ಬೆಂಗಳೂರು: ರಾಜ್ಯದಲ್ಲಿ ಅಪರಾಧ ಪ್ರಕರಣಗಳನ್ನು CBI ತನಿಖೆ ಮಾಡುವ ಸಂಬಂಧದ ಅಧಿಸೂಚನೆಯನ್ನು ವಾಪಸ್ ಪಡೆಯಲಾಗಿದೆ. ಸಿಬಿಐ ದುರ್ಬಳಕೆ ಆಗುತ್ತಿದ್ದು, ಕಾನೂನು ಬದ್ಧವಾಗಿ ತನಿಖೆ ಮಾಡುತ್ತಿಲ್ಲ. ಅಲ್ಲದೇ, ಸಿಬಿಐಗೆ ಕೊಟ್ಟ ಪ್ರಕರಣಗಳಲ್ಲಿ ಕೆಲವು ಚಾರ್ಜ್ ಶೀಟ್ ಸರಿಯಾಗಿ ಸಲ್ಲಿಸುತ್ತಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಸಚಿವ ಸಂಪುಟ ಸಭೆ ನಂತರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಿಬಿಐ ಪೂರ್ವಾಗ್ರಹ ಪೀಡಿತವಾಗಿ ಕೆಲಸ ಮಾಡುವುದನ್ನು ಗಮನಿಸಿದ್ದೇವೆ. ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರವು ದುರ್ಬಳಕೆ ಮಾಡುತ್ತಿರುವ ಸಂಸ್ಥೆಗಳು ಪೂರ್ವಾಗ್ರಹ ಪೀಡಿತವಾಗಿದೆ ಎಂದರು.
ರಾಜ್ಯಪಾಲರು ಮೇಲಿಂದ ಮೇಲೆ ಒಂದು ರೀತಿ ಅಸಹನೆಯ ವರ್ತನೆಯಿಂದ ಪತ್ರ ಬರೆಯುತ್ತಿದ್ದಾರೆ. ತಕ್ಷಣ ಮಾಹಿತಿ ಕೊಡಿ ಎಂದು ಹೇಳುತ್ತಿದ್ದಾರೆ. ಪರಿಶೀಲನೆ ಮಾಡಿ ಯಾವುದೇ ದಾಖಲೆಗಳ ಮಾಹಿತಿಗಳನ್ನು ಮುಖ್ಯ ಕಾರ್ಯದರ್ಶಿ ಅವರು ಕ್ಯಾಬಿನೆಟ್ಗೆ ತಂದು ನಂತರ ಮುಂದುವರೆಯಲು ಸೂಚನೆ ನೀಡಲಾಗಿದೆ. ಯಾವುದೇ ದಾಖಲೆಗಳನ್ನು ಪಡೆಯಬೇಕಾದರೆ ಕ್ಯಾಬಿನೆಟ್ ತೀರ್ಮಾನಿಸಿದ ನಂತರ ಆ ದಾಖಲೆಗಳನ್ನು ರಾಜ್ಯಪಾಲರಿಗೆ ಕೊಡಲು ನಿರ್ಧಾರ ಕೈಗೊಳ್ಳಲಾಗಿದೆ. ದಾಖಲೆಗಳ ಮಾಹಿತಿ ಸೋರಿಕೆ ಹಿನ್ನೆಲೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ರಾಜ್ಯಪಾಲರ ಕಚೇರಿಯಿಂದ ಮೇಲಿಂದ ಮೇಲೆ ಸೋರಿಕೆಯಾಗುತ್ತಿದೆ. ಈಗ ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸುವ ಕೆಲಸ ನಡೆದಿದೆ ಎಂದು ಆರೋಪಿಸಿದರು.