ನಟ ಯಶ್ ಈ ವರ್ಷವೂ ತಮ್ಮ ಅಭಿಮಾನಿಗಳಿಗೆ ಬೇಸರದ ಸುದ್ದಿ ನೀಡಿದ್ದಾರೆ. ಹೊಸ ವರ್ಷಕ್ಕೆ ಶುಭ ಹಾರೈಸಿದ ನಟ ಯಶ್ ತಮ್ಮ ಹುಟ್ಟುಹಬ್ಬಕ್ಕೆ ಯಾರನ್ನು ಭೇಟಿ ಮಾಡಲು ಆಗುವುದಿಲ್ಲ ಎಂದು ಪ್ರೀತಿಯಿಂದಲೇ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರೋ ನಟ ಯಶ್, ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ ಎಂದಿದ್ದಾರೆ.
ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಪ್ಲೆಕ್ಸ್, ಬ್ಯಾನರ್ಗಳ ಯಾವುದೇ ಆಡಂಬರ ಬೇಡ. ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರಬೇಡಿ. ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ಮಾಡಿ. ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ. ಆದಷ್ಟು ಬೇಗ ನಿಮ್ಮನ್ನೆಲ್ಲಾ ಭೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ ಎಂದು ಶುಭ ಹಾರೈಸಿದ್ದಾರೆ.
ಯಶ್ ಸದ್ಯ ಟಾಕ್ಸಿಕ್ ಚಿತ್ರದ ಕೆಲಸದಲ್ಲಿ ಇದ್ದಾರೆ. ಡೈರೆಕ್ಟರ್ ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರ ದೊಡ್ಡಮಟ್ಟದಲ್ಲಿಯೇ ತಯಾರಾಗುತ್ತಿದೆ. ಒಂದು ರೀತಿಯ ಹಾಲಿವುಡ್ ಸಿನಿಮಾ ಇದಾಗಿದೆ. ಇದರ ನಿರ್ಮಾಣ ಕಾರ್ಯವೂ ಹೆಚ್ಚಿನ ಶ್ರಮ ಬೇಡುವಂತಿದೆ.
ನಟ ಯಶ್ ಈ ವರ್ಷ ಜನವರಿ 8 ರಂದು ತಮ್ಮ 39ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಅದು ಎಂದಿನಂತೆ ಅಭಿಮಾನಿಗಳ ಜೊತೆಗೆ ಆಗುತ್ತಿಲ್ಲ ಅನ್ನೋ ಬೇಸರದ ಸಂಗತಿ.