ಪ್ರಜಾ ಪ್ರಭುತ್ವದಲ್ಲಿ ಜನಾಭಿಪ್ರಾಯವೂ ಮಹತ್ವದ ಪ್ರಭಾವೀ ಶಕ್ತಿಯಾಗಿದ್ದು ಅದನ್ನು ರೂಪಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ಜಾಗೃತಿ ಮೂಡುತ್ತಿರುವುದು ಆಶಾದಾಯಕ ಬೆಳವಣಿಗೆ. ಸಂಘ ಶಕ್ತಿಯನ್ನು ಬಲ್ಲ ಸಂಘಟನೆಗಳು ಜನ ಶಕ್ತಿಯನ್ನು ಪ್ರದರ್ಶಿಸಿ ಹಕ್ಕೊತ್ತಾಯಗಳನ್ನು ಮಂಡಿಸಿ ತಮ್ಮ ಬೇಡಿಕೆಗಳನ್ನು ಆಡಳಿತಕ್ಕೆ ಮುಟ್ಟಿಸುವ ಕಾರ್ಯದಲ್ಲಿ ಯಶಸ್ವಿಯಾಗುತ್ತಿರುವುದನ್ನು ಜನಸಾಮಾನ್ಯರು ಗಮನಿಸಬೇಕಾಗಿದೆ. ಅಸಂಘಟಿತ ಕಾರ್ಮಿಕರಗೆ ಸಂಬಂಧಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಕಾರ್ಮಿಕ ವಿರೋಧಿ ಸೂಚನೆಯೊಂದು ಪ್ರಕಟವಾದ ಮರುದಿನವೇ ಸಾವಿರ ಸಾವಿರ ಸಂಖ್ಯೆಯಲ್ಲಿ ಬೀದಿ ಗಿಳಿದು ದೊಡ್ಡ ಮಟ್ಟದ ಪ್ರತಿಭಟನೆಯನ್ನು ನಡೆಸಿದ ಗಾರ್ಮೆಂಟ್ ನೌಕರರು ಕೇಂದ್ರದ ಸೂಚನೆ ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಮಾಡಿದ ಘಟನೆ ಒಂಬತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿತ್ತು. ಸರ್ಕಾರದ ಗಮನ ಸೆಳೆಯುವುದಕ್ಕೆ ದೊಡ್ಡ ಮಟ್ಟದಲ್ಲಿ ಬೀದಿಗಿಳಿದು ಶಾಂತಿಯುತ ಪ್ರತಿಭಟನೆ ನಡೆಸುವುದು ಪರಿಣಾಮಕಾರಿ ಎಂಬುದು ಹಿಂದಿನ ಅನೇಕ ಸಂದರ್ಭಗಳಲ್ಲಿ ಸಾಬೀತಾಗಿರುವ ವಿದ್ಯಮಾನ.
ಸುತ್ತಮುತ್ತ ಅನ್ಯಾಯವಾಗುತ್ತಿದ್ದರೆ, ಅಕ್ರಮಗಳು ನಡೆಯುತ್ತಿದ್ದರೆ ಅದರ ವಿರುದ್ಧ ದನಿ ಎತ್ತುವುದು, ಸಂಬಂಧಿಸಿದವರ ಗಮನ ಸೆಳೆಯುವುದು ಜವಾಬ್ದಾರಿಯುತ ನಾಗರಿಕರ ಕರ್ತವ್ಯವಾಗಿದ್ದು ಅದನ್ನು ನಿರ್ವಹಿಸುವ ಜಾಗೃತಿ ಮೂಡುವುದು ಎಲ್ಲ ಸಂದರ್ಭಗಳಲ್ಲಿ ಅವಶ್ಯಕವಾಗಿದೆ. ನಾಡಿನ ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದ್ದು, ಅದರಲ್ಲಿ ಸರ್ಕಾರದಲ್ಲಿ ಇರುವವರ ಕೈವಾಡವೂ ಇದ್ದರೆ ಸಂಘಟಿತರಾಗಿ ದನಿ ಎತ್ತುವ ಮೂಲಕ ಅಂಥ ಅನ್ಯಾಯ, ಅಕ್ರಮಗಳನ್ನು ತಡೆದು ಯಶಸ್ವಿಯಾದ ಪ್ರಕರಣಗಳೂ ದಾಖಲಾಗಿವೆ. ಇಂಥ ಸಂದರ್ಭಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆಯನ್ನು ನ್ಯಾಯಾಲಯಗಳೂ ಸ್ವಯಂ ಪ್ರೇರಣೆಯಿಂದ ಇಲ್ಲವೇ ಸಾಮಾನ್ಯ ದೂರುಗಳಿಂದ ಕೈಗೆತ್ತಿಕೊಂಡು ವಿಚಾರಣೆ ನಡೆಸಿದ ನಿದರ್ಶನಗಳೂ ಇವೆ.
ಕುಡಿಯುವ ನೀರು, ಸಂಪರ್ಕಕ್ಕೆರಸ್ತೆ, ನೈರ್ಮಲ್ಯ ರಕ್ಷಣೆಗೆ ಚರಂಡಿ ವ್ಯವಸ್ಥೆಯಂಥ ನಾಗರಿಕ ಸೌಲಭ್ಯದ ಬೇಡಿಕೆಗಳಾದ ಸಾರ್ವಜನಿಕ ಸಮಸ್ಯೆಗಳಿರಲಿ, ನಿರ್ದಿಷ್ಟ ಸಮೂಹ ಗಳಿಗೆ ಅನ್ವಯಿಸುವ ಕುಂದುಕೊರತೆಗಳಿರಲಿ ಮನವಿ ಪತ್ರಗಳಿಗೆ ಸ್ಪಂದಿರುವ ಸಂವೇದನೆ ಯನ್ನು ಕಳೆದುಕೊಂಡು ಜಡವಾಗಿರುವ ಆಡಳಿತ ವ್ಯವಸ್ಥೆಗೆ ಪ್ರತಿಭಟನೆ ಪ್ರದರ್ಶನಗಳು ಮಾತ್ರಚುರುಕು ಮುಟ್ಟಿಸುತ್ತವೆ ಎಂಬುದು ಅನುಭವ ವೇದ್ಯವಾಗಿರುವುದರಿಂದ ಆ ಮಾರ್ಗವನ್ನು ಜನರು ಅನುಸರಿಸುವುದು ಅನಿವಾರ್ಯ ಮಾರ್ಗವೆನಿಸಿದೆ. ಮಹಾತ್ಮ ಗಾಂಧೀಜಿ ಸತ್ಯಕ್ಕಾಗಿ ಆಗ್ರಹಿಸುವ ಮಾರ್ಗವಾಗಿ ರೂಪಿಸಿದ್ದ ಸತ್ಯಾಗ್ರಹ’ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹತ್ವದ ಹೋರಾಟ ವಿಧಾನವಾಗಿದ್ದರೂ ಸ್ವಾತಂತ್ರ್ಯಾನಂತರ ಆಗಿನ ಎಲ್ಲ ಮೌಲ್ಯಗಳ ಕುಸಿತದಂತೆ ಮೊದಲಿನ ವರ್ಚಸ್ಸನ್ನು ಕಳೆದು ಕೊಂಡಿದ್ದರೂ ಜನಾಭಿಪ್ರಾಯವನ್ನು ಮೂಡಿಸುವಲ್ಲಿ ಇಂದಿಗೂ ಪ್ರಸ್ತುತವಾಗಿರುವುದನ್ನು ನೆನಪಿನಲ್ಲಿಡಬೇಕು.
ಈಚಿನ ವರ್ಷಗಳಲ್ಲಿ ರಾಜಕೀಯ ವ್ಯಕ್ತಿಗಳಿಗಾಗಿ ದೊಡ್ಡ ಮಟ್ಟದಲ್ಲಿ ಸೇರಿಸಿ ಬೆಂಬಲ ಸೂಚಿಸುವುದು, ಅವರಿಗೆ ಅನ್ಯಾಯವಾದಾಗ ಪ್ರತಿಭಟನಾ ಪ್ರದರ್ಶನ ನಡೆಸುವುದು ಪರಿಣಾಮ ಕಾರಿಯಾಗುತ್ತಿದೆ. ಜನಾಭಿಪ್ರಾಯ ವ್ಯಕ್ತ ಪಡಿಸುವುದಕ್ಕೆ ಸಾರ್ವಜನಿಕ ಪ್ರತಿಭಟನೆ ಸೂಕ್ತ ಮಾರ್ಗವೂ ಆಗಿದೆ. ಜನರ ನಿತ್ಯದ ಚಟುವಟಿಕೆಗಳಿಗೆ ಅಡ್ಡಿಪಡಿಸದಂತೆ ನಗರದ ಒಂದುಕಡೆ ಸೇರಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿ ನಂತರ ಅದರ ಲಿಖಿತ ಮನವಿಯನ್ನು ಸರ್ಕಾರಕ್ಕೆ ಸ್ಥಳೀಯ ಆಡಳಿತ ಮುಖ್ಯಸ್ಥರ ಮೂಲಕ ಸರ್ಕಾರಕ್ಕೆ ಕಳಿಸುವುದು ಅಭಿಪ್ರಾಯ ಮೂಡಿಸುವ ವಿಧಾನವೂ ಆಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ರಾಜ್ಯದ ಮುಖ್ಯಮಂತ್ರಿಯವರ ವಿರುದ್ಧ ರಾಜಕೀಯ ಸೇಡಿನ ಕ್ರಮವಾಗಿ ಸುಳ್ಳು ಆರೋಪಗಳನ್ನು ಹೊರಿಸಿ ಕಿರುಕುಳ ನೀಡಲು ನಡೆಯುತ್ತಿರುವ ಪ್ರಯತ್ನಗಳ ವಿರುದ್ಧ ಅಹಿಂದ ಸಂಘಟನೆ ಹೋರಾಟ ಆರಂಭಿಸಿರುವುದು ಅನ್ಯಾಯದ ವಿರುದ್ಧ ಹೋರಾಟದ ಸೂಕ್ತ ಕ್ರಮವಾಗಿದೆ.
ಹಿಂದುಳಿದ ವರ್ಗಕ್ಕೆ ಸೇರಿದ ನಾಯಕರು ಮುಖ್ಯಮಂತ್ರಿ ಸ್ಥಾನಕ್ಕೆ ಬಂದಾಗಲೆಲ್ಲ ಬಲಿಷ್ಠ ಸಮುದಾಯಗಳು ಅಸಹನೆಯಿಂದ ತಂತ್ರಗಳನ್ನು ಹೆಣೆದು ನಾಯಕರ ತೇಜೋವಧೆಗೆ ಯತ್ನಿಸುವುದು, ಸುಳ್ಳು ಆರೋಪಗಳನ್ನು ಹೊರಿಸಿ ವಿಚಾರಣೆಯ ನೆಪದಲ್ಲಿ ಅಧಿಕಾರದಿಂದ ಇಳಿಸುವ ಕುತಂತ್ರ ನಡೆಸುತ್ತಿರುವುದನ್ನು ಪ್ರತಿಭಟನೆಯ ಮೂಲಕ ವಿರೋಧಿಸಲಾಗುತ್ತಿದೆ ಎಂದು ಸಂಘಟನೆಯ ಪ್ರಮುಖರು ಹೇಳಿ ಕೊಂಡಿದ್ದಾರೆ. ಅಹಿಂದ ಸಂಘಟನೆ ಹುಬ್ಬಳ್ಳಿಯಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಗೌರವ ಸಲ್ಲಿಸಿ ತಮ್ಮ ಪ್ರತಿಭಟನೆಯ ಉದ್ದೇಶವನ್ನು ಸಾರ್ವಜನಿಕವಾಗಿ ಶ್ರುತಪಡಿಸಿ ರಾಜಧಾನಿಗೆ ಜಾಥಾ ಹೊರಡುವ ಉದ್ದೇಶ ಇಟ್ಟುಕೊಂಡಿದೆ. ಹಿಂದುಳಿದ ವರ್ಗಗಳ ನಾಯಕರನ್ನು ಪದಚ್ಯುತಗೊಳಿಸಲು ಹುನ್ನಾರ ನಡೆಸುತ್ತಿ ರುವುದರ ವಿರುದ್ಧ ಅಹಿಂದ ನಾಯಕರನ್ನು ಉಳಿಸಿ’ ಎಂಬ ಘೋಷವಾಕ್ಯದ ಅಡಿಯಲ್ಲಿ ಜಾಥಾ ಹಮ್ಮಿಕೊಂಡಿರುವ ಅಹಿಂದ’ ತನ್ನಗುರಿ ಸಾಧನೆಗಾಗಿ ರಾಜ್ಯದಾದ್ಯಂತ ಅಹಿಂದ ವರ್ಗಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಬಲಿಷ್ಠ ಸಮುದಾಯಗಳ ರಾಜಕೀಯ ಕುತಂತ್ರಕ್ಕೆ ಉತ್ತರ ನೀಡುವ ಪ್ರಯತ್ನ ಮಾಡಬೇಕಿದೆ. ಹಿಂದುಳಿದ ಸಮುದಾಯದ ನಾಯಕರು ಸ್ವಂತ ವರ್ಚಸ್ಸಿನಿಂದ ಜನ ಬೆಂಬಲವನ್ನು ಪಡೆದುಅಧಿಕಾರ ಸ್ಥಾನಕ್ಕೆ ಬಂದಾಗಲೆಲ್ಲ ಅವರನ್ನು ಇಳಿಸಲು ನಡೆಸುವ ದ್ವೇಷ ರಾಜಕಾರಣವನ್ನು ಜನಾಭಿಪ್ರಾಯದ ಮೂಲಕ ಹಿಮ್ಮೆಟ್ಟಿಸಲು ಸಂಘಟನಾ ಶಕ್ತಿಯನ್ನು ಪರಿಣಾಮ ಕಾರಿಯಾಗಿ ಪ್ರದರ್ಶಿಸಬೇಕಿದೆ.