ಬೆಂಗಳೂರು: ಸರ್ಕಾರಿ ನೇಮಕಾತಿಗಳಲ್ಲಿ ಮೀಸಲು ಪ್ರಮಾಣ ಶೇ.50ರಿಂದ ಶೇ.56ಕ್ಕೆ ಹೆಚ್ಚಳ ಮಾಡಿದ್ದ ರಾಜ್ಯ ಸರ್ಕಾರದ ಆದೇಶದ ಆಧಾರದ ಮೇಲೆ ಕರ್ನಾಟಕ ಲೋಕಸೇವಾ ಆಯೋಗವು 2024ರ ಫೆ.26ರಂದು ಹೊರಡಿಸಿದ್ದ 384 ಗೆಜೆಟೆಡ್ ಪ್ರೊಬೇಷನರ್ ನೇಮಕಾತಿ ಅಧಿಸೂಚನೆಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ರದ್ದುಪಡಿಸಿ ಆದೇಶಿಸಿದೆ.

ಈ ಆದೇಶದಿಂದ ಕೆಎಎಸ್ ಅಧಿಕಾರಿಗಳ ನೇಮಕ ಮತ್ತೆ ಅತಂತ್ರಕ್ಕೆ ಸಿಲುಕಿದ್ದು, ಇದೀಗ ಸರ್ಕಾರದ ಮುಂದಿನ ನಡೆಯ ಮೇಲೆ ಆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬಿ.ಎನ್. ಮಧು ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೆಎಟಿ ಅಧ್ಯಕ್ಷ ನ್ಯಾ. ಆರ್.ಬಿ. ಬೂದಿಹಾಳ್ ಹಾಗೂ ಆಡಳಿತ ಸದಸ್ಯ ರಾಘವೇಂದ್ರ ಔರಾದ್ಕರ್ ಅವರಿದ್ದ ನ್ಯಾಯಪೀಠ ಕಳೆದ ಮೇ 28ರಂದು ಈ ಆದೇಶ ಮಾಡಿದೆ.
ಕೆಎಎಸ್ ಹುದ್ದೆಗಳ ಭರ್ತಿ ಜೊತೆಗೆ 2022ರ ಡಿ.12ರಂದು ಸರ್ಕಾರ ಮೀಸಲು ಹೆಚ್ಚಳಕ್ಕೆ ಹೊರಡಿಸಿದ್ದ ಆದೇಶವನ್ನು ಸಹ ಕೆಎಟಿ ರದ್ದುಗೊಳಿಸಿ, ಪ್ರತಿವಾದಿ ಕೆಪಿಎಸ್ಸಿಯು ಕಾನೂನು ಪ್ರಕಾರ ನೇಮಕಕ್ಕೆ ಹೊಸದಾಗಿ ಅಧಿಸೂಚನೆ ಹೊರಡಿಸಲು ಸ್ವತಂತ್ರವಿದೆ ಎಂದು ಪೀಠ ಸ್ಪಷ್ಟಪಡಿಸಿದೆ.
ಕೆಎಎಸ್ ಅಧಿಕಾರಿಗಳ ನೇಮಕಕ್ಕೆ ಮುಖ್ಯ ಪರೀಕ್ಷೆ ನಡೆದು ಇನ್ನೇನು ಫಲಿತಾಂಶ ಹೊರಬೀಳಬೇಕಿತ್ತು. ಈ ಹಂತದಲ್ಲಿ ಹೊರಬಿದ್ದ ಕೆಎಟಿ ಆದೇಶವು ಅಭ್ಯರ್ಥಿಗಳಿಗೆ ಸಂಕಷ್ಟ ತಂದೊಡ್ಡಿದೆ. ಇದೀಗ ಸರ್ಕಾರವು ನೇಮಕಾತಿ ಪ್ರಕ್ರಿಯೆಯನ್ನು ಊರ್ಜಿತಗೊಳಿಸಬೇಕಾದರೆ, ಕೆಎಟಿ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕಾಗಿದೆ.