ಬೆಂಗಳೂರು: ರಾಜ್ಯ ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 2024-25 ಸಾಲಿನ ಬಜೆಟ್ನಲ್ಲಿ 34,406 ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದು, ಈ ಪೈಕಿ ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಇಲಾಖೆಗೆ ನೀಡಿದ ಒಟ್ಟು ಅನುದಾನದಲ್ಲಿ ಗೃಹಲಕ್ಷ್ಮಿ ಪಾಲೇ ಹೆಚ್ಚಾಗಿದೆ. ಅಂದರೆ ಒಟ್ಟು ಅನುದಾನದ ಶೇ.83 ರಷ್ಟನ್ನು ಗೃಹಲಕ್ಷ್ಮಿ ಯೋಜನೆಗೆ ಮೀಸಲಿಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತನ್ನ ಬಹುತೇಕ ಆದ್ಯತೆಯನ್ನು ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ಕೇಂದ್ರೀಕರಿಸಿದೆ. ಯಜಮಾನಿಯರಿಗೆ ಮಾಸಿಕ 2,000 ರೂ. ನೀಡುವ ಅತಿ ದೊಡ್ಡ ಯೋಜನೆ ಇದಾಗಿದ್ದು, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ನೀಡುತ್ತಿರುವ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಅತಿ ಹೆಚ್ಚು ಆರ್ಥಿಕ ಹೊರೆ ಹೊಂದಿರುವ ಗ್ಯಾರಂಟಿ ಯೋಜನೆಯಾಗಿದೆ.
ಇಲಾಖೆಯಲ್ಲಿ ಗೃಹಲಕ್ಷ್ಮಿಯದ್ದೇ ಪಾರುಪತ್ಯ: ಕೆಡಿಪಿ ಪ್ರಗತಿ ಪರಿಶೀಲನಾ ಅಂಕಿಅಂಶದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಇತರ ಯೋಜನೆಗಳಿಗೆ 5,798 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಇಲಾಖೆಯಲ್ಲಿ ಜುಲೈವರೆಗೆ ವಿವಿಧ ಯೋಜನೆಗಳಿಗೆ ಒಟ್ಟು 7,486 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಈವರೆಗೆ ಒಟ್ಟು 6,748 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅಂದರೆ ಒಟ್ಟು ಹಂಚಿಕೆಯ ಪ್ರತಿಯಾಗಿ 19.61% ಆರ್ಥಿಕ ಪ್ರಗತಿ ಕಂಡಿದೆ.
ಇಲಾಖೆಗೆ ಬಿಡುಗಡೆಯಾದ ಒಟ್ಟು ಅನುದಾನದ ಪೈಕಿ ಗೃಹಲಕ್ಷ್ಮಿಗೆ ಜುಲೈವರೆಗೆ 6,755 ಕೋಟಿ ರೂ. ಬಿಡುಗಡೆ ಮಾಡಿದ್ದರೆ, 6,133 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅಂದರೆ ಗೃಹಲಕ್ಷ್ಮಿ ಯೋಜನೆ ಒಟ್ಟು ಹಂಚಿಕೆ ಪ್ರತಿಯಾಗಿ ಶೇ.43 ಆರ್ಥಿಕ ಪ್ರಗತಿ ಕಂಡಿದೆ. ಇಲಾಖೆಗೆ ಒಟ್ಟು ಬಿಡುಗಡೆ ಮಾಡಲಾದ ಅನುದಾನದ ಪೈಕಿ 90% ಅನುದಾನ ಬಿಡುಗಡೆ ಮಾಡಿರುವುದು ಗೃಹ ಲಕ್ಷ್ಮಿ ಯೋಜನೆಗೆ. ಉಳಿದಂತೆ ಇಲಾಖೆಯ ಇತರ ಯೋಜನೆಗಳಿಗೆ ಕೇವಲ 10%ದಷ್ಟು ಮಾತ್ರ ಅನುದಾನ ಬಿಡುಗಡೆ ಮಾಡಲಾಗಿದೆ.
ಇತರೆ ಪ್ರಮುಖ ಯೋಜನೆಗಳಿಗೆ ಶೂನ್ಯ ಬಿಡುಗಡೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಬರುವ ಪ್ರಮುಖ ಯೋಜನೆಗಳಿಗೆ ಅನುದಾನ ಬಿಡುಗಡೆ ತೃಪ್ತಿದಾಯಕವಾಗಿಲ್ಲ. ಕೆಡಿಪಿ ಪ್ರಗತಿ ಅಂಕಿಅಂಶದಂತೆ ಇಲಾಖೆಯ ಮಹತ್ವದ ಭಾಗ್ಯಲಕ್ಷ್ಮಿ ಯೋಜನೆಗೆ 2024-25 ಸಾಲಿನಲ್ಲಿ ಒಟ್ಟು 224 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಆದರೆ, ಜುಲೈವರೆಗೆ ಭಾಗ್ಯಲಕ್ಷ್ಮಿ ಯೋಜನೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಇತ್ತ ಅಂಗನವಾಡಿ ನಿರ್ವಹಣೆಗೆ 40 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಆದರೆ ಈವರೆಗೂ ಒಂದು ರೂ. ಕೂಡ ಬಿಡುಗಡೆ ಮಾಡಿಲ್ಲ.