ಬೆಂಗಳೂರು: ಬೆಂಗಳೂರು ಜನರ ಜೀವನಾಡಿಯಾಗಿರುವ ಲಕ್ಷಾಂತರ ಮಂದಿ ನಿತ್ಯ ಸಂಚರಿಸುವ ಬಿಎಂಟಿಸಿ ಬಸ್ ಪ್ರಯಾಣಿಕರಿಗಾಗಿ ಹೊಸ ಮಾರ್ಗಗಳಲ್ಲಿ ಸೇವೆ ಆರಂಭಿಸಿದೆ. ಈ ಹಿಂದೆ ಬಿಂಟಿಸಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಇನ್ನಿತರ ಮಾರ್ಗಗಳಲ್ಲಿ ಬಸ್ ಓಡಿಸಿದ್ದ ಸಾರಿಗೆ ಸಂಸ್ಥೆ, ಇದೀಗ ಕೆಂಗೇರಿ ಬಸ್ ಟರ್ಮಿನಲ್ (ಟಿಟಿಎಂಸಿ) ಬಸ್ಗಳನ್ನು (515-B) ಪರಿಚಯಿಸಿದೆ. ಯಾವೆಲ್ಲ ಮಾರ್ಗದಲ್ಲಿ ನಿಲುಗಡೆ ಇದೆ. ಎಷ್ಟು ಮಂದಿಗೆ ಅನುಕೂಲವಾಗಲಿದೆ, ಸಂಚಾರ ಸಮಯ, ವೇಳಾಪಟ್ಟಿ ಮಾಹಿತಿ ಇಲ್ಲಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಒಟ್ಟು 8 ಬಸ್ಗಳು (515-B) ಕೆಂಗೇರಿ ಟಿಟಿಎಂಸಿಯಿಂದ ದಾಸರಹಳ್ಳಿ ವಲಯ ವ್ಯಾಪ್ತಿಯ ಎಂಟನೇ ಮೈಲಿ ವರೆಗೆ ಸೇವೆ ನೀಡಲಾಗುತ್ತಿದೆ. ಈ ಮಾರ್ಗ ಬಸ್ ಸೇವೆಯಿಂದಾಗಿ ನಗರದ ಪಶ್ಚಿಮ ಮತ್ತು ಉತ್ತರ ಬೆಂಗಳೂರು ನಿವಾಸಿಗಳಿಗೆ ಅನುಕೂಲ ಆಗಲಿದೆ. ಪ್ರತಿ ನಿತ್ಯ ಕಚೇರಿ, ಗಾರ್ಮೆಂಟ್ಸ್ ಕಾರ್ಮಿಕರು, ಉದ್ಯೋಗಿಗಳು ಸೇರಿದಂತೆ ಸಾರ್ವಜನಿಕರಿಗೆ ಹೆಚ್ಚುವರಿ ಸಾರಿಗೆ ಸೌಲಭ್ಯ ಸಿಕ್ಕಂತಾಗಿದೆ.
ಬಸ್ ನಿಲ್ದಾಣ ನಿಲುಗಡೆ ಮತ್ತು ಸಮಯದ ವಿವರ ಬೆಳಗ್ಗೆಯಿಂದ ಸಂಜೆವರೆಗೆ ಈ ನೂತನ ಮಾರ್ಗದಲ್ಲಿ ಬಸ್ ಕಾರ್ಯಾಚರಣೆ ಮಾಡಲಿವೆ. ಕೆಂಗೇರಿ ಟರ್ಮಿನಲ್ ನಿಂದ ಆರ್ ವಿ ಕಾಲೇಜು, ಯುನಿವರ್ಸಿಟಿ ಗೇಟ್, ಯುನಿವರ್ಸಿಟಿ ಕ್ವಾರ್ಟರ್ಸ್, ಅಂಬೇಡ್ಕರ್ ಕಾಲೇಜು, ದೀಪಾ ಕಾಂಪ್ಲೆಕ್ಸ್, ಮುದ್ದಿನಪಾಳ್ಯ, ಭಾರತ್ನಗರ ಒಂದನೇ ಹಂತ, ಅಂಜನಾನಗರ, ಹೇರೋಹಳ್ಳಿ ಕ್ರಾಸ್, ಹೇರೋಹಳ್ಳಿ, ವಿದ್ಯಾಮಾನ್ಯನಗರ, ಅಂದ್ರಹಳ್ಳಿ, ತಿಗಳರಪಾಳ್ಯ, ಇಂದಿರಾನಗರ, ನೆಲಗದರೇನಹಳ್ಳಿ ಮೂಲಕ ಎಂಟನೇ ಮೈಲಿ ತಲುಪಲಿದೆ. ಇದರಿಂದ ಈ ಮಾರ್ಗದ ಸಾರಿಗೆ ಸಂಪರ್ಕ ಸುಧಾರಣೆಗೆ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಅನುಕೂಲ ಕಲ್ಪಿಸಿದೆ.
ಶಿವಾಜಿನಗರದಿಂದ-ದೇವನಹಳ್ಳಿ ಏರ್ಪೋರ್ಟ್ ಬಸ್ ಇದೇ ಮೊದಲ ಬಾರಿಗೆ, ಬಿಎಂಟಿಸಿ ಸಂಸ್ಥೆಯು ಶಿವಾಜಿನಗರದಿಂದ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ನಾನ್ ಎಸಿ ಬಸ್ ಸೇವೆಗಳನ್ನು ಆರಂಭಿಸಿದೆ. ಶುಕ್ರವಾರ ಆರಂಭವಾಗಲಿದ್ದು, ಈ ಬಸ್ ( 293-ಎಪಿ ಮಾರ್ಗ) ಹೆಣ್ಣೂರು, ಕಣ್ಣೂರು, ಬಾಗಲೂರು ಮತ್ತು ಬೇಗೂರು ಮೂಲಕ ಸಂಚರಿಸಲಿವೆ. ಒಟ್ಟು ನಿತ್ಯ ನಾಲ್ಕು ಬಸ್ಗಳು ಓಡಾಡಲಿವೆ.