ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ.. ಕೊನೆಗೂ ಬಿಬಿಎಂಪಿ ಅಲರ್ಟ್, ಗುತ್ತಿಗೆದಾರರ ಬಿಲ್ ಕಟ್!

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ.. ಕೊನೆಗೂ ಬಿಬಿಎಂಪಿ ಅಲರ್ಟ್, ಗುತ್ತಿಗೆದಾರರ ಬಿಲ್ ಕಟ್!

ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದು ಹೆಚ್ಚಾಗುತ್ತಿದೆ. ಅಲ್ಲದೇ ನಗರದಲ್ಲಿ ಎಲ್ಲೆಂದರಲ್ಲಿ ಕಸ ಕಾಣಿಸುತ್ತಿದೆ. ಇದೀಗ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಪ್ಪಿಸುವುದಕ್ಕೆ ಹಾಗೂ ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಮುಕ್ತಿ ಕೊಡುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಬಿಬಿಎಂಪಿಯ ಎಲ್ಲಾ 8 ವಲಯಗಳಲ್ಲಿ ತೀವ್ರಗತಿಯಲ್ಲಿ ಸ್ವಚ್ಛತಾ ಕಾರ್ಯ ಅಭಿಯಾನ ಶುರು ಮಾಡಿರುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ. ತ್ಯಾಜ್ಯ ತೆರವುಗೊಳಿಸುವ ವಿಚಾರದಲ್ಲಿ ಗುತ್ತಿಗೆದಾರರು ಸರಿಯಾಗಿ ಕಾರ್ಯನಿರ್ವಹಿಸದ ಪರಿಣಾಮ ರಸ್ತೆ ಬದಿ ಕಸ ಬಿಸಾಡುವುದು ಹೆಚ್ಚಾಗಿದೆ. ಈ ಸಂಬಂಧ ಗುತ್ತಿಗೆದಾರರಿಗೆ ನೀಡುವ ಬಿಲ್ ನಲ್ಲಿಯೇ ಹಣವನ್ನು ಕಟಾವು ಮಾಡಿಕೊಂಡು ಸ್ವಚ್ಛತಾ ಕಾರ್ಯವನ್ನು ಮಾಡಲಾಗುತ್ತಿದೆ ಎಂದಿದ್ದಾರೆ.

ನಗರದಾದ್ಯಂತ ಇಂದಿನಿಂದ 30ನೇ ಏಪ್ರಿಲ್ 2025 ರವರೆಗೆ 10 ದಿನಗಳ ಕಾಲ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲೆಡೆ ತೀವ್ರಗತಿಯಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ವತಿಯಿಂದ ನಗರದಾದ್ಯಂತ ಸ್ವಚ್ಛತಾ ಅಭಿಯಾನವನ್ನು ನಡೆಸಲಾಗುತ್ತಿದೆ. ನಗರದ ರಸ್ತೆ ಬದಿ, ಖಾಲಿ ಜಾಗಗಳಲ್ಲಿ ತ್ಯಾಜ್ಯ ಬಿಸಾಡುವ ಸ್ಥಳಗಳನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗುತ್ತಿದೆ.

ಪಾಲಿಕೆ ಆಯಾ ವಲಯಗಳಲ್ಲಿ ಬಿ.ಎಸ್.ಡಬ್ಲ್ಯೂ.ಎಂ.ಎಲ್ ಅಧಿಕಾರಿಗಳು, ಮಾರ್ಷಲ್ ಮೇಲ್ವಿಚಾರಕರು ಹಾಗೂ ಮಾರ್ಷಲ್ಗಳ ನೇತೃತ್ವದಲ್ಲಿ ಕಸ ಬಿಸಾಡುವ ಸ್ಥಳ (ಬ್ಲಾಕ್ ಸ್ಪಾಟ್) ಗಳಲ್ಲಿ ಆಟೋ ಟಿಪ್ಪರ್ ಗಳನ್ನು ಬಳಸಿಕೊಂಡು ತ್ಯಾಜ್ಯವನ್ನು ತೆರವುಗೊಳಿಸಲಾಗುತ್ತಿದೆ. ಕಸ ಬಿಸಾಡುವ ಸ್ಥಳಗಳನ್ನು ಸ್ವಚ್ಛತೆ ಮಾಡಿ, ಆ ಜಾಗದಲ್ಲಿ ರಂಗೋಲಿ ಬಿಡಿಸಿ ಹಸಿರು ಮೆಸ್ ಕಟ್ಟಿ ಸುಂದರವಾಗಿ ಕಾಣುವಂತೆ ಮಾಡಲಾಗುತ್ತಿದೆ. ಜೊತೆಗೆ ಮತ್ತೆ ಆ ಜಾಗದಲ್ಲಿ ಕಸ ಬಿಸಾಡದಂತೆ ಬ್ಯಾನರ್ ಅಳವಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಬಿಬಿಎಂಪಿಯು ಹೇಳಿದೆ. ಕಟ್ಟಡಗಳ ತ್ಯಾಜ್ಯ ತೆರವು: ಇನ್ನು ಬೆಂಗಳೂರಿನಲ್ಲಿ ರಸ್ತೆ ಬದಿ, ಖಾಲಿ ಜಾಗಗಳಲ್ಲಿ ಕಟ್ಟಡ ಭಗ್ನಾವಶೇಷಗಳನ್ನು ಸುರಿದು ಹೋಗುತ್ತಿದ್ದಾರೆ. ಅಂತಹ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದ್ದು. ಪಾಲಿಕೆಯ ಎಲ್ಲಾ 8 ವಲಯಗಳಲ್ಲಿ ಜೆ.ಸಿ.ಬಿ. ಗಳು ಹಾಗೂ ಹೆಚ್ಚುರಿಯಾಗಿ ಕಾಪ್ಯಾಂಕ್ಟರ್ ಗಳನ್ನು ಬಳಸಿಕೊಂಡು ಕಟ್ಟಡ ಭಗ್ನಾವೇಶಷಗಳನ್ನು ತೆರವುಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ಒಮ್ಮೆ ಬಳಸುವ ಪಾಸ್ಟಿಕ್ ವಶಕ್ಕೆ: ಬೆಂಗಳೂರಿನಲ್ಲಿ ಉದ್ದಿಮೆಗಳು ಹಾಗೂ ಮಳಿಗೆಗಳ ಮೇಲೆ ದಾಳಿ ನಡೆಸಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಸುತ್ತಿದ್ದರೆ ಅದನ್ನು ವಶಪಡಿಸಿಕೊಂಡು ದಂಡ ವಿಧಿಸುವ ಕೆಲಸ ಮಾಡಲಾಗುತ್ತಿದೆ. ಅದಲ್ಲದೆ ಮತ್ತೆ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಸದಂತೆ ಮಳಿಗೆ ಮಾಲೀಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ ಎಂದಿದ್ದಾರೆ. ವಿವಿಧ ಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನ: ಬೃಹತ್ ಪ್ರಮಾಣದ ಸ್ವಚ್ಛತಾ ಅಭಿಯಾನದಲ್ಲಿ ಅಧಿಕಾರಿಗಳೊಂದಿಗೆ ಸಾರ್ವಜನಿಕರು, ಸರ್ಕಾರೇತರ ಸಂಘ ಸಂಸ್ಥೆಗಳು, ನಿವಾಸಿ ಕಲ್ಯಾಣ ಸಂಘಗಳು, ಅಪಾರ್ಟಮೆಂಟ್ ಮಾಲಿಕರ ಸಂಘಗಳು, ಸ್ವಯಂ ಸೇವಕ ಗುಂಪುಗಳ ಸಹಭಾಗಿತ್ವದೊಂದಿಗೆ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜನರಿಂದ ಆಕ್ರೋಶ: ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು. ಬಿಬಿಎಂಪಿ ಹಾಗೂ ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಆರೋಪವು ಸಾರ್ವಜನಿಕರಿಂದ ಕೇಳಿ ಬಂದಿದ್ದು. ಭಾರೀ ಆಕ್ರೋಶ ವ್ಯಕ್ತವಾಗಿದೆ. ನಗರದಲ್ಲಿ ಜನರಿಂದ ಹೆಚ್ಚು ತೆರಿಗೆಯನ್ನು ಸಂಗ್ರಹಿಸಿದರೂ ಕಸ ಸೇರಿದಂತೆ ಮೂಲಸೌಕರ್ಯ ವ್ಯವಸ್ಥೆ ಸರಿಯಾಗಿ ಇಲ್ಲ. ಅಲ್ಲದೇ ಕಸ ಸಂಗ್ರಹಕ್ಕೂ ಬೆಂಗಳೂರು ಪಾಲಿಕೆ ಟ್ಯಾಕ್ಸ್ ಕಲೆಕ್ಟ್ ಮಾಡುತ್ತಿದೆ ಎಂದು ಜನರಿಂದ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಈ ವಿಚಾರದಲ್ಲಿ ಪಾಲಿಕೆ ಅಲರ್ಟ್ ಆಗಿದೆ. ಅನಧಿಕೃತ ಜಾಹೀರಾತು ಕ್ರಮ: ದುಪ್ಪಟ್ಟು ದಂಡ! ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಅನಧಿಕೃತ ಜಾಹೀರಾತುಗಳನ್ನು ಅಳವಡಿಸುವ ವಿಚಾರವಾಗಿ ಹೈಕೋರ್ಟ್ ಹಾಗೂ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು. ಆದರೂ ಕೂಡ ಇತ್ತೀಚಿನ ದಿನಗಳಲ್ಲಿ ಉಲ್ಲಂಘನೆಗಳು ಹೆಚ್ಚಾಗುತ್ತಿದ್ದು, ಅದನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ಕಮಿಷನರ್ ಹೇಳಿದ್ದಾರೆ.

ನಗರದಲ್ಲಿ ಅನಧಿಕೃತ ಜಾಹೀರಾತು ಅಳವಡಿಸುವವರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಹೊಸದಾಗಿ ಸುತ್ತೋಲೆ ಹೊರಡಿಸಲಾಗುತ್ತಿದೆ. ಅದರಲ್ಲಿ, ವಾರ್ಡ್ ವ್ಯಾಪ್ತಿಯಲ್ಲಿ ಬರುವ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಸಹಾಯಕ ಎಂಜಿನಿಯರ್ ಹಾಗೂ ಕಿರಿಯ ಎಂಜಿನಿಯರ್ಗೆ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸುವ ಅಧಿಕಾರವನ್ನು ನೀಡಿ ಎಫ್.ಐ.ಆರ್ ದಾಖಲಿಸಿ, ತೆರವುಗೊಳಿಸುವ ವೇಳೆ ವ್ಯಯವಾಗುವ ವೆಚ್ಚವನ್ನು ವಸೂಲಿ ಮಾಡುವುದರ ಜೊತೆಗೆ ದುಪ್ಪಟ್ಟು ದಂಡ ವಿಧಿಸುವ ಜವಾಬ್ದಾರಿಯನ್ನು ನೀಡಲಾಗುವುದು ಎಂದು ಎಚ್ಚರಿಕೆಯನ್ನು ಸಹ ಕೊಟ್ಟಿದ್ದಾರೆ. ಮಳೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಬೆಂಗಳೂರಿನಲ್ಲಿ ರಾಜಕಾಲುವೆಗಳಲ್ಲಿ ವಾರ್ಷಿಕ ನಿರ್ವಹಣೆ ಅಡಿ ಸ್ವಚ್ಛತೆ ಮಾಡುವ ಕಾರ್ಯವನ್ನು ಸಕ್ರಿಯವಾಗಿ ಮಾಡಿ ಹೂಳನ್ನು ತೆರವುಗೊಳಿಸಬೇಕು. ವಾರ್ಡ್ ರಸ್ತೆ ಹಾಗೂ ಪ್ರಮುಖ ರಸ್ತೆಗಳಲ್ಲಿ ಬರುವ ಸೈಡ್ ಡ್ರೈನ್ ಗಳನ್ನು ಶಿಲ್ಟ್ ಅಂಡ್ ಟ್ರ್ಯಾಕ್ಟರ್ ಗಳು ಬಳಸಿ ಹೂಳೆತ್ತುವ ಕೆಲಸ ಮಾಡಬೇಕು. ಮಳೆಗಾಲ ಪ್ರಾರಂಭಕ್ಕೂ ಮುಂಚಿತವಾಗಿ ಆದ್ಯತೆ ಮೇರೆಗೆ ಸ್ವಚ್ಛತಾ ಕಾರ್ಯ ನಡೆಸಿ ಎಲ್ಲಿಯೂ ಸಮಸ್ಯೆಯಾಗದಂತೆ ಕ್ರಮವಹಿಸಲು ಸೂಚಿಸಲಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಿ: ಬಿಬಿಎಂಪಿ ವ್ಯಾಪ್ತಿ ರಸ್ತೆ ಗುಂಡಿಗಳನ್ನು ಕೂಡ ಮುಚ್ಚಬೇಕಿದ್ದು, ಆಯಾ ವಲಯಗಳಲ್ಲಿ ರಸ್ತೆಗುಂಡಿಗಳನ್ನು ಗುರುತಿಸಿ ಕೂಡಲೇ ಮುಚ್ಚುವ ಕಾರ್ಯ ಮಾಡಲು ಸೂಚಿಸಿದರು. ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಡಾ. ಕೆ. ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಆಯುಕ್ತರಾದ ಸತೀಶ್, ರಮೇಶ್, ರಮ್ಯಾ, ಕರೀಗೌಡ, ದಿಗ್ವಿಜಯ್ ಬೋಡ್ಕೆ, ನವೀನ್ ಕುಮಾರ್, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *