ಮೈಸೂರು: ಪ್ರತಿ ವರ್ಷದಂತೆ ಈ ವರ್ಷವು ಯುವ ದಸರಾಕ್ಕೆ ಮೈಸೂರು ಸಜ್ಜಾಗಿದ್ದು, ಸಂಗೀತ ರಸಸಂಜೆಯಲ್ಲಿ ಸಂಗೀತ ಕ್ಷೇತ್ರದ ಹಿರಿಯ ಕಲಾವಿದರಾದ ಇಳಿಯರಾಜ, ಎ.ಆರ್.ರೆಹಮಾನ್ ಮತ್ತು ಶ್ರೇಯಾ ಘೋಷಾಲ್ ಸೇರಿದಂತೆ ಹಲವರು ಸಂಗೀತ ಸುಧೆ ಹರಿಸಲಿದ್ದಾರೆ.
ಯುವ ದಸರಾ ಸಮಿತಿಯಿಂದ ಅ.6ರಿಂದ 10ರವರೆಗೆ ಯುವ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ. ಅ.6ರಂದು ಅಶ್ವಿನಿ ಪುನೀತ್ ರಾಜ್‌ಕುಮರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಾಲ್ಕು ದಿನಗಳ ಕಾಲ ಸಂಜೆ 6ರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 6ರಂದು ಬಾಲಿವುಡ್ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್, ಅ.7ರಂದು ಸಂಗೀತ ಸಂಯೋಜಕ ರವಿ ಬಸ್ರೂರು, ಅ.8ರಂದು ಖ್ಯಾತ ರಾಪರ್ ಬಾದ್ ಷಾ, ಅ.9ರಂದು ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಮತ್ತು ಅ.10ರಂದು ಸಂಗೀತ ಸಂಯೋಜಕ, ನಿರ್ದೇಶಕ ಇಳಯರಾಜ ಮತ್ತು ಅವರ ತಂಡ ಪ್ರೇಕ್ಷಕರಿಗೆ ಸಂಗೀತ ರಸಸಂಜೆ ಉಣಬಡಿಸಲಿದ್ದಾರೆ.
ಯುವ ದಸರಾ ಕಾರ್ಯಕ್ರಮಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸುಮಾರು ಒಂದು ಲಕ್ಷ ಜನ ವೀಕ್ಷಿಸಬಹುದಾಗಿದೆ. ಅಲ್ಲದೇ, ವೀಕ್ಷಣೆಗೆ ಟಿಕೆಟ್ ಆಧರಿತ ಪ್ರತ್ಯೇಕ ಆಸನ ವ್ಯವಸ್ಥೆಯನ್ನೂ ಮಾಡಲಾಗುತ್ತಿದ್ದು, ಆಸನ ಕಾಯ್ದಿರಿಸಲು ಆನ್‌ಲೈನ್ ಮೂಲಕ ಟಿಕೆಟ್ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಧಿಕೃತ ಜಾಲತಾಣ www.mysoredasara.gov.in ಹಾಗೂ ಬುಕ್ ಮೈ ಶೋ ಮೂಲಕ ಸೆ.27ರಿಂದ ಟಿಕೆಟ್ ಖರೀದಿಸಬಹುದು.
ಕಾರ್ಯಕ್ರಮ ವೀಕ್ಷಕರಿಗೆ ಕಾಯ್ದಿರಿಸಲಾಗುವ ವೀಕ್ಷಕರ ಗ್ಯಾಲರಿ-1ರ ವೇದಿಕೆ ಸಮೀಪದ ಟಿಕೆಟ್ ಬೆಲೆ ರೂ.8,000 ಹಾಗೂ ವೀಕ್ಷಕರ ಗ್ಯಾಲರಿ-2 ಕ್ಕೆ ರೂ.5,000 ನಿಗದಿಪಡಿಸಲಾಗಿದೆ. ಒಂದು ಟಿಕೆಟ್ನಲ್ಲಿ ಒಬ್ಬರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತಿದೆ.