ಗಂಗಾವತಿ: ಚಿರತೆ, ಕರಡಿ ಸೇರಿದಂತೆ ಸೂಕ್ಷ್ಮ ಪ್ರಾಣಿ, ಪಕ್ಷಿ, ಕೀಟಗಳ ಆವಾಸ ಸ್ಥಾನವಾಗಿರುವ ಜಯನಗರದ ಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದಿದೆ. ಅಗ್ನಿ ಶಾಮಕ ಇಲಾಖೆ ಸಿಬ್ಬಂದಿ ಸತತ ನಾಲ್ಕು ಗಂಟೆಗೂ ಹೆಚ್ಚು ಕಾಲ ಹರಸಾಹಸಪಟ್ಟು ಬೆಂಕಿ ನಂದಿಸಿದೆ.
ಸಿದ್ದಿಕೇರಿಗೆ ಹೋಗುವ ಮಾರ್ಗದಲ್ಲಿರುವ ಜಯನಗರದ ಎಡ ಭಾಗದಲ್ಲಿರುವ ಬೆಟ್ಟಕ್ಕೆ ಶುಕ್ರವಾರ ಕಿಡಗೇಡಿಗಳು ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆ ಕಾಣಿಸಿಕೊಳ್ಳುತ್ತಿದ್ದಂತೆಯೆ ಕೆಲ ಯುವಕರು ಸ್ಥಳಕ್ಕೆ ತೆರಳಿ ನಂದಿಸುವ ಯತ್ನ ಮಾಡಿದ್ದಾರೆ. ಆದರೆ, ಬೆಂಕಿಯ ತೀವ್ರತೆ ಇನ್ನಷ್ಟು ಪ್ರದೇಶಕ್ಕೆ ವಿಸ್ತರಿಸುತ್ತಾ ಜನವಸತಿ ಪ್ರದೇಶಕ್ಕೆ ವ್ಯಾಪಿಸುವ ಹಂತಕ್ಕೆ ತಲುಪುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಮಧ್ಯಾಹ್ನ 1.30ರ ಸುಮಾರಿಗೆ ಸ್ಥಳಕ್ಕೆ ಬಂದ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿ ಸುಮಾರು ನಾಲ್ಕು ಲೋಡ್ ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಮೊದಲಿಗೆ ಜನವಸತಿ ಪ್ರದೇಶಕ್ಕೆ ಬೆಂಕಿ ಹರಡದಂತೆ ಜಾಗೃತಿ ವಹಿಸಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರೂ ಬೆಂಕಿ ಆರಿಸುವ ಕೆಲಸ ಮುಗಿಯಲಿಲ್ಲ. ಬೆಟ್ಟಕ್ಕೆ ಹತ್ತಿದ್ದ ಬೆಂಕಿ ವ್ಯಾಪಿಸುತ್ತಲೇ ಇತ್ತು. ಅಗ್ನಿ ಶಾಮಕ ಇಲಾಖೆಯ ವಾಹನ ಹೋಗಲು ಸಾಧ್ಯವಿಲ್ಲದಷ್ಟು ಕಡಿದಾದ ರಸ್ತೆ ಇರುವ ಕಾರಣ ಕಾರ್ಯಾಚರಣೆಗೆ ಸಮಸ್ಯೆಯಾಗಿತ್ತು.
ಎಂಟು ದಿನದಲ್ಲಿ ಮೂರನೇ ಬಾರಿಗೆ: ಜಯನಗರದ ಬೆಟ್ಟಕ್ಕೆ ದುಷ್ಕರ್ಮಿಗಳು ಪದೇ ಪದೆ ಬೆಂಕಿ ಹಚ್ಚುವ ದುಷ್ಕೃತ್ಯ ಮೆರೆಯುತ್ತಿದ್ದಾರೆ. ಫೆ.28ರಂದು ಜಯನಗರದ ತಾಯಮ್ಮ ದೇವಸ್ಥಾನದ ಬಳಿ ಇರುವ ಬೆಟ್ಟಕ್ಕೆ ಬೆಂಕಿ ಹಚ್ಚಲಾಗಿತ್ತು. ಸಕಾಲಕ್ಕೆ ಎಚ್ಚೆತ್ತ ಸಿಬ್ಬಂದಿ ಬೆಂಕಿ ನಂದಿಸಿದ್ದರು. ಬಳಿಕ ಮಾ.6ರಂದು ಸಂಜೆ ಮಳೆ ಮಳೇಶ್ವರ ದೇವಸ್ಥಾನದ ಸಮೀಪದ ಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಸುಮಾರು ನೂರಾರು ಯುವಕರು ಸ್ಥಳಕ್ಕೆ ತೆರಳಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಶುಕ್ರವಾರ ಬೆಳಗ್ಗೆ ಜಯನಗರದ ಸಿದ್ಧಿಕೇರಿ ರಸ್ತೆಯಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚುವ ಮೂಲಕ ಅಟ್ಟಹಾಸ ಮೆರೆದಿದ್ದಾರೆ. ಬೆಟ್ಟಕ್ಕೆ ಬೆಂಕಿ ಹಚ್ಚುವುದರಿಂದ ಬೆಟ್ಟದಲ್ಲಿನ ಹಾವು, ಚೇಳಿನಂತ ವಿಷಜಂತುಗಳು, ಕ್ರೀಮಿ, ಕೀಟಗಳು ಸಮೀಪದ ಜನವಸತಿ ಪ್ರದೇಶಕ್ಕೆ ಬರುತ್ತಿವೆ. ಇದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯರು.