ಗಂಗಾವತಿ: ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ 36 ವರ್ಷದ ಮಹಿಳೆಯೊಬ್ಬಳು ಸಜೀವ ದಹನವಾಗಿ, ಐದು ವರ್ಷದ ಮಗುವೊಂದು ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾದ ಘಟನೆ ಇಲ್ಲಿನ ಜಯನಗರದ ಮೊದಲ ಮುಖ್ಯರಸ್ತೆಯಲ್ಲಿ ಶುಕ್ರವಾರ ನಡೆದಿದೆ.

ಜಯನಗರದ ಮೊದಲ ಹಂತದ ಐದನೇ ತಿರುವಿನಲ್ಲಿರುವ ರಾಜಾರಾಮ್ ಎಂಬ ಬ್ಯಾಂಕ್ ನೌಕರರೊಬ್ಬರಿಗೆ ಸೇರಿದ ಮನೆಯಲ್ಲಿ ಖಾಸಗಿ ಶಾಲೆಯ ಶಿಕ್ಷಕರೊಬ್ಬರಿಗೆ ಮೊದಲ ಮಹಡಿಯನ್ನು ಬಾಡಿಗೆ ನೀಡಿದ್ದರು. ಈ ಮನೆಯಲ್ಲಿ ಈ ಘಟನೆ ನಡೆದಿದೆ.
ಘಟನೆಯಲ್ಲಿ ಬಸಾಪಟ್ಟಣದ ರಾಜರಾಜೇಶ್ವರಿ ಶಾಲೆಯ ಶಿಕ್ಷಕ ರಾಘವೇಂದ್ರ ರೆಡ್ಡಿ ಅವರ ಪತ್ನಿ ಸುಮಂಗಲ (36) ಎಂಬ ಮಹಿಳೆ ಮೃತಪಟ್ಟಿದ್ದಾರೆ. ಬೆಂಕಿಯ ಶಾಖದಿಂದ ಐದು ವರ್ಷದ ಸಮನ್ವಿತಾ ಎಂಬ ಮಗು ಕಿರುಚುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು, ಕೂಡಲೇ ಧಾವಿಸಿ ರಕ್ಷಣೆ ಮಾಡಿದ್ದಾರೆ.
ಮಗುವನ್ನು ಇಲ್ಲಿನ ಉಪ ವಿಭಾಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಖಾಸಗಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ದಾಖಲಿಸಲಾಗಿದೆ. ಇಡೀ ಮನೆಯಲ್ಲಿ ಬೆಂಕಿ ಆವರಿಸಿಕೊಂಡಿದ್ದರಿಂದ ಮಹಿಳೆಯನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಹೊತ್ತಿಗೆ ಮಹಿಳೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸ್ಥಳಕ್ಕೆ ವಿಧಿ-ವಿಜ್ಞಾನ ಪ್ರಯೋಗಾಲದ ತಜ್ಞರು ಭೇಟಿ ನೀಡಿ ಘಟನೆಯ ಸ್ಥಳ ಪರಿಶೀಲಿಸಿ ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ.
ಘಟನೆಗೆ ಖಚಿತ ಕಾರಣ ಗೊತ್ತಾಗಿಲ್ಲ. ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪಾರ್ಥಿವ ಶರೀರವನ್ನು ಕುಟುಂಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು.




