ಕರಿಸಿದ್ದೇ ದರ್ಶನ್. ಆದರೂ ಕೂಡ ದರ್ಶನ್ ಮೇಲೆ ಕಿಚ್ಚನಿಗೆ ಒಳ್ಳೆಯ ಅಭಿಪ್ರಾಯವಿತ್ತು.

ದರ್ಶನ್ ಬಗ್ಗೆ ಯಾರೇ ಪ್ರಶ್ನೆ ಮಾಡಿದರೂ ನಯವಾಗಿ ಮಾತನಾಡುವ ಮೂಲಕ ದರ್ಶನ್ ಮೇಲೆ ನನಗಿನ್ನೂ ಸ್ನೇಹ ಇದೆ ಎಂಬುದನ್ನು ಸಾರಿದ್ದರು.

ಹೊಸಪೇಟೆಯಲ್ಲಿ ದರ್ಶನ್ ಮೇಲೆ ಯಾರೋ ಚಪ್ಪಲಿ ಎಸೆದಾಗಲೂ ಸುದೀಪ್ ಅದನ್ನು ಖಂಡಿಸಿದ್ದರು. ದರ್ಶನ್ ಬಗ್ಗೆ ಯಾವಾಗಲೂ ಒಳ್ಳೆಯ ಮಾತುಗಳನ್ನೇ ಮಾತನಾಡುತ್ತಿದ್ದರು. ಇದೀಗ ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನಕ್ಕೆ ಒಳಗಾಗಿದ್ದು, ಈ ಸುದ್ದಿ ದರ್ಶನ್ ಅಭಿಮಾನಿಗಳಿಗೆ ಮಾತ್ರವಲ್ಲ, ಕನ್ನಡ ಚಿತ್ರರಂಗ ಮತ್ತು ಇಡೀ ರಾಜ್ಯದ ಜನತೆಗೆ ಆಘಾತಕಾರಿಯಾಗಿದೆ. ಈ ಬಗ್ಗೆ ಸುದೀಪ್ ಸಹ ಪ್ರತಿಕ್ರಿಯೆ ನೀಡಿದ್ದು, ಮೃತ ರೇಣುಕಾಸ್ವಾಮಿ, ಆಕೆಯ ಪತ್ನಿ ಮತ್ತು ಹುಟ್ಟುವ ಮಗು ಸೇರಿದಂತೆ ಇಡೀ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದರು.

ಇನ್ನು ದರ್ಶನ್ ವಿಚಾರವಾಗಿ ನೇರವಾಗಿ ಮಾತನಾಡದಿದ್ದರೂ ಎಲ್ಲೋ ಒಂದು ಕಡೆ ಸ್ನೇಹಿತ ದರ್ಶನ್ಗೆ ಹೀಗಾಯಿತಲ್ಲ ಎಂಬ ನೋವು ಸುದೀಪ್ರಲ್ಲಿದೆ ಎಂಬುದು ಅವರು ಆಡಿದ ಮಾತುಗಳಿಂದಲೇ ಗೊತ್ತಾಗುತ್ತದೆ. ನಿಮ್ಮ ಮತ್ತು ದರ್ಶನ್ ನಡುವಿನ ಸ್ನೇಹದ ಬಗ್ಗೆ ಜನರಿಗೆ ಗೊತ್ತಿದೆ. ನೀವಿಬ್ಬರು ಒಟ್ಟಿಗೆ ಕಳೆದಂತಹ ಕ್ಷಣದ ವಿಡಿಯೋಗಳು ಈಗ ವೈರಲ್ ಆಗುತ್ತಿವೆ. ದರ್ಶನ್ ಬಗ್ಗೆ ನೀವು ಯಾವಾಗಲೂ ವಿನಯವಾಗಿಯೇ ಮಾತನಾಡುತ್ತಿದ್ರಿ, ಈ ಸಂದರ್ಭದಲ್ಲಿ ನಿಮ್ಮ ಸ್ನೇಹದ ಬಗ್ಗೆ ಏನು ಹೇಳುತ್ತೀರಾ ಎಂದು ಮಾಧ್ಯಮದವರು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಸುದೀಪ್ ಕೊಟ್ಟ ಉತ್ತರ ಕೇಳಿದ್ರೆ ದರ್ಶನ್ಗೆ ಹೀಗಾಯಿತ್ತಲ್ಲ ಎಂಬ ನೋವು ಅವರಿಗೂ ಕಾಡುತ್ತಿದೆ ಎಂಬುದು ಗೊತ್ತಾಗುತ್ತದೆ.

ಹಾಗಾದ್ರೆ ಸುದೀಪ್ ಹೇಳಿದ್ದೇನು ಎಂದು ನೋಡುವುದಾದರೆ, ನಾವು ಕೆಲ ಸಂದರ್ಭಗಳಲ್ಲಿ ಆಸ್ಪತ್ರೆಗೆ ಹೋಗ್ತಿವಲ್ಲ, ಆಗ ನಮ್ಮಲ್ಲಿ ಏನೇ ನೋವು ಕಾಣಿಸಿಕೊಂಡರು ಏನು ಆಗದಿರಲಿ ಎಂದು ಬೇಡಿಕೊಳ್ಳುತ್ತೇವೆ. ವರದಿಯಲ್ಲಿ ಏನು ಆಗಿಲ್ಲ ಅಂತ ಬಂದಾಗ ಖುಷಿ ಖುಷಿಯಾಗಿ ಮನೆಗೆ ಹೋಗುತ್ತೇವೆ. ಒಂದು ವೇಳೆ ಏನಾದರೂ ತೊಂದರೆ ಆಗಿದೆ ಅಂತ ಬಂದಾಗ ಚಿಕಿತ್ಸೆ ಪಡೆಯುತ್ತೇವೆ. ನಾನೀಗ ಅದೇ ಹಂತದಲ್ಲಿದ್ದೇನೆ ಎಂದು ಸುದೀಪ್ ಹೇಳುತ್ತಾರೆ. ಅಲ್ಲದೆ, ನ್ಯಾಯವೇ ಬೇರೆ, ಸ್ನೇಹವೇ ಬೇರೆ ಹಾಗೂ ಸಂಬಂಧವೇ ಬೇರೆ ಎಂದು ಹೇಳಿದ್ದಾರೆ.

ಸುದೀಪ್ ಅವರು ಮಾರ್ಮಿಕವಾಗಿ ಹೇಳಿದರು ಕೂಡ ದರ್ಶನ್ಗೆ ಈ ರೀತಿ ಆಯಿತಲ್ಲ ಎಂಬ ನೋವು ಅವರಲ್ಲಿದೆ. ಆದರೂ ಸ್ನೇಹವನ್ನು ಪಕ್ಕಕ್ಕಿಟ್ಟು ಒಂದು ಕುಟುಂಬಕ್ಕಾದ ಅನ್ಯಾಯದ ವಿರುದ್ಧ ಸುದೀಪ್ ಧ್ವನಿ ಎತ್ತಿದ್ದಾರೆ. ಚಿತ್ರರಂಗದ ಮೇಲೂ ಕೆಟ್ಟ ಹೆಸರಿದೆ. ಇಲ್ಲಿ ರೇಣುಕಾಸ್ವಾಮಿ ಕುಟುಂಬ ಮತ್ತು ಚಿತ್ರರಂಗ ಸೇರಿದಂತೆ ಎಲ್ಲರಿಗೂ ನ್ಯಾಯ ಸಿಗಲಿ. ನ್ಯಾಯದ ಮೇಲೆ ನಂಬಿಕೆ ಹುಟ್ಟುವಂತಹ ತೀರ್ಪು ಬರಲಿ ಎಂದು ಸುದೀಪ್ ಆಶಯ ವ್ಯಕ್ತಪಡಿಸಿದರು.

ಏನಿದು ರೇಣುಕಸ್ವಾಮಿ ಕೊಲೆ ಪ್ರಕರಣ?

ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್ ಬ್ಲಾಕ್ ಮಾಡಿದ್ದರೂ ಹೊಸ ಅಕೌಂಟ್ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್ಗೆ ಹೇಳಿದ್ದರು. ಈ ವಿಚಾರ ದರ್ಶನ್ಗೆ ತಿಳಿದಿದೆ. ರೇಣುಕಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.

ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.

Leave a Reply

Your email address will not be published. Required fields are marked *