ರಾಜ್ಯದಲ್ಲಿ ನೈಸರ್ಗಿಕ ಕೃಷಿ, ಸಾವಯವ ಕೃಷಿ ಎಂಬ ಕೂಗು ಕೇಳಿ ಬರುತ್ತದೆ. ಹಿಡಿತವಿಲ್ಲದ ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳನ್ನು ಬಳಸಿ ಭೂಮಿ ಹಾಳಾಗುತ್ತಿರುವುದು ಕಂಡ ರೈತರು ಸಾವಯವ ಕೃಷಿಯ ಕಡೆಗೆ ಮುಖ ಮಾಡಿದ್ದಾರೆ. ಇಂದು ಬಹುತೇಕ ರೈತರು ರಾಸಾಯನಿಕಗಳಿಂದ ದೂರ ಸರಿಯುತ್ತಿದ್ದಾರೆ. . ಸಾಮಾನ್ಯವಾಗಿ ಸಾವಯವ ಕೃಷಿ, ನೈಸರ್ಗಿಕ ಕೃಷಿಯನ್ನು ಮಾಡುತ್ತಿರುವ ರೈತರು ಜೀವಾಮೃತವನ್ನು ಬಳಸುತ್ತಿದ್ದಾರೆ. ಆದರೆ ಇತ್ತೀಚಿಗೆ ಗೋ ಕೃಪಾಮೃತ ಎಂಬ ಸಾವಯಗೊಬ್ಬರ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ…
ತಯಾರಿಸುವ ವಿಧಾನ.
ಬೇಕಾದ ಸಾಮಗ್ರಿಗಳು.
1. ಎರಡು ಕೆಜಿ ಸಾವಯವ ಬೆಲ್ಲ.
2. ಎರಡು ಲೀಟರ್ ದೇಶಿ ಹಸುವಿನ ಮಜ್ಜಿಗೆ.
3. 2 ಮದರ್ ಕಲ್ಚರ್.
4. 200 ಲೀಟರ್ ನೀರು.
ಮದರ್ ಕಲ್ಚರ್ ಎಂದರೆ ಬೇರೊಬ್ಬ ರೈತನು ತಯಾರಿಸಿರುವಂತಹ ಕೃಪಾ ಮೃತವನ್ನು ತೆಗೆದುಕೊಂಡು ಬರುವುದಕ್ಕೆ ಮದರ್ ಕಲ್ಚರ್ ಎನ್ನುವರು. ಅವನಲ್ಲಿ ಎರಡು ಲೀಟರ್ ಗೋ ಕೃಪಾಮೃತವನ್ನು ತೆಗೆದುಕೊಂಡು ಬರಬೇಕು. ಕೃಪಾಮೃತವನ್ನು ತರುವಾಗ ಬಹಳ ಎಚ್ಚರಿಕೆ ವಹಿಸಬೇಕು. ಮುಚ್ಚುಳಕ್ಕೆ ಒಂದು ತೂತನ್ನು ಹಾಕಬೇಕು. ಕಾರಣ ಅವುಗಳಲ್ಲಿರುವ ಜೀವರಾಶಿಯು ಸಾಯುದಂತೆ ಕಾಪಾಡಲಿಕ್ಕೆ. ನಾವು ಬಳಸುವಂತಹ ಬಾಟಲ್ ಶುದ್ಧವಾಗಿರಬೇಕು. ಯಾವುದೇ ರಾಸಾಯನಿಕದಿಂದ ಮುಕ್ತವಾಗಿರಬೇಕು.
200 ಲೀಟರ್ ನೀರಿಗೆ 2 ಕೆ.ಜಿ ಸಾವಯವ ಬೆಲ್ಲವನ್ನು ದೇಶಿ ಹಸುವಿನ ಮಜ್ಜಿಗೆ, ಹಾಗೂ ಮದರ್ ಕಲ್ಚರನ್ನು ಮಿಶ್ರಣ ಮಾಡಿ ಪ್ರತಿದಿನ ಮೂರು ಬಾರಿ ಕಲುಕಿದರೆ, ಒಂದು ವಾರದಲ್ಲಿ ದ್ರವರೂಪದ ಗೋ ಕೃಪಾಮೃತ ಸಿದ್ಧವಾಗುತ್ತದೆ.
ಉಪಯೋಗಗಳು : ಇದನ್ನು ಸಿಂಪಡಣೆಯಾಗಿ , ಅಥವಾ ಬುಡಕ್ಕೆ ನೀಡಬಹುದು. ಎಲೆಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದರಲ್ಲಿ ಮೂರು ನಾಲ್ಕು ತರದ ಸೂಕ್ಷ್ಮಾಣು ಜೀವಿಗಳಿವೆ. ಇದು ಎಲೆಗಳಿಗೆ ಬರುವಂತಹ ಫಂಗಸ್ ಕಾಯಿಲೆಯನ್ನು ಗುಣಪಡಿಸುತ್ತದೆ. ಎಲೆಗಳ ಪತ್ರಹರಿತ್ತಿನ ವೃದ್ಧಿಗೆ ಸಹಕಾರಿಯಾಗುತ್ತದೆ. ಇದರಿಂದ ಸಸ್ಯದ ಆಹಾರ ಉತ್ಪತ್ತಿ ಹೆಚ್ಚಾಗಿ ಸಸ್ಯವು ಸದೃಢವಾಗಿ ಬೆಳೆಯುತ್ತದೆ. ಇದನ್ನು ಭೂಮಿಗೆ ನೀಡಿದಾಗ ಸಸ್ಯದ ಬೇರನ್ನು ವೃದ್ಧಿಸುವುದಕ್ಕೆ ಸಹಕಾರಿಯಾಗಿದೆ.
ರಾಸಾಯನಿಕ ಗೊಬ್ಬರ ಕೀಟನಾಶಕಗಳಿಂದ ಮುಕ್ತವಾಗಿ ವಿಷ ಮುಕ್ತ ಭಾರತವನ್ನು ಕಟ್ಟೋಣ.