ವಿಶ್ವ ಕಂಡ ಮಹಾನ್ ವಿಜ್ಞಾನಿ ಡಾ.ಎಪಿಜೆ ಅಬ್ದುಲ್ ಕಲಾಂ..!

ವಿಶ್ವ ಕಂಡ ಮಹಾನ್ ವಿಜ್ಞಾನಿ ಡಾ.ಎಪಿಜೆ ಅಬ್ದುಲ್ ಕಲಾಂ..!

ಲೇಖನೆ : ರಾಜು ಭೂಶೆಟ್ಟಿ, ಹುಬ್ಬಳ್ಳಿ

ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಅಕ್ಟೋಬರ್ 15, 1931ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಅವುಲ್ ಫಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ. ತಂದೆಯ ಹೆಸರು ಜೈನುಲಾಬ್ದೀನ್, ತಾಯಿಯ ಹೆಸರು ಆಶೀಮಾ. ಇವರ ತಂದೆಯವರು ದೋಣಿಯ ಚಲಾಯಿಸುವ ವೃತ್ತಿ ಮಾಡುತ್ತಿದ್ದರು. ತಾಯಿ ಗೃಹಿಣಿಯಾಗಿದ್ದರು.

ಅವರ ವಿದ್ಯಾರ್ಥಿ ಜೀವನವು ತೀವ್ರವಾದ ಕಷ್ಟದಿಂದ ಕೂಡಿತ್ತು. ಎಷ್ಟೊಂದು ಕಷ್ಟವಿತ್ತೆಂದರೆ ಅಬ್ದುಲ್ ಕಲಾಂರವರು ಮನೆಮನೆಗೆ ತೆರಳಿ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದರು. ಅವರು ಕಷ್ಟವನ್ನು ಎದುರಿಸಿ ಉನ್ನತ ಮಟ್ಟದ ಸಾಧನೆಯನ್ನು ಮಾಡಿರುವುದು ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಸಾಧಿಸಬೇಕೆಂಬ ಮನಸ್ಸಿರುವವರಿಗೆ ಯಾವುದೇ ಕಷ್ಟಗಳು ಅಡ್ಡಿಯಾಗಲಾರವು ಎಂಬ ಮಾತನ್ನು ಅಕ್ಷರಷಃ ಜಗತ್ತಿಗೆ ತೋರಿಸಿಕೊಟ್ಟವರು ಅಬ್ದುಲ್ ಕಲಾಂರವರು. ಜೀವನದ ಎಲ್ಲ ಸವಾಲುಗಳನ್ನು ಸಾಧನೆಯ ಮೆಟ್ಟಿಲುಗಳಾಗಿ ಪರಿವರ್ತಿಸಿದರು.

ಶ್ವಾರ್ಟ್ಜ ಮೆಟ್ರಿಕ್ಯುಲೇನ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮುಗಿಸಿದರು. ತಿರುಚನಾಪಳ್ಳಿಯಲ್ಲಿ ಸೇಂಟ್ ಜೋಸೆಫ್ಸನಲ್ಲಿ ಕಾಲೇಜು ಶಿಕ್ಷಣ ಮುಗಿಸಿದರು. ನಂತರ 19

54ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಭೌತಶಾಸ್ತç ಪದವಿಯನ್ನು ಪಡೆದರು. ಮದ್ರಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಿಕ್ಷಯಾನ ಎಂಜಿನಿಯರಿAಗ್ ಓದಿದರು. ಭಾರತದ 11ನೇ ರಾಷ್ಟçಪತಿಯಾಗಿ ಜುಲೈ-25, 2002 ರಿಂದ 2007ರವರೆಗೆ ಸೇವೆ ಸಲ್ಲಿಸಿದರು.

ರಾಜಕೀಯದಿಂದ ಹೊರತಾದ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿದ್ದರು. ಈ ಕಾರಣಕ್ಕಾಗಿಯೇ ಜನರ ರಾಷ್ಟçಪತಿ ಎಂದು ಜನರಿಂದಲೇ ಕರೆಯಲ್ಪಟ್ಟರು. ಭಾರತದ ರಾಷ್ಟçಪತಿಯಾಗಿ ಜನಮನ ಗೆದ್ದಿದ್ದ ಇವರು ಮಿಸೈಲ್ ಮ್ಯಾನ್ ಎಂದೇ ಪ್ರಖ್ಯಾತರಾಗಿದ್ದರು. ವಿಂಗ್ಸ ಆಫ್ ಫೈರ್ ಎಂಬುದು ಅವರ ಆತ್ಮಕಥೆಯಾಗಿದೆ. ಇಂಡಿಯಾ ಮೈ ಡ್ರೀಮ್, ಇಂಡಿಯಾ-2020 ಗ್ರಂಥಗಳಲ್ಲಿ ಭವ್ಯ ಭಾರತದ ನಿರ್ಮಾಣ ಹೇಗಿರಬೇಕು? ಎಂಬುದನ್ನು ತಿಳಿಸಿದ್ದಾರೆ. ಇಗ್ನೆöÊಟೆಡ್ ಮೈಂಡ್ಸ, ಟರ್ನಿಂಗ್ ಪಾಯಿಂಟ್ಸ, ಮೈ ಜರ್ನಿ ಇವು ಕೂಡ ಅವರು ಬರೆದ ಕೆಲವು ಪುಸ್ತಕಗಳಾಗಿವೆ. ಅವರು ಎಲ್ಲಿಗೆ ಹೋದರು ಮಕ್ಕಳ ಜೊತೆಗೆ ಸಂವಾದ ನಡೆಸುತ್ತಿದ್ದರು.

ಮಕ್ಕಳೆಂದರೆ ಅವರಿಗೆ ತುಂಬಾ ಪ್ರೀತಿ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಸಂವಾದ ನಡೆಸುವ ಅವರ ಗುಣ ತುಂಬಾ ವಿಶಿಷ್ಟವಾಗಿತ್ತು. ಹೀಗಾಗಿಯೇ ಅವರನ್ನು ನಮ್ಮ ದೇಶವು ಅತ್ಯುತ್ತಮ ಶಿಕ್ಷಕರೆಂದು ನೆನಪಿಸಿಕೊಳ್ಳುತ್ತದೆ. ಡಾ.ಎಪಿಜೆ ಅಬ್ದುಲ್ ಕಲಾಂರವರ ಕೊಡುಗೆಗಳನ್ನು ನೋಡುವುದಾದರೆ ದೇಶದ ಎರಡು ಪ್ರಮುಖ ಸಂಶೋಧನಾ ಸಂಸ್ಥೆಗಳಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನೇತೃತ್ವ ವಹಿಸಿದ್ದರು.

ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನವನ್ನು (ಎಸ್‌ಎಲ್‌ವಿ) ಅಭಿವೃದ್ಧಿಪಡಿಸುವ ಯೋಜನೆಗೆ ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಸುಮಾರು 10 ವರ್ಷಕ್ಕೂ ಹೆಚ್ಚು ಕಾಲ ಸ್ವದೇಶಿ ನಿರ್ಮಿತ ಸ್ಯಾಟಲೈಟ್ ಉಡಾವಣೆ ವಾಹಕದ ಯೋಜನೆಯ ಮೇಲೆ ಸತತವಾಗಿ ನಿರ್ದೇಶಕರಾಗಿ ಕೆಲಸ ಮಾಡಿದರು. ಜುಲೈ1980ರಲ್ಲಿ ದೇಶದ ಎಸ್‌ಎಲ್‌ವಿ-3 ರೋಹಿಣಿ ಉಪಗ್ರಹವನ್ನು ಭೂಮಿಯ ಸಮೀಪ ಕಕ್ಷೆಯಲ್ಲಿ ಯಶಸ್ವಿಯಾಗಿ ನಿಯೋಜಿಸುವಲ್ಲಿ ಶ್ರಮಿಸಿದರು.

ವಿಶೇಷವಾಗಿ ಪೋಖ್ರಾನ್-2 ಪರಮಾಣು ಪರೀಕ್ಷೆಗಳ ಮುಖ್ಯಸ್ಥರಾಗಿಯೂ ಅದರ ಯಶಸ್ಸಿಗಾಗಿ ಶ್ರಮಿಸಿದರು. 1992ರಿಂದ 1999ರವರೆಗೆ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ನೇತೃತ್ವದಲ್ಲಿ ಹಲವು ಪರಮಾಣು ಪರೀಕ್ಷೆಗಳ ನಡೆದವು. ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದರು. ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನವಾದ ಅಕ್ಟೋಬರ್-15 ನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಅವರ ಮಹತ್ತರ ಕೊಡುಗೆಗಳನ್ನು ಗಮನಿಸಿ 2010ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ಘೋಷಿಸಿತು.

  ಜಗತ್ತಿನಾದ್ಯಂತ ವಿದ್ಯಾರ್ಥಿಗಳಿಗೆ ಅವರು ಹಲವಾರು ಸ್ಫೂರ್ತಿಯ ಸಂದೇಶಗಳನ್ನು ನೀಡಿದ್ದಾರೆ. ಅವುಗಳಲ್ಲಿ ಕೆಲವುಗಳನ್ನು ಉಲ್ಲೇಖಿಸುವುದಾದರೆ ‘ನಾವು ಭರವಸೆಗಳನ್ನು ಕಳೆದುಕೊಳ್ಳಬಾರದು. ಹಾಗೆ ನಮ್ಮನ್ನು ಸೋಲಿಸಲು ಸಮಸ್ಯೆಗಳನ್ನು ಸಹ ಒಳನುಸುಳಲು ಬಿಡಬಾರದು’. ‘ಕನಸು ಕಾಣಿ, ಕನಸು ಆಲೋಚನೆಗಳಾಗಿ ಪರಿವರ್ತನೆಗಳ್ಳುತ್ತವೆ. ಆಲೋಚನೆಗಳು ಕ್ರಿಯೆಯಾಗಿ ಫಲಿತಾಂಶ ನೀಡುತ್ತವೆ.’ ‘ಮನುಷ್ಯನಿಗೆ ಜೀವನದಲ್ಲಿ ಕಷ್ಟಗಳು ಇರಬೇಕು. ಕಾರಣ ಅವುಗಳು ಯಶಸ್ಸನ್ನು ಸಂಭ್ರಮಿಸಲು ಅಗತ್ಯ.’

 ಡಾ.ಎಪಿಜೆ ಅಬ್ದುಲ್ ಕಲಾಂರವರಿಗೆ ಹಲವಾರು ಪ್ರಶಸ್ತಿಗಳು ದೊರೆತಿದ್ದು ಅವುಗಳಲ್ಲಿ ರಾಮಾನುಜನ್ ಪ್ರಶಸ್ತಿ, ಇಂದಿರಾ ಗಾಂಧಿ ಪ್ರಶಸ್ತಿ, ವೀರ್ ಸಾವರ್ಕರ್ ಪ್ರಶಸ್ತಿಗಳು ಸೇರಿವೆ. 1981ರಲ್ಲಿ ಪದ್ಮಭೂಷಣ, 1990ರಲ್ಲಿ ಪದ್ಮ ವಿಭೂಷಣ, 1997ರಲ್ಲಿ ಭಾರತ ರತ್ನ ನೀಡಿ ಗೌರವಿಸಲಾಯಿತು. ಭಾರತ ಮತ್ತು ವಿದೇಶದಲ್ಲಿರುವ ವಿಶ್ವವಿದ್ಯಾಲಯಗಳಿಂದ ಅವರು 48 ಗೌರವ ಡಾಕ್ಟರೇಟ್‌ಗೆ ಪಾತ್ರರಾಗಿದ್ದಾರೆ.  ಒಟ್ಟಾರೆಯಾಗಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ, ವಿಜ್ಞಾನ ಕ್ಷೇತ್ರದ ಬೆಳವಣಿಗೆಗಾಗಿ, ರಾಷ್ಟçದ ಸಮಗ್ರ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು.

2015ರ ಜುಲೈ 27ರಂದು ಶಿಲ್ಲಾಂಗ್‌ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಭಾಷಣ ಮಾಡುತ್ತಿದ್ದಾಗ ಹೃದಯಾಘಾತದಿಂದ ವಿಧಿವಶರಾದರು. ಡಾ.ಎಪಿಜೆ ಅಬ್ದುಲ್ ಕಲಾಂರವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಹಲವಾರು ಕೊಡುಗೆಗಳ ಮೂಲಕ ಅವರು ಇನ್ನೂ ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂದು ಹೇಳಬಹುದು. ದೇಶ ಅವರ ಕೊಡುಗೆಗಳನ್ನು ಸದಾಕಾಲ ಸ್ಮರಿಸುತ್ತದೆ.

Leave a Reply

Your email address will not be published. Required fields are marked *