ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಆರ್.ವಿ ರೋಡಿಂದ ಬೊಮ್ಮಸಂದ್ರ ಯೆಲ್ಲೋ ಲೈನ್ ಮೆಟ್ರೋ ಮಾರ್ಗದಲ್ಲಿ ಸಂಚಾರ ಮಾಡಲು ಕಲ್ಕತ್ತಾದ ಟಿಟಾಗರ್ನಿಂದ ಐದನೇ ಮೆಟ್ರೋ ರೈಲು ಬಂದಿದ್ದು, ಇಂದಿನಿಂದ ಐದನೇ ರೈಲಿನ ಟೆಸ್ಟಿಂಗ್ ಕಾರ್ಯ ಆರಂಭವಾಗಲಿದೆ. ಸದ್ಯದಲ್ಲೇ ಈ ಐದನೇ ರೈಲು ಯೆಲ್ಲೋ ಲೈನ್ನಲ್ಲಿ ಸಂಚಾರ ಮಾಡಲಿದೆ ಎಂದು BMRCL ತಿಳಿಸಿದೆ.
ಇನ್ನು ಮುಂದೆ ಯೆಲ್ಲೋ ಲೈನ್ನಲ್ಲಿ 15 ನಿಮಿಷಕ್ಕೊಂದು ರೈಲು ಸಂಚಾರ
ಈ ಮಾರ್ಗಕ್ಕೆ ಆಗಸ್ಟ್- 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿದ್ದರು. BMRCL ಬಳಿ ಯೆಲ್ಲೋ ಲೈನ್ ನಲ್ಲಿ ಸಂಚಾರ ಮಾಡಲು ನಾಲ್ಕು ರೈಲುಗಳಿದ್ದ ಕಾರಣ 19 ನಿಮಿಷಕ್ಕೊಂದರಂತೆ ಮೆಟ್ರೋ ರೈಲುಗಳು ಸಂಚಾರ ಮಾಡುತ್ತಿತ್ತು. ಐದನೇ ರೈಲು ಟ್ರ್ಯಾಕ್ ಗಿಳಿಯುತ್ತಿದ್ದಂತೆ ಹದಿನೈದು ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಸಂಚಾರ ಮಾಡಲಿದೆ.
ಕೋಲ್ಕತ್ತಾದ ಟೀಟಾಘರ್ ರೈಲ್ವೇ ಸಿಸ್ಟಮ್ ಲಿಮಿಟೆಡ್ನಿಂದ ಹೊಸ ಬೋಗಿಗಳು ಹೊರಟು ಸೆಪ್ಟೆಂಬರ್ 19 ರಂದು ಬೆಂಗಳುರು ತಲುಪಿತ್ತು. ಬೆಂಗಳೂರಿನಲ್ಲಿ ಎಲ್ಲಾ ಬೋಗಿಗಳ ಜೋಡಣೆಯಾದ ಬಳಿಕ 20 ದಿನಗಳ ಪರೀಕ್ಷೆ ನಡೆಯಲಿದೆ ಎಂದು BMRCL ತಿಳಿಸಿತ್ತು. ಇಂದಿನಿಂದ ಸಿಗ್ನಲ್, ಟೆಲಿಕಮ್ಯೂನಿಕೇಷನ್ ಮತ್ತು ಪವರ್ ಸಪ್ಲೈಗಳ ಪರೀಕ್ಷೆಗೆ ರೈಲು ಒಳಪಡಲಿದೆ.
ನವೆಂಬರ್ನಲ್ಲಿ ಬರಲಿವೆ ಮತ್ತಷ್ಟು ರೈಲುಗಳು
ಆರ್.ವಿ ರೋಡ್ ಟು ಬೊಮ್ಮಸಂದ್ರ ಮಾರ್ಗದಲ್ಲಿ ಸಂಚಾರ ಮಾಡಲು ಒಟ್ಟು ಹದಿನೈದು ರೈಲುಗಳನ್ನು ಆರ್ಡರ್ ಮಾಡಿದ್ದು, ಅದರಲ್ಲಿ ಸದ್ಯ ಐದು ರೈಲುಗಳು ಮಾತ್ರ ಬಂದಿವೆ. ಇನ್ನು ಉಳಿದ ಹತ್ತು ರೈಲುಗಳ ಪೈಕಿ ಈ ತಿಂಗಳು ಒಂದು ರೈಲು ಬಂದರೆ, ನವೆಂಬರ್ನಲ್ಲಿ ಎರಡು ಟ್ರೈನ್ ಬರಲಿದೆ. ಹೀಗೆ ಪ್ರತಿ ತಿಂಗಳು ಒಂದು ಎರಡು ರೈಲುಗಳು ಬರಲಿವೆ ಎಂದು BMRCL ತಿಳಿಸಿದೆ. ಈ ಎಲ್ಲಾ ರೈಲುಗಳು ಬಂದರೆ ಗ್ರೀನ್ ಮತ್ತು ಪರ್ಪಲ್ ಮಾರ್ಗದಂತೆ ಯೆಲ್ಲೋ ಲೈನ್ನಲ್ಲೂ ಸಹ ಐದು ನಿಮಿಷಕ್ಕೊಂದರಂತೆ ಮೆಟ್ರೋ ರೈಲುಗಳು ಸಂಚಾರ ಮಾಡಲಿದೆ.
For More Updates Join our WhatsApp Group :
