ತುರುವೇಕೆರೆ : ಸಿಡಿಲು ಬಡಿದು 15 ಕುರಿ ಹಾಗೂ ಮೇಕೆಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತಾಲ್ಲೂಕಿನ ರಾಮಸಾಗರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.
ಮಾಯಸಂದ್ರ ಹೋಬಳಿ ರಾಮಸಾಗರ ಗ್ರಾಮದಲ್ಲಿ ಗೋವಿಂದಪ್ಪ, ಲಕ್ಕಣ್ಣ, ವರದರಾಜು, ಜಯಲಕ್ಷ್ಮಮ್ಮ ಎಂಬುವವರಿಗೆ ಸೇರಿದ 15 ಕುರಿ ಹಾಗೂ ಮೇಕೆಗಳು ಮೇಯಲು ಹೋಗಿದ್ದ ಸಂದರ್ಭ ಸಿಡಿಲು ಬಡಿದು ಸಾವನ್ನಪ್ಪಿವೆ. ಈ ವೇಳೆ ಕುರಿಗಾಹಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಗುರುವಾರ ಬೆಳಗ್ಗೆ ತಾಲೂಕು ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ರೇವಣಸಿದ್ದಪ್ಪ ಸಿಡಿಲಿನಿಂದ ಬಲಿಯಾದ ಕುರಿ -ಮೇಕೆಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ತಾ. ತೆಂಗು ಮತ್ತು ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಆರ್. ಜಯರಾಮ್ ನೊಂದ ರೈತ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬಿದರು. ಈ ವೇಳೆ ಮಾತನಾಡಿದ ಅವರು ಬಡ ಕುಟುಂಬದ ರೈತರುಗಳಿಗೆ ಈ ಘಟನೆಯಿಂದ ಅಧಿಕ ನಷ್ಟವಾಗಿದೆ. ಕೂಡಲೆ ಸರ್ಕಾರವು ನಷ್ಟವಾದ ರೈತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರಲ್ಲದೆ, ತಹಶೀಲ್ದಾರ್ ಅವರಿಗೆ ಕರೆ ಮಾಡಿ ತುರ್ತಾಗಿ ಸೂಕ್ತ ಪರಿಹಾರ ಕೊಡಿಸುವಂತೆ ಮನವಿ ಮಾಡಿದರು.