ಗದಗ- ಗದಗ ಭಾಗದಲ್ಲಿ ಹೊಸದೊಂದು ಸಮಸ್ಯೆ ತಲೆದೂರಿದ್ದು. ಇಲ್ಲಿನ ಜನ ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತುಂಗಭದ್ರಾ ನದಿಯಲ್ಲಿ ನೀರು ಸಾಕಷ್ಟಿದೆ. ಅಲ್ಲದೇ ಮುಂಗಾರು ಪೂರ್ವ ಮಳೆಯು ಉತ್ತರ ಕರ್ನಾಟಕ ಭಾಗದಲ್ಲಿ ಉತ್ತಮವಾಗಿದೆ. ಆದರೆ ನೀರು ಇದ್ದರೂ ಇಲ್ಲಿನ

ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಇದೆ. ಕಳೆದ ಎರಡು ತಿಂಗಳಿನಿಂದ ಈ ಭಾಗದಲ್ಲಿ ನೀರು ಪೂರೈಕೆಯಾಗದೆ ಸಮಸ್ಯೆ ಎದುರಾಗಿದೆ. ಗದಗ-ಬೆಟಗೇರಿ ನಗರಸಭೆಯಲ್ಲೂ ಈ ಹಿಂದೆ ಈ ಭಾಗದಲ್ಲಿ ನೀರು ಪೂರೈಕೆ ಹಾಗೂ ಕಲುಷಿತ ನೀರು ಪೂರೈಕೆ ಮಾಡುವುದನ್ನು ತಡೆಯಬೇಕು ಎನ್ನುವ ನಿಟ್ಟಿನಲ್ಲಿ ಗಂಭೀರ ಚರ್ಚೆಗಳು ನಡೆದಿದ್ದವು. ಇದರ ಹೊರತಾಗಿಯೂ ಈ ಭಾಗದಲ್ಲಿ ನೀರು ಪೂರೈಕೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಗದಗ-ಬೆಟಗೇರಿ ನಗರಸಭೆಯ ಅಧಿಕಾರಿಗಳು ವಿಫಲರಾಗಿದ್ದಾರೆ.
ಅವಳಿ ನಗರದಲ್ಲಿ ಬಿರು ಬಿಸಿಲು ಜೋರಾಗಿದೆ. ಇದರ ನಡುವೆ ನೀರು ಪೂರೈಕೆ ಸಹ ವಿಳಂಬವಾಗುತ್ತಿರುವುದು ಜನರನ್ನು ಸಂಕಷ್ಟಕ್ಕೆ ದೂಡಿದೆ. ನೀರು ಪೂರೈಕೆ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಇಲ್ಲಿನ ಜನ ಪ್ರತಿಭಟನೆ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದಲೂ ನೀರು ಪೂರೈಕೆ ಮಾಡದ ನಗರಸಭೆ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕುಡಿಯುವುದಕ್ಕೆ ಹಾಗೂ ಬಳಸುವುದಕ್ಕೆ ನೀರಿನ ಸಮಸ್ಯೆ ಆಗಿದೆ ಎಂದು ಹೇಳಿದ್ದಾರೆ. ಇಲ್ಲಿನ ಹುಡ್ಕೋ ಕಾಲೋನಿ ಭಾಗದಲ್ಲಿ ನೀರು ಪೂರೈಕೆ ಆಗುತ್ತಿಲ್ಲ. ಇಲ್ಲಿನ ಸಮೀಪದ ಹುಲಕೋಟಿ ಗ್ರಾಮದಲ್ಲಿ ನೀರು ಪೂರೈಕೆ ಚೆನ್ನಾಗಿದೆ. ಆದರೆ ನಮ್ಮ ಭಾಗದಲ್ಲಿ ಯಾಕೆ ನೀರು ಸರಬರಾಜು ಮಾಡುತ್ತಿಲ್ಲ ಎಂದು ಜನ ಪ್ರಶ್ನಿಸುತ್ತಿದ್ದಾರೆ. ನಾಯಿಗಳ ಹಾವಳಿ ಹೆಚ್ಚಳ: ಇನ್ನು ಗದಗ ಅವಳಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಾಯಿಗಳ ಹಾವಳಿ ಮಿತಿ ಮೀರಿದೆ. ಸಣ್ಣ ಮಕ್ಕಳು ಹಾಗೂ ಹಿರಿಯರ ಮೇಲೆ ನಾಯಿಗಳು ದಾಳಿ ಮಾಡುತ್ತಿದ್ದು, ನಾಯಿಗಳ ನಿಯಂತ್ರಣ ಮಾಡಬೇಕು ಎಂದು ಇಲ್ಲಿನ ಜನ ಒತ್ತಾಯಿಸಿದ್ದಾರೆ. ಈ ಭಾಗದಲ್ಲಿ ನಾಯಿಗಳು ಮಕ್ಕಳನ್ನು ಕಚ್ಚಿ ಗಾಯಗೊಳಿಸುತ್ತಿವೆ. ಈಚೆಗೆ ಇಲ್ಲಿ ಮಹಿಳೆಯೊಬ್ಬರು ನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದರು. ಇದಾದ ಮೇಲೆ ನಗರಸಭೆಯು ಕೆಲವೊಂದು ಕ್ರಮಗಳನ್ನು ತೆಗೆದುಕೊಂಡಿದೆ.
ರಸ್ತೆ ಗುಂಡಿ ಮುಚ್ಚುವುದಕ್ಕೆ ಆಗ್ರಹ: ಗದಗ-ಬೆಟಗೇರಿ ಅವಳಿ ನಗರದ ವಿವಿಧ ಭಾಗದಲ್ಲಿ ಮೂಲಸೌಕರ್ಯ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಮೂಲಸೌಕರ್ಯ ವ್ಯವಸ್ಥೆ ಇಲ್ಲದೆ ಜನ ಪರದಾಡುತ್ತಿದ್ದಾರೆ. ಇಲ್ಲಿನ ಹಲವು ರಸ್ತೆಗಳಲ್ಲಿ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ, ರಸ್ತೆಗುಂಡಿಗಳನ್ನು ಮುಚ್ಚಿ ಜನ ಹಾಗೂ ವಾಹನ ಸವಾರರಿಗೆ ಆಗುತ್ತಿರುವ ಸಮಸ್ಯೆಗಳನ್ನು ತಪ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ರಸ್ತೆಗುಂಡಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸಹಜವಾಗಿಯೇ ಈ ಭಾಗದಲ್ಲಿ ಧೂಳು ಸಹ ಹೆಚ್ಚಾಗುತ್ತಿದೆ. ಒಂದು ಕಡೆ ನೀರು ಪೂರೈಕೆ ಸಮಸ್ಯೆ ಹಾಗೂ ಮತ್ತೊಂದು ಕಡೆ ಮೂಲಸೌಕರ್ಯ ಸಮಸ್ಯೆಯಿಂದ ಜನ ಹೈರಾಣಾಗಿದ್ದಾರೆ.