ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರವನ್ನು ಏರಿಸಿ ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗಿದ್ದ BMRCL ಈಗ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೆ ಶುಲ್ಕ ನಿಗದಿ ಮಾಡುವ ಮೂಲಕ ಮತ್ತೆ ಜನರ ಕೆಂಗಣ್ಣಿಗೆ ಗುರಿಯಾಗಿದೆ

ನಮ್ಮ ಮೆಟ್ರೋ ವ್ಯಾಪ್ತಿಯ 12 ಶೌಚಾಲಯ ಬಳಕೆಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್(BMRCL) ಶುಲ್ಕ ನಿಗದಿ ಮಾಡಿದೆ. ಖಾಸಗಿ ಸಂಸ್ಥೆಯ ಜೊತೆಗೆ BMRCL ನಿರ್ವಹಣೆ ಒಪ್ಪಂದ ಮಾಡಿಕೊಂಡಿದ್ದು ಮೂತ್ರ ವಿಸರ್ಜನೆಗೆ 2 ರೂ., ಮಲ ವಿಸರ್ಜನೆಗೆ 5 ರೂ. ದರ ನಿಗದಿ ಮಾಡಿದೆ
ಯಾವ ನಿಲ್ದಾಣಗಳಲ್ಲಿ ಶುಲ್ಕ?
ನ್ಯಾಷನಲ್ ಕಾಲೇಜು, ಲಾಲ್ಬಾಗ್, ಸೌಥ್ ಆ್ಯಂಡ್ ಸರ್ಕಲ್, ಜಯನಗರ, ರಾಷ್ಟ್ರೀಯ ವಿದ್ಯಾಲಯ ರಸ್ತೆ, ಬನಶಂಕರಿ, ಜಯಪ್ರಕಾಶ ನಗರ, ಯೆಲಚೇನಹಳ್ಳಿ, ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣ ಸೆಂಟ್ರಲ್ ಕಾಲೇಜು, ಡಾ.ಅಂಬೇಡ್ಕರ್ ನಿಲ್ದಾಣ, ವಿಧಾನಸೌಧ, ಕಬ್ಬನ್ ಪಾರ್ಕ್ ಮತ್ತು ಮೆಜೆಸ್ಟಿಕ್ ನಿಲ್ದಾಣಗಳಲ್ಲಿನ ಶೌಚಾಲಯಗಳನ್ನು ಇನ್ನು ಮುಂದೆ ಪಾವತಿಸಿ ಬಳಸಬೇಕಾಗುತ್ತದೆ
ಶೌಚಾಲಯಕ್ಕೆ ದರ ವಿಧಿಸಿದ್ದಕ್ಕೆ ಸಾರ್ವಜನಿಕರಿಂದ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಅನಗತ್ಯ ಖರ್ಚಿಗೆ ಕಡಿವಾಣ ಹಾಕುವುದನ್ನು ಬಿಟ್ಟು ಶೌಚಾಲಯ ಬಳಕೆ ಮಾಡಿದ್ದಕ್ಕೆ ಜನರಿಂದ ದುಡ್ಡು ಸಂಗ್ರಹಿಸುವುದು ಎಷ್ಟು ಸರಿ? ಮೆಟ್ರೋ ಪ್ರಯಾಣಿಕರೂ ಈ ಶೌಚಾಲಯ ಬಳಕೆ ಮಾಡುವುದಿಲ್ವೇ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಎಂಆರ್ಸಿಎಲ್ ಅಧಿಕಾರಿಗಳು, ಈ ನಿಲ್ದಾಣಗಳಲ್ಲಿರುವ ಶೌಚಾಲಯಗಳು ಮೆಟ್ರೋ ಟಿಕೆಟ್ ಇಲ್ಲದೆ ಪ್ರವೇಶಿಸಬಹುದಾದ ಸ್ಥಳದಲ್ಲಿವೆ. ಹೀಗಾಗಿ ಈ ಶೌಚಾಲಯಗಳನ್ನು ಮೆಟ್ರೋ ಪ್ರಯಾಣಿಕರು ಅಲ್ಲದೇ ಬೇರೆಯವರು ಬಳಸುತ್ತಿದ್ದಾರೆ. ಹೀಗಾಗಿ ಅದರ ನಿರ್ವಹಣೆಯನ್ನು ಸುಲಭ್ ಇಂಟರ್ನ್ಯಾಷನಲ್ ಸಂಸ್ಥೆಗೆ ವಹಿಸಿದ್ದೇವೆ ಎಂದು ತಿಳಿಸಿದ್ದಾರೆ