ರಾಜ್ಯ ಬಿಜೆಪಿಯಲ್ಲಿ ಬಣ ಪೈಪೋಟಿ: ವರದಿ ನೀಡಲು ಹೈಕಮಾಂಡ್ ಸೂಚನೆ

ರಾಜ್ಯ ಬಿಜೆಪಿಯಲ್ಲಿ ಬಣ ಪೈಪೋಟಿ: ವರದಿ ನೀಡಲು ಹೈಕಮಾಂಡ್ ಸೂಚನೆ

ಬೆಂಗಳೂರು: ರಾಜ್ಯ ಬಿಜೆಪಿ ಘಟಕದಲ್ಲಿನ ಬಣ ಬಡಿದಾಟಕ್ಕೆ ಅಂತ್ಯ ಹಾಕಲು ಹೈಕಮಾಂಡ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಪಕ್ಷದ ಬೆಳವಣಿಗೆಗಳ ಕುರಿತು ವಾಸ್ತವಾಂಶಗಳ ಆಧಾರದ ಮೇಲೆ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರಿಗೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ, ತರುಣ್ ಚುಗ್ ಅವರು ಕೋರ್ ಕಮಿಟಿ ಸಭೆಯಲ್ಲಿ ಪ್ರಮುಖ ಮುಖಂಡರೊಂದಿಗೆ ಚರ್ಚಿಸಿ ಪಕ್ಷದ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

ರಾಜ್ಯ ಬಿಜೆಪಿ ನಾಯಕತ್ವದ ವಿರುದ್ದ ವಾಗ್ದಾಳಿ ನಡೆಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿರುವ ಬಿಜೆಪಿ ಹೈಕಮಾಂಡ್, ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳದೇ ಅವರಿಗೆ ಎಚ್ಚರಿಕೆ ನೀಡಿ ಮುಂದೆ ಲಕ್ಷ್ಮಣ ರೇಖೆಯನ್ನು ದಾಟದಂತೆ ತಾಕೀತು ಮಾಡುವ ಸಾಧ್ಯತೆ ಇದೆ.

ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂಬ ಪಕ್ಷನಿಷ್ಠರ ಬೇಡಿಕೆಯನ್ನು ಹೈಕಮಾಂಡ್ ಪರಿಗಣಿಸುವ ಸಾಧ್ಯತೆ ಕಡಿಮೆ ಇದ್ದು, ಯತ್ನಾಳ್ ಅವರಿಗೆ ಎಚ್ಚರಿಕೆ ನೀಡಿ ಮುಂದೆ ಪಕ್ಷದ ನಾಯಕರ ವಿರುದ್ಧ ನಾಲಿಗೆ ಹರಿ ಬಿಡದಂತೆ ಕಟ್ಟೆಚ್ಚರ ವಿಧಿಸಲಿದೆ ಎಂದು ಹೇಳಲಾಗುತ್ತಿದೆ. ಯತ್ನಾಳ್ ವಿರುದ್ಧ ಶಿಸ್ತುಕ್ರಮ ಕೈಗೊಂಡರೆ ಖಟ್ಟಾ ಹಿಂದುತ್ವ ವಾದಿಗಳಲ್ಲಿ ಅಸಮಾಧಾನ ಉಂಟುಮಾಡುವ ಸಾಧ್ಯತೆಗಳು ಹೆಚ್ಚಿರುವುದರಿಂದ, ಬಿಜೆಪಿ ಹೈಕಮಾಂಡ್ ಸದ್ಯಕ್ಕೆ ಯತ್ನಾಳ್ ವಿರುದ್ಧ ಗಂಭೀರ ಕ್ರಮಕ್ಕೆ ಮುಂದಾಗದೇ ಎಚ್ಚರಿಕೆಯನ್ನಷ್ಟೇ ನೀಡಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಶಾಸಕ ಯತ್ನಾಳ್ ಶೋಕಾಸ್ ನೋಟಿಸ್ಗೆ ಉತ್ತರ ನೀಡಿದ ನಂತರ ವರಿಷ್ಠರು ಯತ್ನಾಳ್ ಅವರಿಗೆ ಪಕ್ಷದ ನಾಯಕರ ವಿರುದ್ಧ ಮಾತನಾಡದಂತೆ ತಾಕೀತು ಮಾಡಲಿದೆ ಎಂದು ಮೂಲಗಳು ಹೇಳಿವೆ.

Leave a Reply

Your email address will not be published. Required fields are marked *