ಬೆಂಗಳೂರು: ಮುಡಾ ನಿವೇಶನಗಳನ್ನು 50:50 ಅನುಪಾತದಲ್ಲಿ ಹಂಚಿಕೆ ಸಂಬಂಧಿಸಿದಂತೆ ಮುಡಾ ಮಾಜಿ ಆಯುಕ್ತ ನಟೇಶ್ ಅವರಿಗೆ ಲೋಕಯುಕ್ತ ನೋಟಿಸ್ ನೀಡಿದೆ. ಇಂದು ಅವರು ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿದ್ದಾರೆ. ಇದರ ಬೆನ್ನಲ್ಲೇ ಮುಡಾದ ಮಾಜಿ ಅಧ್ಯಕ್ಷ ಧ್ರುವ ಕುಮಾರ್ ಅವರು ಲೋಕಾಯುಕ್ತ ಕಚೇರಿಗೆ ದಿಢೀರ್ ಭೇಟಿ ನೀಡಿದ್ದಾರೆ.
ಧ್ರುವ ಕುಮಾರ್ ಅವರು ಸಿಎಂಗೆ ಆಪ್ತರಾಗಿದ್ದು, ಸಿದ್ದರಾಮಯ್ಯ ಪತ್ನಿ ಬದಲಿ ನಿವೇಶನ ಪಡೆದಾಗ ಅವರು ಮುಡಾ ಅಧ್ಯಕ್ಷರಾಗಿದ್ದರು. ಇದ್ದಕ್ಕಿದ್ದಂತೆ ಧ್ರುವ ಕುಮಾರ್ ಭೇಟಿ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ. ಭೂಮಿ ಕೊಡಿ ಎಂದು ಸಿದ್ದರಾಮಯ್ಯ ಕೇಳಿರಲಿಲ್ಲ
ಮೈಸೂರಿನ ಲೋಕಾಯುಕ್ತ ಕಚೇರಿ ಬಳಿ ಮಾಧ್ಯಮಗಳ ಜೊತೆ ಮಾತನಾಡಿ ಧ್ರುವ ಕುಮಾರ್ ಅವರು, ಸಿಎಂ ಸಿದ್ದರಾಮಯ್ಯ ಅವರು ಭೂಮಿ ಕೊಡಿ ಎಂದು ಕೇಳಿರಲಿಲ್ಲ. ಅವರ ಪತ್ನಿ ಪಾರ್ವತಿ ಕೂಡ ಯಾವುದೇ ಪತ್ರ ವ್ಯವಹಾರ ನಡೆಸಿರಲಿಲ್ಲ. ನಾವೇ ಖುದ್ದು ಸಿಎಂ ಅವರನ್ನ ಭೇಟಿ ಮಾಡಿ ಮನವಿ ಮಾಡಿದೆವು. ಭೂಮಿಗೆ ಬದಲಾಗಿ ಸೈಟ್ ತೆಗೆದುಕೊಳ್ಳಿ ಎಂದು ಹೇಳಿದ್ದೇವೆ. ಆ ಸಂದರ್ಭದಲ್ಲಿ ತೀವ್ರವಾಗಿ ಅವರು ವಿರೋಧ ವ್ಯಕ್ತಪಡಿಸಿದ್ದರು ಎಂದು ಹೇಳಿದರು. 50:50 ಅನುಪಾತದಲ್ಲಿ ಸೈಟ್ ನೀಡುವುದು ಮೊದಲಿನಿಂದಲೂ ಇದೆ..
ಸಿಎಂ , ಅವರ ಪತ್ನಿ ಪಾರ್ವತಿ, ಮಲ್ಲಿಕಾರ್ಜುನಸ್ವಾಮಿ ಯಾರೂ ಕೂಡ ಭೂಮಿ ಕೇಳಿಲ್ಲ. ಬದಲಿ ಭೂಮಿ ನೀಡಬೇಕೆಂದು ಸಭೆಯಲ್ಲಿ ನಾವೇ ತೀರ್ಮಾನ ಮಾಡಿದ್ದೆವು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ರು, ನಮಗೆ ಭೂಮಿ ಬೇಡ ಎಂದು ಹೇಳಿದ್ದರು. ಬಳಿಕ ನಮ್ಮ ಅವಧಿ ಮುಗಿದು ಬೇರೆ ಅಧ್ಯಕ್ಷರು ಬಂದರು. 50:50 ಅನುಪಾತದಲ್ಲಿ ಸೈಟ್ ನೀಡುವುದು ಮೊದಲಿನಿಂದಲೂ ಇದೆ. ಮೊದಲು ರೈತರು ಭೂಮಿ ಕೊಡುತ್ತಿರಲಿಲ್ಲ ಎಂಬ ಕಾರಣಕ್ಕೆ ಒಪ್ಪಿಸುವ ಪ್ರಯತ್ನ ಮಾಡುತ್ತಿದ್ದೆವು ಎಂದು ಸ್ಪಷ್ಟಣೆ ನೀಡಿದರು. ನಾಳೆ ಕೋರ್ಟ್ ಕೇಸ್ ಇರೋದ್ರಿಂದ ಕಚೇರಿಗೆ ಇಂದೇ ಭೇಟಿ
ಇನ್ನು ಲೋಕಾಯುಕ್ತ ಕಚೇರಿಗೆ ದಿಢೀರ್ ಭೇಟಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾಳೆ ಬೇರೆ ಮುಖ್ಯ ಕಾರ್ಯವಿದೆ. ಕೋರ್ಟ್ ನಲ್ಲಿ ಕೇಸ್ ಇದೆ. ಆ ಕಾರಣಕ್ಕೆ ಇಂದೇ ಭೇಟಿ ಮಾಡಿರುವೆ. ಬೇರೆ ದಿನಾಂಕವನ್ನ ನೀಡಿದ್ದು, ಅಂದು ಭೇಟಿ ಆಗುತ್ತೇನೆ ಎಂದು ತಿಳಿಸಿದರು.