ಚಂದನವನದಲ್ಲಿ ಕಂಟೆಂಟ್ ಆಧಾರಿತ ಸಿನಿಮಾಗಳು ಬರುತ್ತಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಈ ಹಿನ್ನೆಲೆ, ಟ್ರೇಲರ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಗೆಲ್ಲುವ ಸೂಚನೆ ನೀಡಿರುವ ‘ನಾಟ್ ಔಟ್’ ಚಿತ್ರತಂಡ ಸಿನಿಪ್ರೇಮಿಗಳಿಗೆ ಭರ್ಜರಿ ಆಫರ್ ಒಂದನ್ನು ನೀಡಿದೆ.
ಈ ಹಿಂದೆ ಪುರುಷೋತ್ತಮ ಪ್ರಸಂಗ ಎಂಬ ಚಿತ್ರದ ಮೂಲಕ ಭರವಸೆ ಮೂಡಿಸಿರೋ ಅಜಯ್ ಪೃಥ್ವಿ ಹಾಗೂ ಲವ್ ಮಾಕ್ಟೈಲ್ ಖ್ಯಾತಿಯ ರಚನಾ ಇಂದರ್ ತೆರೆ ಹಂಚಿಕೊಂಡಿರುವ ಈ ಚಿತ್ರ ಕಂಟೆಂಟ್ ಜೊತೆಗೆ ಸ್ಟಾರ್ ಕಾಸ್ಟ್ ವಿಚಾರಕ್ಕೆ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಪ್ರೇಕ್ಷಕರಿಗೆ ಸಿನಿಮಾದ ಗುಣಮಟ್ಟ ತಿಳಿಸುವ ಉದ್ದೇಶದಿಂದ ಫಸ್ಟ್ ಹಾಫ್ ಸಿನಿಮಾವನ್ನು ಉಚಿತವಾಗಿ ನೋಡಲು ಅವಕಾಶ ಮಾಡಿಕೊಡುತ್ತಿದೆ. ಸೆಕೆಂಡ್ ಹಾಫ್ ಸಿನಿಮಾ ನೋಡುವ ಕುತೂಹಲ ಇದ್ದರೆ ಮಧ್ಯಂತರದಲ್ಲಿ ಟಿಕೆಟ್ ಖರೀದಿ ಮಾಡಿ ಸಿನಿಮಾ ನೋಡುವ ಆಫರ್ ಅನ್ನು ನೀಡುವ ಮೂಲಕ ಹೊಸತನಕ್ಕೆ ನಾಂದಿ ಹಾಡುತ್ತಿದೆ.
ಈ ಬಗ್ಗೆ ಮಾತನಾಡಿದ ನಾಟ್ ಔಟ್ ಚಿತ್ರದ ನಿರ್ದೇಶಕ ಅಂಬರೀಷ್ ಎಂ ಕನ್ನಡ ಸಿನಿಮಾಗಳಿಗೆ ಅದರಲ್ಲೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಬರುತ್ತಿಲ್ಲ ಎಂಬ ಮಾತುಗಳಿವೆ. ಮಲ್ಟಿಪ್ಲೆಕ್ಸ್ಗಳಲ್ಲಿ ಪರಭಾಷೆ ಸಿನಿಮಾಗಳು ಹೆಚ್ಚಾಗಿ ಪ್ರದರ್ಶನಗೊಳ್ಳುತ್ತಿರುವ ಹಿನ್ನೆಲೆ ಕನ್ನಡ ಸಿನಿಮಾಗಳಿಗೆ ಮಲ್ಟಿಫ್ಲೆಕ್ಸ್ನಲ್ಲಿ ಹೆಚ್ಚು ಶೋಗಳನ್ನು ಕೊಡುತ್ತಿಲ್ಲ ಎಂಬ ಆರೋಪವಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಉಳಿಸಿಕೊಳ್ಳಬೇಕಿದೆ. ಈ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಕಂಟೆಂಟ್ ಸಿನಿಮಾ ಯಾವುದು? ಎಂಟರ್ಟೈನ್ಮೆಂಟ್ ಸಿನಿಮಾ ಯಾವುದು ಅನ್ನೋ? ಗೊಂದಲ ಕೂಡ ಪ್ರೇಕ್ಷಕರಲ್ಲಿರುತ್ತದೆ. ಜೊತೆಗೆ, ಸಿನಿಪ್ರಿಯರು ಒಂದು ಚಿತ್ರದ ಟ್ರೇಲರ್, ಫಸ್ಟ್ ಹಾಫ್ ಸಿನಿಮಾ ನೋಡಿ ಇಷ್ಟೇ ಸಿನಿಮಾ ಅಂತಾ ಡಿಸೈಡ್ ಮಾಡ್ತಾರೆ.
ಇನ್ನೂ, 90ರ ದಶಕದಲ್ಲಿ ಟ್ರೇಲರ್ ಎಂಬ ಕಾನ್ಸೆಪ್ಟ್ ಇರಲಿಲ್ಲ. ಡೈರೆಕ್ಟ್ ಆಗಿ ಸಿನಿಮಾ ನೋಡುತ್ತಿದ್ದರು. 2000ರ ಈಚೆಗೆ ಟ್ರೇಲರ್, ಮೋಶನ್ ಪಿಕ್ಚರ್, ಸಾಂಗ್ ರಿಲೀಸ್ ಎಂಬ ಕಾನ್ಸೆಪ್ಟ್ ಶುರುವಾಯ್ತು. 2024ರಲ್ಲಿ ಫಸ್ಟ್ ಸಿನಿಮಾವನ್ನು ಉಚಿತವಾಗಿ ನೋಡಿ, ಸೆಂಕೆಂಡ್ ಹಾಫ್ ಅನ್ನು ದುಡ್ಡು ಕೊಟ್ಟು ವೀಕ್ಷಿಸಿ ಎಂಬ ಕಾನ್ಸೆಪ್ಟ್ ಬಂದಿದೆ.
ಇದು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮಾತ್ರ. ಮಲ್ಟಿಫ್ಲೆಕ್ಸ್ ಥಿಯೇಟರ್ಗಳಿಗೆ ಅನ್ವಯಿಸುವುದಿಲ್ಲ. ಈಗಾಗಲೇ 30 ಚಿತ್ರಮಂದಿರಗಳಲ್ಲಿ ಮಾತುಕತೆ ನಡೆಸಿದ್ದೇವೆ. ಯಾವ ಯಾವ ಚಿತ್ರಮಂದಿರ ಅನ್ನೋದನ್ನು ವಿತರಕರು, ಪ್ರೊಡಕ್ಷನ್ ಹೌಸ್ ಹಾಗೂ ಚಿತ್ರಮಂದಿರದ ಮಾಲೀಕರ ಜೊತೆ ಮಾತುಕಥೆ ಆಗುತ್ತಿದೆ ಎಂದು ನಿರ್ದೇಶಕ ಅಂಬರೀಷ್ ಹೇಳಿದರು. ಈ ಸಂದರ್ಭ ನಾಯಕ ನಟ ಅಜಯ್ ಪೃಥ್ವಿ, ಕಲಾವಿದರಾದ ಪ್ರಶಾಂತ್ ಸಿದ್ಧಿ, ಕಾಕ್ರೋಜ್ ಸುಧೀ ನಿರ್ದೇಶಕರಿಗೆ ಸಾಥ್ ನೀಡಿದರು.