ಇನ್ಮುಂದೆ ಕುಕ್ಕೆ ಸುಬ್ರಮಣ್ಯದಲ್ಲಿ ಭೋಜನ ಪ್ರಸಾದದ ಜೊತೆಗೆ ವೈವಿಧ್ಯಮಯ ಪಾಯಸದ ವ್ಯವಸ್ಥೆ

ಇನ್ಮುಂದೆ ಕುಕ್ಕೆ ಸುಬ್ರಮಣ್ಯದಲ್ಲಿ ಭೋಜನ ಪ್ರಸಾದದ ಜೊತೆಗೆ ವೈವಿಧ್ಯಮಯ ಪಾಯಸದ ವ್ಯವಸ್ಥೆ

ದ.ಕ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಭೋಜನ ಪ್ರಸಾದವು ಈ ಹಿಂದಿನಿಂದಲೂ ಪವಿತ್ರ ಮತ್ತು ಪರಮ ಪಾವನವಾದದ್ದು. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪ್ರತಿದಿನ ಬೇರೆ ಬೇರೆ ತೆರನಾದ ಪಾಯಸಗಳನ್ನೂ ಭಕ್ತರಿಗೆ ಉಣಬಡಿಸುವ ವ್ಯವಸ್ಥೆ ಮಾಡಲಾಗಿದೆ.

ದೇಗುಲದಲ್ಲಿ ವಾರ್ಷಿಕವಾಗಿ ಸುಮಾರು 55 ಲಕ್ಷಕ್ಕೂ ಮಿಕ್ಕಿ ಭಕ್ತರು ಭೋಜನ ಪ್ರಸಾದವನ್ನು ಸ್ವೀಕರಿಸುತ್ತಾರೆ. ಪ್ರಸ್ತುತ ದೇಗುಲದ ಆಡಳಿತಾಧಿಕಾರಿಯಾಗಿರುವ ಪುತ್ತೂರು ಉಪಆಯುಕ್ತ ಜುಬಿನ್ ಮೊಹಪಾತ್ರ ಅವರ ವಿಶೇಷ ಕಾಳಜಿಯಿಂದ, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿಗಳ ಯೋಜನೆಯಂತೆ ಭೋಜನ ಪ್ರಸಾದ ವ್ಯವಸ್ಥೆಯಲ್ಲಿ ವಿತರಿಸುವ ಖಾದ್ಯಗಳಲ್ಲಿ ಬದಲಾವಣೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ವಿಧವಿಧ ಪಾಯಸ ಸೇರಿದಂತೆ ವಿಶೇಷ ಭೋಜನ ಪ್ರಸಾದ ಪ್ರತಿದಿನ ದೊರಕುವಂತಾಗಿದೆ.

ಈ ಹಿಂದೆ ವಿಶೇಷ ದಿನಗಳನ್ನು ಹೊರತುಪಡಿಸಿ ಪ್ರತಿದಿನ ಒಂದೇ ರೀತಿಯ ಪಾಯಸವನ್ನು ಭಕ್ತರಿಗೆ ವಿತರಿಸಲಾಗುತ್ತಿತ್ತು. ಆದರೆ, ಇದೀಗ ಪ್ರತಿದಿನ ಬೇರೆ ಬೇರೆ ತೆರನಾದ ಪಾಯಸಗಳನ್ನು ಭಕ್ತರಿಗೆ ಉಣಬಡಿಸುವ ವ್ಯವಸ್ಥೆ ಮಾಡಲಾಗಿದೆ. ಹೆಸರು ಬೇಳೆ, ಕಡ್ಲೆ ಬೇಳೆ, ಸಬ್ಬಕ್ಕಿ, ಗೋಧಿ ಕಡಿ, ಕಡ್ಲೆ ಬೇಳೆ, ಹಾಲು ಪಾಯಸ, ಅಕ್ಕಿ ಪಾಯಸ, ಶ್ಯಾವಿಗೆ ಪಾಯಸ, ರವೆ ಪಾಯಸ ಮತ್ತು ಸಿರಿಧಾನ್ಯಗಳ ಪಾಯಸಗಳು ಸೇರಿದಂತೆ ಸುಮಾರು 10 ಬಗೆಯ ಪಾಯಸಗಳ ವ್ಯವಸ್ಥೆ ಮಾಡಲಾಗಿದೆ.

ಇಷ್ಟು ಮಾತ್ರವಲ್ಲದೇ, ಪ್ರಸಾದ ಭೋಜನವು ಅತ್ಯಂತ ರುಚಿ, ಸ್ವಾದಿಷ್ಟ ಮತ್ತು ಪೌಷ್ಟಿಕಾಂಶಗಳಿಂದ ಕೂಡಿರಬೇಕೆಂಬ ಉದ್ದೇಶದಿಂದ ಸುಮಾರು 16 ಬಗೆಯ ತರಕಾರಿಗಳನ್ನು ಪ್ರತಿದಿನ ಬದಲಾವಣೆಯೊಂದಿಗೆ ಸಾಂಬಾರಿಗೆ ಉಪಯೋಗಿಸಲು ಯೋಜನೆ ರೂಪಿಸಲಾಗಿದೆ.

Leave a Reply

Your email address will not be published. Required fields are marked *