ಸಂಪಾದಕೀಯ || ಅಕ್ರಮ ಕಟ್ಟಡಗಳ ತೆರವು : ಸುಪ್ರೀಂ ಮಾರ್ಗ ಸೂಚಿಯ ಅವಶ್ಯಕತೆ

ಸಂಪಾದಕೀಯ || ಅಕ್ರಮ ಕಟ್ಟಡಗಳ ತೆರವು : ಸುಪ್ರೀಂ ಮಾರ್ಗ ಸೂಚಿಯ ಅವಶ್ಯಕತೆ

ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿತಲೆಎತ್ತುವಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧದಲ್ಲಿ ವಿವಾದಗಳು ಹಲವು ದಶಕಗಳಿಂದಲೂ ಇದ್ದು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಂದಿವೆ. ಅನಧಿಕೃತವಾಗಿ ನಿರ್ಮಾಣಗೊಂಡ ಕಟ್ಟಡಗಳಿಗೆ ಅನ್ವಯವಾಗುವಂತೆ ದೇಶದ ಎಲ್ಲಾ ಧರ್ಮ ಹಾಗೂ ಸಮುದಾಯಗಳ  ನಾಗರಿಕರಿಗೆ ಅನ್ವಯವಾಗುವ ಏಕರೂಪದ ಮಾರ್ಗ ಸೂಚಿಯನ್ನು ರೂಪಿಸುವ ಇಂಗಿತವನ್ನು ಸುಪ್ರೀಂಕೋರ್ಟ್ ವ್ಯಕ್ತಪಡಿಸಿದೆ. ಇದು ಅನೇಕ ದಶಕಗಳಿಂದ ಇರುವ ನೂರಾರು ಅನಧಿಕೃತ ನಿರ್ಮಾಣಗಳ ಕುರಿತ ವಿವಾದಗಳಿಗೆ ಪರಿಹಾರ ನೀಡುವ ನಿರೀಕ್ಷೆಯನ್ನು ಮೂಡಿಸಿದೆ.

 ಅಕ್ರಮ ಕಟ್ಟಡಗಳನ್ನು ಧ್ವಂಸಗೊಳಿಸುವುದಕ್ಕೆ ನ್ಯಾಯಾಲಯ ನೀಡುವ ನಿರ್ದೇಶನ ದೇಶದ ಎಲ್ಲಾ ಧಾರ್ಮಿಕ ಸಮುದಾಯಗಳಿಗೂ ಅನ್ವಯಿಸುತ್ತದೆ. ನಮ್ಮದು ಜಾತ್ಯತೀತ ರಾಷ್ಟ್ರವಾಗಿರುವುದರಿಂದ ನ್ಯಾಯಾಲಯ ಹೊರಡಿಸುವ ಆದೇಶ ಎಲ್ಲಾ ನಾಗರಿಕರಿಗೂ, ಸಂಸ್ಥೆಗಳಿಗೂ ಸಮಾನವಾಗಿ ಅನ್ವಯವಾಗುತ್ತದೆ; ನಿರ್ದಿಷ್ಟ ಸಮುದಾಯಕ್ಕೆ ಅಲ್ಲ ಎಂಬುದನ್ನು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರುಇರುವ ನ್ಯಾಯಪೀಠ ಮೊಕದ್ದಮೆಯೊಂದರ ಸಂಬಂಧದಲ್ಲಿ ಹೇಳಿದೆ.

ಒಂದು ನಿರ್ದಿಷ್ಟಧರ್ಮಕ್ಕೆ ವಿಭಿನ್ನ ಕಾನೂನು ಇರಬಾರದುಎಂದು ಗಮನಿಸಿದ ನ್ಯಾಯಪೀಠ, ಸಾರ್ವಜನಿಕ ರಸ್ತೆಗಳು, ಸರ್ಕಾರಿ ಭೂಮಿಅಥವಾ ಅರಣ್ಯಗಳಲ್ಲಿ ಯಾವುದೇಅನಧಿಕೃತ ನಿರ್ಮಾಣಗಳು ತಲೆಯೆತ್ತುವಂತಿಲ್ಲ; ಅಂಥ ನಿರ್ಮಾಣಗಳನ್ನು ರಕ್ಷಿಸಬಾರದುಎಂದು ಸ್ಪಷ್ಟಪಡಿಸಿದೆ. ಸಾರ್ವಜನಿಕ ಸುರಕ್ಷತೆಯು ಅತ್ಯುನ್ನತವಾಗಿದೆ. ರಸ್ತೆ, ಜಲಮೂಲಗಳು ಅಥವಾರೈಲು ಹಳಿಗಳನ್ನು ಅತಿಕ್ರಮಿಸುವ ಯಾವುದೇ ಧಾರ್ಮಿಕ ರಚನೆಯನ್ನು ಕೆಡವಿ ಹಾಕಬೇಕು ಎಂದು ಸೂಚಿಸಲಾಗಿದೆ.

ಅನಧಿಕೃತ ಕಟ್ಟಡಗಳನ್ನು ನೆಲ ಸಮಗೊಳಿಸುವ ಕಾರ್ಯಾಚರಣೆ ಮತ್ತು ಅತಿ ಕ್ರಮಣ ವಿರೋಧಿ ಕಾರ್ಯಾಚರಣೆಗಳಿಗೆ ಕೋರ್ಟ್ ನೀಡುವ ನಿರ್ದೇಶನಗಳು ಧರ್ಮವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಅನ್ವಯಿಸುತ್ತದೆ. ನ್ಯಾಯಾಲಯದ ಆದೇಶಗಳು ಯಾವುದೇ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಣ ಮಾಡುವವರಿಗೆ ಸಹಾಯ ಮಾಡದಂತೆ ನೋಡಿಕೊಳ್ಳುವುದಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಜನಸಂಖ್ಯೆಯ ಹೆಚ್ಚಳದಿಂದ ನಗರಗಳಲ್ಲಿ ಬಡಾವಣೆಗಳು ಬೆಳೆಯುತ್ತಾ ವಾಣಿಜ್ಯ ಚಟುವಟಿಕೆಗಳು ವಿಸ್ತರಣೆಯಾಗುತ್ತಿದ್ದಂತೆ  ಸಾರ್ವಜನಿಕ  ಸ್ಥಳಗಳನ್ನು ಅತಿಕ್ರಮಿಸಿ ಕೊಳ್ಳುವ ಪ್ರವೃತ್ತಿಯೂ ಹೆಚ್ಚಾಗುತ್ತಿದೆ. ಜನರ ಧಾರ್ಮಿಕ ಭಾವನೆಗಳನ್ನು ದುರುಪಯೋಗ ಪಡಿಸಿಕೊಳ್ಳುವ ದುಷ್ಟತಂತ್ರವಾಗಿ ಸಾರ್ವಜನಿಕ ರಸ್ತೆಗಳ ಬದಿಯಲ್ಲಿ, ಉದ್ಯಾನಗಳ ಮೂಲೆಗಳಲ್ಲಿ ದೇವರ ವಿಗ್ರಹಗಳನ್ನು ರಾತ್ರೋರಾತ್ರಿ ನೆಲೆಗೊಳಿಸಿ ಅಲ್ಲಿಗುಡಿ ನಿರ್ಮಿಸಿ ಅಲ್ಲಿನ ಸಾರ್ವಜನಿಕ ಸ್ಥಳವನ್ನು ವಶಪಡಿಸಿಕೊಳ್ಳುವ ಹುನ್ನಾರ ಬಹುತೇಕಎಲ್ಲಾ ನಗರ ಪ್ರದೇಶಗಳಲ್ಲಿಯೂ ನಡೆಯುತ್ತಿರುವುದು ಸಹಜ ನಡವಳಿಕೆಯಾಗಿ ಮಾನ್ಯವಾಗಿರುವುದನ್ನು ಗಮನಿಸಬೇಕು. ಸಾರ್ವಜನಿಕ ರಸ್ತೆಗಳ ಬದಿಯಲ್ಲಿ ಸಣ್ಣದಾಗಿ ಆರಂಭವಾಗುವ ಗುಡಿಗಳು ಕ್ರಮೇಣ ದೊಡ್ಡದಾಗಿ ರಸ್ತೆಯ ವಿಸ್ತರಣೆಗೂ ಅಡ್ಡಿಯಾಗಿರುವ ನೂರಾರು ಪ್ರಕರಣಗಳು ವರದಿಯಾಗಿವೆ. ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಂದಿವೆ.

      ನಗರ ಪ್ರದೇಶಗಳಲ್ಲಿ ಭೂಮಿಯ ಬೆಲೆ ದಿನದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಜಾಗವನ್ನು ಅಕ್ರಮವಾಗಿ ಕಬಳಿಸುವುದಕ್ಕೆ ದೇವಾಲಯ ಇಲ್ಲವೇ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿ ಅದನ್ನು ಭಕ್ತರ ಧಾರ್ಮಿಕ ಭಾವನೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ಮುಂದೆ ಮಾಡಿಕೊಂಡು ಸ್ವಾಧೀನಪಡಿಸಿಕೊಳ್ಳುವ ಹುನ್ನಾರಗಳನ್ನೂ ನ್ಯಾಯಾಲಯಗಳು ಗಮನಿಸಿವೆ. ನಗರ ವ್ಯಾಪ್ತಿಯ ಕೆರೆಗಳ ಅಚ್ಚುಕಟ್ಟು ಪ್ರದೇಶಗಳು ಮತ್ತು ಕೊಳಚೆ ನೀರು ಸರಾಗವಾಗಿ ಹರಿಯಲು ರೂಪಿಸಿದ್ದ ರಾಜಕಾಲುವೆಗಳ ಜಾಗದಲ್ಲಿಯೂ ಖಾಸಗಿಯವರು ಅಕ್ರಮ ಕಟ್ಟಡಗಳನ್ನು ನಿರ್ಮಿಸಿರುವುದು ಇಂಥ ಅನಧಿಕೃತ ಕಟ್ಟಡ ನರ್ಮಾಣ  ವ್ಯಾಪ್ತಿಯಲ್ಲಿ  ಬರುತ್ತವೆ. ಸರ್ಕಾರಿ ಜಾಗವೆಂದರೆ ಅದು ಜನರಿಗೆ ಸೇರಿದ ಸ್ವತ್ತು. ಅದು ಎಲ್ಲರಿಗೂ ಮುಕ್ತವಾಗಿ ಉಪಯೋಗಕ್ಕೆ ಬರುವಂತೆ ನೋಡಿ ಕೊಳ್ಳುವ ಹೊಣೆಗಾರಿಕೆ ಸರ್ಕಾರದ್ದಾಗಿದೆ.ಸರ್ಕಾರದಲ್ಲಿ ಇರುವವರು ಅದಕ್ಕೆ ಕುಮ್ಮಕ್ಕು ನೀಡುವಂತಿದ್ದ ಸಂದರ್ಭಗಳಲ್ಲಿ ನ್ಯಾಯಾಲಯಗಳು ಸಾರ್ವಜನಿಕ ಸ್ಥಳಗಳ ರಕ್ಷಣೆಗೆ ಕ್ರಮ ವಹಿಸಬೇಕಾಗುತ್ತದೆ.

     ಸರ್ಕಾರಿ ಭೂಮಿಯಲ್ಲಿಅಕ್ರಮವಾಗಿ ವಸತಿ ಸಮುಚ್ಚಯಗಳನ್ನು ನಿರ್ಮಿಸಿ ಅದನ್ನು ಮಾರಾಟ  ಮಾಡಿ ಹಣ ಗಳಿಸುವ ಪ್ರಕರಣಗಳೂ ನಗರಗಳಲ್ಲಿ ನಡೆಯುತ್ತಿವೆ. ಸಾರ್ವಜನಿಕ ಸ್ಥಳದ ಅತಿಕ್ರಮಣದಲ್ಲಿ ಸ್ಥಳೀಯಾಡಳಿತಗಳು ಪರೋಕ್ಷವಾಗಿ ಕಾರಣವಾಗುತ್ತಿರುವ  ಸಂದರ್ಭಗಳೂ ವಿಫುಲವಾಗಿವೆ.  ಸ್ಥಳೀಯ ಆಡಳಿತದ ಅಧಿಕಾರಿಗಳ ನೆರವು, ಕುಮ್ಮಕ್ಕು ಇಲ್ಲದಿದ್ದರೆ ಸರ್ಕಾರಿ ಜಾಗದಲ್ಲಿ ಅನಧಿಕೃತ ವ್ಯಕ್ತಿಗಳು ಕಾರ್ಯಾಚರಣೆ ನಡೆಸುವುದಾಗಲೀ ಕಟ್ಟಡಗಳನ್ನು ನಿರ್ಮಿಸುವುದಾಗಲೀ ಸಾಧ್ಗವಾಗು ವುದಿಲ್ಲ, ಈ ಅಂಶವನ್ನು ಸಾರ್ವಜನಿಕರು ಮರೆತಿಲ್ಲ.

     ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿತಲೆ ಎತ್ತುವ ನಿರ್ಮಾನಗಳನ್ನು ತೆರವುಗೊಳಿಸುವುದಕ್ಕೆ ಏಕರೂಪದ ಮಾರ್ಗ ಸೂಚಿಯನ್ನು ರೂಪಿಸುವ ಸಂದರ್ಭದಲ್ಲಿ ಅಂಥ ಅಕ್ರಮ  ಕಟ್ಟಡಗಳ ನಿರ್ಮಾಣಕ್ಕೆ ಪರೋಕ್ಷವಾಗಿ ನೆರವಾಗುವ, ಕುಮ್ಮಕ್ಕು ಕೊಡುವ, ಪ್ರಚೋದಿಸುವ ವ್ಯಕ್ತಿಗಳಿಗೂ ಕಠಿಣ ಕಾನೂನು ಕ್ರಮಗಳು ಅನ್ವಯವಾಗುವುದನ್ನೂ ಮರೆಯಬಾರದು. ಅವರಿಗೂ  ಕಾಯ್ದೆ  ಪ್ರಕಾರ  ಶಿಕ್ಷೆಯಾಗುವುದರ ಬಗ್ಗೆಯೂ ನ್ಯಾಯಾಲಯ ಗಮನ ಹರಿಸುವುದು ಅಗತ್ಯ.

Leave a Reply

Your email address will not be published. Required fields are marked *