ಬೆಂಗಳೂರು : ದಿನೆದಿನೇ ಸೈಬರ್ ಅಪರಾಧ ಪ್ರಕರಣ ಹೆಚ್ಚಾಗುತ್ತಿದ್ದು ಬೆಂಗಳೂರು ನಗರಿಯಲ್ಲಿ ವೈದ್ಧನನ್ನು ಡಿಜಿಟಲ್ ಅರೆಸ್ಟ್ ಮಾಡಿ ಸೈಬರ್ ವಂಚಕರು 1.77 ಕೋಟಿ ರೂ ವರ್ಗಾವಣೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಸುಮಾರು ಒಂದು ವಾರ ವೃದ್ಧ ಡಿಜಿಟಲ್ ಅರೆಸ್ಟ್ ನಲ್ಲಿದ್ದರು ಎನ್ನಲಾಗಿದೆ
ಸದಾನಂದನಗರದ ಎನ್‌ಜಿಇಎಫ್ ಲೇಔಟ್ ನಿವಾಸಿ ಜಿ.ವಸಂತ ಕುಮಾರ್ (81) ಸೈಬರ್ ವಂಚನೆಗೆ ಒಳಗಾದವರು. ಈ ಸಂಬಂಧ ಅವರು ನೀಡಿದ ದೂರಿನ ಮೇರೆಗೆ ನಗರದ ಪೂರ್ವ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಜುಲೈ 23ರಂದು ಪ್ರಕರಣ ದಾಖಲಾಗಿದೆ.
ಮುಂಬೈನ ಕೊಲಾಬಾ ಪೊಲೀಸರ ಹೆಸರಿನಲ್ಲಿ ಜುಲೈ 5ರಂದು ಕರೆ ಮಾಡಿದ್ದ ಸಂದೀಪ್ ಜಾಧವ್ ಎಂಬಾತ, ತಮ್ಮ ಆಧಾರ್ ನಂಬರ್‌ನಿಂದ ಜೆಟ್ ಏರ್‌ವೇಸ್ ಸಂಸ್ಥೆಯ ನರೇಶ್ ಗೋಯಲ್ ಎಂಬವರ ಹೆಸರಿಗೆ ಕೋಟ್ಯಂತರ ರೂ. ವರ್ಗಾವಣೆಯಾಗಿದೆ ಎಂದು ಬೆದರಿಸಿದ್ದಾನೆ. ಜುಲೈ 9ರಿಂದ ಜು.15ರವರೆಗೆ ಡಿಜಿಟಲ್ ಅರೆಸ್ಟ್ ಮಾಡಿದ್ದ ವಂಚಕ, ವಿಡಿಯೋ ಕರೆ ಮೂಲಕ ವಾಟ್ಸ್ಆ್ಯಪ್ನಲ್ಲಿ ನಕಲಿ ಬಂಧನದ ವಾರಂಟ್ ತೋರಿಸಿ ಆತಂಕ ಹುಟ್ಟಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಿಜವಾದ ಮುಂಬೈ ಪೊಲೀಸರೆಂದು ನಂಬಿದ್ದ ವಸಂತ ಕುಮಾರ್, ವಂಚಕರು ಸೂಚಿಸಿದ ರೀತಿಯಲ್ಲಿ ತಮ್ಮ ಐದು ಬ್ಯಾಂಕ್ ಖಾತೆಯ ವಿವರಣೆ ನೀಡಿದ್ದಾರೆ. ಖಾತೆಯಲ್ಲಿರುವ ಹಣವನ್ನು ಬೇರೊಂದು ಖಾತೆಗೆ ಸುರಕ್ಷಿತವಾಗಿಟ್ಟುಕೊಂಡು ತನಿಖೆ ನಡೆಸಬೇಕಾಗಿದೆ. ನಂತರ ನಿಮ್ಮ ಹಣವನ್ನು ಆಯಾ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎಂದು ಹೇಳಿದ್ದಾರೆ. ವಂಚಕರ ಅಣತಿಯಂತೆ ತಮ್ಮ ವಿವಿಧ ಬ್ಯಾಂಕ್ ಖಾತೆಯಲಿದ್ದ 1,77,06,000 ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹಣ ವರ್ಗಾವಣೆ ಬಳಿಕ ಕರೆ ಕಡಿತಗೊಳಿಸಿದ್ದಾರೆ. ವಿಚಾರಣೆ ಮುಗಿದ ಬಳಿಕ ಮರಳಿ ತಮ್ಮ ಖಾತೆಗೆ ಹಣ ವರ್ಗಾವಣೆಯಾಗದೆ ಇದ್ದಾಗ, ತಾನು ವಂಚನೆಗೆ ಒಳಗಾಗಿರುವುದು ಮನವರಿಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
For More Updates Join our WhatsApp Group :