ರಾಜ್ಯಪಾಲರಿಂದ ಸಿಎಸ್ಗೆ ಮರು ಪರಿಶೀಲನೆ ಪತ್ರ.
ಬೆಂಗಳೂರು: ಎಸ್.ಎಸ್.ಎಲ್.ಸಿ. ಹಿಂದಿ ಪರೀಕ್ಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ರಾಜ್ಯ ಸರ್ಕಾರದ ನಿರ್ಧಾರ ವಿಚಾರ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿಗೆ ರಾಜ್ಯಪಾಲರು ಪತ್ರ ಬರೆದಿದ್ದಾರೆ. ಈ ಕುರಿತು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಲೆಟರ್ ಬರೆದಿದ್ದು, ಸರ್ಕಾರದ ನಿರ್ಧಾರವನ್ನು ಮರು ಪರಿಶೀಲನೆ ಮಾಡುವಂತೆ ತಿಳಿಸಲಾಗಿದೆ. SSLC ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕಗಳನ್ನು ನೀಡದೆ ಕೇವಲ ಗ್ರೇಡ್ ನೀಡುವ ನಿರ್ಧಾರವನ್ನು ಮರು ಪರಿಶೀಲಿಸಿ. ಭಾಷಾವೈವಿಧ್ಯತೆ, ಜಾಗೃತಿ, ಬೌದ್ಧಿಕ ಬೆಳವಣಿಗೆಯನ್ನು ಬೆಳೆಸುವಲ್ಲಿ ತೃತೀಯ ಭಾಷೆಯು ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಗ್ರೇಡ್ ನೀಡಿದರೆ ಶೈಕ್ಷಣಿಕ ಪ್ರಾಮುಖ್ಯತೆ ಕಡಿಮೆ ಮಾಡಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಬಾರದು ಮತ್ತು ಅಂಕ ಪಟ್ಟಿಯಿಂದ ಹೊರಗಿಡುವಂತೆ ವಿವಿಧ ಕನ್ನಡ ಪರ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿದ್ದವು. ಆ ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆಗೆ 525 ಅಂಕಗಳು ನಿಗದಿ ಮಾಡಿ, ತೃತೀಯ ಭಾಷೆಯ ಅಂಕಕ್ಕೆ ಸರ್ಕಾರ ಕೊಕ್ ನೀಡಿತ್ತು. ಇನ್ನು ಮುಂದೆ ತೃತೀಯ ಭಾಷೆಯ (ಹಿಂದಿ, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಮತ್ತು ಮರಾಠಿ) ಅಂಕಗಳನ್ನು ಒಟ್ಟು ಅಂಕಗಳಿಗೆ ಪರಿಗಣಿಸಲಾಗುವುದಿಲ್ಲ. ಬದಲಿಗೆ ತೃತೀಯ ಭಾಷೆ ಪರೀಕ್ಷೆಯ ಅಂಕವನ್ನು ಗ್ರೇಡ್ ಮೂಲಕ ನೀಡಲಾಗುತ್ತದೆ. ಆದರೆ ವಿದ್ಯಾರ್ಥಿಗಳು ತೃತೀಯ ಭಾಷೆಯ ಪರೀಕ್ಷೆಯನ್ನು ಬರೆಯುವುದು ಕಡ್ಡಾಯ ಎಂದು ಶಿಕ್ಷಣ ಇಲಾಖೆ ಹೇಳಿರೋದು ಭಾರಿ ಚರ್ಚೆಗೂ ಗ್ರಾಸವಾಗಿತ್ತು. ಕರ್ನಾಟಕ ಹೈಕೋರ್ಟ್ನಲ್ಲಿ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸಲ್ಲಿಕೆಯಾಗಿರುವ ನಡುವೆ ರಾಜ್ಯಪಾಲರ ಕಡೆಯಿಂದ ಬಂದಿರುವ ಈ ಪತ್ರ ಪ್ರಾಮುಖ್ಯತೆ ಪಡೆದಿದೆ.
For More Updates Join our WhatsApp Group :




