ಯುವಕರಿಗೆ ಉದ್ಯೋಗ ಸೃಷ್ಟಿಸಲು, ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ

ಸಿಎಂ ಯಾರು ಎಂಬುದು ಮುಖ್ಯವಲ್ಲ : ನಮಗೆ ಅಭಿವೃದ್ಧಿ ಮುಖ್ಯ

ಮಂಗಳೂರು: “ಕರಾವಳಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಒಳನಾಡಿನಲ್ಲಿ ಮನಸು ಮನಸುಗಳ ನಡುವೆ ಶಾಂತಿ ಕದಡಿ ಹೋಗಿದೆ. ಇದು ಸರಿ ಹೋಗಲು ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು. ಇದಕ್ಕಾಗಿ ಸರ್ಕಾರ ಈ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಗೆ ತರುವ ಆಲೋಚನೆ ಹೊಂದಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಪುತ್ತೂರಿನ ಕೊಂಬೆಟ್ಟುವಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ನಡೆದ, ಶಾಸಕ ಅಶೋಕ್ ರೈ ಅವರ ಸಾರಥ್ಯದ ರೈ ಎಸ್ಟೇಟ್ಸ್ ಎಜುಕೇಷನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಏರ್ಪಡಿಸಿದ್ದ “ಅಶೋಕ ಜನ-ಮನ” ವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು;

“ದಕ್ಷಿಣ ಕನ್ನಡ ಜಿಲ್ಲೆ ಬರಡು ಭೂಮಿಯಂತಾಗುತ್ತಿದೆ. ಕೋಮು ಗಲಭೆ ಸೇರಿದಂತೆ ಇತರ ಸಮಸ್ಯೆಗಳಿಂದಾಗಿ ವಿದ್ಯಾಸಂಸ್ಥೆಗಳಿಗೆ ಹೊರ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಬರುತ್ತಿಲ್ಲ. ಇಲ್ಲಿ ಹುಟ್ಟಿದ ಅನೇಕ ಬ್ಯಾಂಕ್ ಗಳು ಮಾಯವಾಗಿವೆ. ಇಲ್ಲಿನ ಯುವಕರು ಸೌದಿ ಅರೇಬಿಯಾ, ಮುಂಬೈ, ಬೆಂಗಳೂರಿಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ.

ಈ ಭಾಗದ ನಾಯಕರು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ ಎಂದು ಸಲಹೆ ಕೊಟ್ಟಿದ್ದಾರೆ. ಈ ಭಾಗದಲ್ಲಿ ಅತಿ ಹೆಚ್ಚು ದೇವಸ್ಥಾನಗಳಿವೆ, ಸಮುದ್ರ ತೀರವಿದೆ. ಆದ ಕಾರಣ ಈ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಗೆ ಕ್ರಮ ವಹಿಸಲಾಗುವುದು. ಅತಿ ದೊಡ್ಡ ಬಂದರು ಇದ್ದರೂ ಸಹ ಮಂಗಳೂರಿನಲ್ಲಿ ಉತ್ತಮವಾದ ಫೈವ್ ಸ್ಟಾರ್ ಹೋಟೆಲ್ ಗಳಿಲ್ಲ.

ಪುತ್ತೂರಿನ ಅಭಿವೃದ್ಧಿಗೆ ಅಶೋಕ್ ರವರು ಅನೇಕ ಯೋಜನೆಗಳನ್ನು ಇಟ್ಟುಕೊಂಡು ಮನವಿ ಮಾಡಿದ್ದಾರೆ. ಉಪಚುನಾವಣೆ ಇರುವ ಕಾರಣ ಈಗ ಅದನ್ನು ಬಹಿರಂಗಪಡಿಸಲು ಆಗುವುದಿಲ್ಲ. ಅವರ ಮನವಿಗಳನ್ನು ಹಂತ ಹಂತವಾಗಿ ಪೂರೈಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೆ ಎರಡು ಸ್ಥಾನಗಳಷ್ಟೇ ಸಿಕ್ಕಿರಬಹುದು. ಆದರೆ ನಾವು ಎಲ್ಲಾ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡುತ್ತೇವೆ.

Leave a Reply

Your email address will not be published. Required fields are marked *