ತುಮಕೂರು: ಜಿಲ್ಲೆಯ ಕೊರಟಗೆರೆ ಠಾಣಾ ವ್ಯಾಪ್ತಿಯ ನಗರದ ಮೂಡ್ಲಪಣ್ಣೆ ಭೈಲಾಂಜನೇಯಸ್ವಾಮಿ ದೇವಸ್ಥಾನದ ಬಳಿ ಅರಳಿ ಕಟ್ಟೆಯ ಮೇಲೆ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು ನಗರದ ಕ್ಯಾತ್ಸಂದ್ರದ ಚೇತನ(29), ಗೋಕುಲ ಬಡಾವಣೆಯ ನಾಗರಾಜು(25), ಊರುಕೆರೆಯ ಪ್ರೀತಂ(27), ರಂಗಾಪುರದ ಸಿಂಗಾರವೇಲು(25) ಬಂಧಿತ ಆರೋಪಿಗಳಾಗಿದ್ದು, ಕೊರಟಗೆರೆ ನಗರದ ಕೃಷ್ಣ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ 50 ಸಾವಿರ ಬೆಲೆ ಬಾಳುವ 960 ಗ್ರಾಂ ಗಾಂಜಾ ಸೊಪ್ಪು, ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ದೇವಸ್ಥಾನದ ಬಳಿ ಅರಳಿ ಕಟ್ಟೆಯ ಬಳಿ ಸಣ್ಣ ಸಣ್ಣ ಪ್ಯಾಕೇಟ್ ಮಾಡಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡವನ್ನು ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಶ್ಲಾಘಿಸಿದ್ದಾರೆ.
ಚರ್ಚ್ ಮುಂಭಾಗ ಗಾಂಜಾ ಮಾರಾಟ:-
ತುಮಕೂರು ನಗರದ ಊರ್ದುಮಾತಾ ಚರ್ಚ್ ಮುಂಭಾಗ ಪುಟ್ ಬಾತ್ ರಸ್ತೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಗಾಂಜಾ ಸೊಪ್ಪನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಾಲು ಸಮೇತ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ನಗರದ ಬಿದಿರುಮಳೆ ನಿವಾಸಿ ಸೈಯದ್ ನವಾಜ್ (23) ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ 43,000 ರೂ.ಬೆಲೆಬಾಳುವ 874 ಗ್ರಾಂ ತೂಕದ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡು ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದಾನೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ಪತ್ರಾಂಕಿತ ಅಧಿಕಾರಿಗಳ ಸಮಕ್ಷಮದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಶ್ಲಾಘಿಸಿದ್ದಾರೆ.