ಅಂಡಮಾನ್-ನಿಕೋಬಾರ್ ಪ್ರವಾಸ ಹೋಗುವ ಬೆಂಗಳೂರು ಜನರಿಗೆ ಸಿಹಿಸುದ್ದಿ

ಅಂಡಮಾನ್-ನಿಕೋಬಾರ್ ಪ್ರವಾಸ ಹೋಗುವ ಬೆಂಗಳೂರು ಜನರಿಗೆ ಸಿಹಿಸುದ್ದಿ

ಬೆಂಗಳೂರು: ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್-ನಿಕೋಬಾರ್ ಪ್ರವಾಸ ಹೋಗುವ ಬೆಂಗಳೂರು ನಗರದ ಜನರಿಗೆ ಸಿಹಿಸುದ್ದಿ ಇದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ಬೆಂಗಳೂರು ಮತ್ತು ಪೋರ್ಟ್ ಬ್ಲೇರ್ ನಡುವೆ ಪ್ರತಿದಿನದ ನೇರ ವಿಮಾನ ಸೇವೆಗೆ ಚಾಲನೆ ನೀಡಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ಗೆ ಬೆಂಗಳೂರು ಪ್ರಮುಖ ಕೀ ಹಬ್ ಆಗಿದ್ದು, ವಾರಕ್ಕೆ ನಗರದಿಂದ 374 ವಿಮಾನಗಳ ಹಾರಾಟವನ್ನು ನಡೆಸುತ್ತದೆ.

ಡಿಸೆಂಬರ್ 1ರ ಭಾನುವಾರದಿಂದ ಬೆಂಗಳೂರು-ಶ್ರೀ ವಿಜಯಪುರಂ (ಪೋರ್ಟ್ ಬ್ಲೇರ್) ನಡುವೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಸೇವೆ ಆರಂಭಿಸಿದೆ. ಪ್ರತಿದಿನದ ನೇರ ವಿಮಾನ ಸೇವೆ ಇದಾಗಿದ್ದು, ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಿದೆ.

ಬೆಂಗಳೂರು-ಪೋರ್ಟ್ ಬ್ಲೇರ್ ನಡುವಿನ ಉದ್ಘಾಟನಾ ವಿಮಾನ ಡಿಸೆಂಬರ್ 1ರ ಭಾನುವಾರ ಬೆಳಗ್ಗೆ 10.50ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರಿನಿಂದ ಟೇಕಾಫ್ ಆಯಿತು. ಏರ್ ಇಂಡಿಯಾ ಎಕ್ಸ್ಪ್ರೆಸ್ ಜನವರಿ 1, 2025ರಿಂದ ಬೆಂಗಳೂರು-ಚೆನ್ನೈ ನೇರ ವಿಮಾನ ಸೇವೆ ಆರಂಭಿಸುವುದಾಗಿ ಈ ಸಂದರ್ಭದಲ್ಲಿ ಘೋಷಣೆ ಮಾಡಿತು.

ವೇಳಾಪಟ್ಟಿ: ಬೆಂಗಳೂರು-ಪೋರ್ಟ್ ಬ್ಲೇರ್ ನಡುವಿನ ಪ್ರತಿದಿನದ ನೇರ ವಿಮಾನ ಬೆಂಗಳೂರು ನಗರಿಂದ ಬೆಳಗ್ಗೆ 10.50ಕ್ಕೆ ಹೊರಡಲಿದೆ. ಮಧ್ಯಾಹ್ನ 1.15ಕ್ಕೆ ಪೋರ್ಟ್ ಬ್ಲೇರ್ ತಲುಪಲಿದೆ. ವಾಪಸ್ ಆಗುವ ಮಾರ್ಗದಲ್ಲಿ ಮಧ್ಯಾಹ್ನ 1.50ಕ್ಕೆ ಪೋರ್ಟ್ ಬ್ಲೇರ್ನಿಂದ ವಿಮಾನ ಹೊರಡಲಿದ್ದು, ಬೆಂಗಳೂರಿಗೆ ಸಂಜೆ 4.20ಕ್ಕೆ ತಲುಪಲಿದೆ.

ಏರ್ ಇಂಡಿಯಾ ಎಕ್ಸ್ಪ್ರೆಸ್ಗೆ ಬೆಂಗಳೂರು ಪ್ರಮುಖ ಹಬ್ ಆಗಿದೆ. ವಾರಕ್ಕೆ 374 ವಿಮಾನಗಳು ನಗರದಿಂದ ಹಾರಾಟ ನಡೆಸುತ್ತವೆ. ಇವುಗಳಲ್ಲಿ 25 ಪ್ರಾದೇಶಿಕ ಮತ್ತು ಅಬುದಾಬಿ ಮತ್ತು ದಮನ್ಗೆ ಸಹ ವಿಮಾನ ಸೇವೆ ಇದೆ. ಈಗ ಮತ್ತೊಂದು ಮಾರ್ಗದಲ್ಲಿ ವಿಮಾನ ಹಾರಾಟವನ್ನು ಆರಂಭಿಸಲಾಗಿದೆ. ಮರು ನಾಮಕರಣ: ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್-ನಿಕೋಬಾರ್ನ ರಾಜಧಾನಿ ಪೋರ್ಟ್ ಬ್ಲೇರ್. ಕೇಂದ್ರ ಸರ್ಕಾರ ದ್ವೀಪಗಳ ರಾಜಧಾನಿ ಪೋರ್ಟ್ ಬ್ಲೇರ್ ಅನ್ನು ಶ್ರೀ ವಿಜಯ ಪುರಂ ಎಂದು ಮರುನಾಮಕರಣ ಮಾಡಿದೆ. ಈ ಕುರಿತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಐತಿಹಾಸಿಕ ಘೋಷಣೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ದೃಷ್ಟಿಕೋನದಿಂದ ಪ್ರೇರಿತರಾಗಿ, ದೇಶವನ್ನು ವಸಾಹತುಶಾಹಿ ಮುದ್ರೆಗಳಿಂದ ಮುಕ್ತಗೊಳಿಸಲು, ಇಂದು ನಾವು ಪೋರ್ಟ್ ಬ್ಲೇರ್ ಅನ್ನು ಶ್ರೀ ವಿಜಯ ಪುರಂ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದ್ದರು.

ಹಿಂದಿನ ಹೆಸರು ವಸಾಹತುಶಾಹಿ ಪರಂಪರೆಯನ್ನು ಹೊಂದಿದ್ದರೆ, ಶ್ರೀ ವಿಜಯ ಪುರಂ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಸಾಧಿಸಿದ ವಿಜಯ ಮತ್ತು ಅದರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ವಿಶಿಷ್ಟ ಪಾತ್ರವನ್ನು ಸಂಕೇತಿಸುತ್ತದೆ ಎಂದು ಅಮಿತ್ ಶಾ ತಿಳಿಸಿದ್ದರು. ನಮ್ಮ ಸ್ವಾತಂತ್ರ್ಯ ಹೋರಾಟ ಮತ್ತು ಇತಿಹಾಸದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸಾಟಿಯಿಲ್ಲದ ಸ್ಥಾನವಿದೆ. ಒಂದು ಕಾಲದಲ್ಲಿ ಚೋಳ ಸಾಮ್ರಾಜ್ಯದ ನೌಕಾ ನೆಲೆಯಾಗಿ ಕಾರ್ಯನಿರ್ವಹಿಸಿದ ದ್ವೀಪ ಪ್ರದೇಶ ಇದು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ನಮ್ಮ ತಿರಂಗಾವನ್ನು ಮೊದಲ ಬಾರಿಗೆ ಹಾರಿಸಿದ ಸ್ಥಳ ಮತ್ತು ವೀರ್ ಸಾವರ್ಕರ್ ಹಾಗೂ ಇತರ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ರಾಷ್ಟ್ರಕ್ಕಾಗಿ ಹೋರಾಡಿದ ಜೈಲು ಕೂಡ ಇದೇ ಸ್ಥಳದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ನೀರು, ಪ್ರಕೃತಿ, ಪರಿಸರ, ಪ್ರಯತ್ನ, ಶೌರ್ಯ, ಸಂಪ್ರದಾಯ, ಪ್ರವಾಸೋದ್ಯಮ, ಜ್ಞಾನೋದಯ ಮತ್ತು ಸ್ಫೂರ್ತಿಯ ಭೂಮಿಯಾಗಿದೆ ಎಂದು ಹೇಳಿದ್ದಾರೆ. 2014ಕ್ಕೆ ಹೋಲಿಸಿದರೆ ಈಗ ಅಂಡಮಾನ್ಗೆ ಭೇಟಿ

ನೀಡುವ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಉದ್ಯೋಗ ಮತ್ತು ಆದಾಯದ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *