ಬೆಂಗಳೂರು : ಮುಸ್ಲಿಮರಿಗೆ ಮತದಾನದ ಅಧಿಕಾರದ ಕುರಿತು ಹೇಳಿಕೆ ನೀಡಿದ ವಿಶ್ವ ವಕ್ಕಲಿಗ ಮಹಾಸಂಸ್ತಾನ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ ವಕ್ಫ್ ಮಂಡಳಿ ಹೊರಡಿಸಿರುವ ನೋಟಿಸ್ ವಿರೋಧಿಸಿ ಭಾರತೀಯ ಕಿಸಾನ್ ಸಂಘ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದರು. ರೈತರು ಮತ್ತು ಅವರ ಭೂಮಿಯನ್ನು ರಕ್ಷಿಸಲು ಎಲ್ಲರೂ ಒಗ್ಗಟ್ಟಾಗಬೇಕು ಎಂದು ಒತ್ತಾಯಿಸಿದ ಸ್ವಾಮೀಜಿ, ಮುಸ್ಲಿಂ ಸಮುದಾಯಕ್ಕೆ ಮತದಾನದ ಅಧಿಕಾರವಿಲ್ಲದ ಕಾನೂನು ತರಬೇಕು ಎಂದು ಹೇಳಿದರು. ವಕ್ಫ್ ಬೋರ್ಡ್ ಇಲ್ಲದಂತೆ ನೋಡಿಕೊಳ್ಳಬೇಕು, ಬೇರೆಯವರ ಭೂಮಿಯನ್ನು ಕಸಿದುಕೊಳ್ಳುವುದು ಧರ್ಮವಲ್ಲ ಎಂದರು.
ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಎಲ್ಲರೂ ಹೋರಾಟ ಮಾಡಬೇಕು. ವಕ್ಫ್ ಬೋರ್ಡ್ ಯಾರಿಗೆ ಬೇಕಾದ್ರೂ ಭೂಮಿ ಕೊಡಬಹುದು ಅಂತಾರೆ. ಇದು ದೊಡ್ಡ ಅನ್ಯಾಯ. ಯಾರೋ ಬೇರೆಯವರ ಜಮೀನು ಕಸಿದುಕೊಳ್ಳುವುದು ಧರ್ಮವಲ್ಲ. ಹಾಗಾಗಿ, ರೈತರ ಜಮೀನು ಅವರ ಬಳಿಯೇ ಉಳಿಯುವಂತೆ ಎಲ್ಲರೂ ಹೋರಾಡಬೇಕು ಎಂದು ಹೇಳಿದ್ದರು.
ಆದರೆ, ಬುಧವಾರ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಸ್ವಾಮೀಜಿ, ಮುಸ್ಲಿಮರೂ ಈ ದೇಶದ ಪ್ರಜೆಗಳು, ಅವರಿಗೂ ಇತರರಂತೆ ಮತದಾನದ ಹಕ್ಕು ಇದೆ ಎಂದರು.
ಸಾಮಾಜಿಕ ಕಾರ್ಯಕರ್ತರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಬುಧವಾರ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾವು ಅವರ ವಿರುದ್ಧ (ಸ್ವಾಮೀಜಿ) ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 299 (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶದಿಂದ) ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.