ಬೆಂಗಳೂರು : ಮನೆ ಕಟ್ಟಬೇಕೆಂಬ ಆಸೆ ಯಾರಿಗಿರಲ್ಲ ಹೇಳಿ. ಈ ಆಸೆ ನೆರವೇರಿದರೂ ನಕ್ಷೆ ಪಡೆಯಲು ಅಲೆದಾಡುವಂತಹ ಪರಿಸ್ಥಿತಿ ಇತ್ತು. ಆದರೆ ಇದೀಗ ಇದನ್ನು ಸುಲಭವಾಗಿ ಕೇವಲ ಒಂದೇ ದಿನದಲ್ಲಿ ಪಡೆಯಲು ಕಾರ್ಯಕ್ರಮವೊಂದನ್ನು ಬಿಬಿಎಂಪಿ ಆಯೋಜನೆ ಮಾಡಿದೆ.

ಮನೆ ಕಟ್ಟಿ ನೋಡಿ.. ಮದುವೆ ಆಗಿ ನೋಡು ಎಂಬ ಗಾದೆ ಇದೆ. ಇದು ನೆರವೇರಿದರೆ, ಜೀವನವೇ ಸಾರ್ಥಕವಾದಂತೆ. ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿ ಒಂದು ಮನೆ ಕಟ್ಟಲು ಸೈಟ್ ತೆಗೆದುಕೊಂಡಿದ್ದಾರೆಂದರೆ ಬಿಲ್ಡಿಂಗ್ ಪ್ಲಾನ್ ತುಂಬಾ ಪ್ರಮುಖ ಆಗುತ್ತದೆ. ಇದನ್ನು ಪಡೆದುಕೊಳ್ಳಲು ಇಷ್ಟು ದಿನ ಅಲೆದಾಡಬೇಕಾಗಿತ್ತು. ಆದರೆ, ಇದೀಗ ಇದನ್ನು ಬಿಬಿಎಂಪಿ ಸರಳ ಮಾಡಿಕೊಟ್ಟಿದ್ದು, ಇದರಿಂದ ಸಾವರ್ಜನಿಕರಿಗೆ ತುಂಬಾ ಸಹಾಯ ಆದಂತಾಗಿದೆ.
ಮನೆ ನಿರ್ಮಾಣ ಮಾಡುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಮನೆ ನಿರ್ಮಾಣಕ್ಕೆ ಕಟ್ಟದ ಪ್ಲಾನ್ ಪಡೆಯಲು ಸಾರ್ವಜನಿಕರ ಅಲೆದಾಟವನ್ನು ತಪ್ಪಿಸಿ ಕೇವಲ 24 ಗಂಟೆಯಲ್ಲಿ ತಾತ್ಕಾಲಿಕ ನಕ್ಷೆ ನೀಡುವ ನಂಬಿಕೆ ನಕ್ಷೆ ವಿತರಣೆ ಮಾಡುವ ಕಾರ್ಯಕ್ರಮವನ್ನು ಬಿಬಿಎಂಪಿ ಮರು ಜಾರಿಗೊಳಿಸಿದೆ. 2024ರ ಮಾರ್ಚ್ನಿಂದ ನಂಬಿಕೆ ನಕ್ಷೆ ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ. ಈ ಯೋಜನೆಯ ಅನ್ವಯ 375 ಚದರ ಮೀಟರ್ ವಿಸ್ತೀರ್ಣದ ವಸತಿ ಕಟ್ಟಡಗಳಿಗೆ ಹೆಚ್ಚು ಸಮಯ ತೆಗೆದುಕೊಳ್ಳದೆ, ನಕ್ಷೆ ವಿತರಣೆ ಮಾಲಾಗುತ್ತದೆ. ತಾತ್ಕಾಲಿಕ ನಕ್ಷೆ ನೀಡಿದ ಬಳಿಕ ದಾಖಲಾತಿ ಪರಿಶೀಲನೆ ಮಾಡಿ 15 ದಿನಗಳಲ್ಲಿ ಅನುಮೋದಿತ ನಕ್ಷೆ ನೀಡಲಾಗುತ್ತದೆ. ಪಾಲಿಕೆ ಯೋಜನಾ ವಿಭಾಗದ ಅಧಿಕಾರಿಗಳು ಅರ್ಜಿಗಳ ಪರಿಶೀಲನೆ ನಡೆಸಿ ಅನುಮೋದನೆ ನೀಡಿದ್ದಾರೆ.
ಈ ಯೋಜನೆಯ ಉದ್ದೇಶ ಏನು?: ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ನಂಬಿಕೆ ನಕ್ಷೆ ಯೋಜನೆಯಿಂದ ಮನೆ ಕಟ್ಟುವ ಬಡ, ಮಧ್ಯಮ ವರ್ಗದವರಿಗೆ ಹೆಚ್ಚು ಅನುಕೂಲ ಆಗಿದೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಪಾರದರ್ಶಕ ರೀತಿಯಲ್ಲಿ ಯಾವುದೇ ಖರ್ಚಿಲ್ಲದೆ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಈ ಹಿಂದೆ ಕಟ್ಟದ ನಕ್ಷೆ ಪಡೆಯಬೇಕೆಂದರೆ ತಿಂಗಳುಗಟ್ಟಲ್ಲೇ ಕಾಯಬೇಕಿತ್ತು. ಇದರಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದರು. ಈ ಸಮಸ್ಯೆಗೆ ಪರಿಹಾರ ನೀಡಲು ಕಡಿಮೆ ವಿಸ್ತೀರ್ಣದ ವಸತಿ ಕಟ್ಟಡಗಳಿಗೆ ಯಾರೂ ಅಡ್ಡಿ ಪಡಿಸದಂತೆ ಪ್ಲಾನ್ ವಿತರಣೆ ಮಾಡಲು ಆನ್ಲೈನ್ ಸೌಲಭ್ಯಕ್ಕೆ ಕಳೆದ ಸೆಪ್ಟೆಂಬರ್ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದ್ದು, ಈವರೆಗೂ 9,000 ಮಂದಿಗೆ ನಕ್ಷೆ ವಿತರಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?: ಇದಕ್ಕಾಗಿಯೇ ಸ್ವತ್ತಿನ ಇ-ಖಾತಾ, ನಿವೇಶನದ ಭಾವಚಿತ್ರ, ಸ್ವತ್ತಿನ ವಿಸ್ತೀರ್ಣ ಅಗತ್ಯ ದಾಖಲೆಗಳು ಆಗಿವೆ. ಇ-ಖಾತಾ ಕಡ್ಡಾಯ ಮಾಡಲಾಗಿದ್ದು, ಇ-ಖಾತಾದಲ್ಲಿ ಸ್ವತ್ತಿನ ವಿವರ, ಆಸ್ತಿದಾರರ ಮಾಹಿತಿ, ಚೆಕ್ಕುಬಂದಿ, ತೆರಿಗೆ ಪಾವತಿ ರಶೀದಿ, ವಿಳಾಸ ದೃಢೀಕರಣ, ಆಧಾರ್ ಕಾರ್ಡ್ ಮಾಹಿತಿ ಪರಿಶೀಲಿಸಿ ಅರ್ಜಿಯನ್ನು ಅನುಮೋದಿಸಲಾಗುವುದು. ಮನೆ ಕಟ್ಟುವವರು ಇಲ್ಲಿ ನೀಡಲಾಗಿರುವ https://bpas.bbmpgov.in/BPAMSClient4/Default.aspx ಗೆ ಬೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
