ಕಟ್ಟಡ ನಿರ್ಮಾಣಕ್ಕು ಮುನ್ನ ಫ್ಲಾಟ್ ಖರೀದಿಸಿದರೆ ಜಿಎಸ್‌ಟಿ ಪಾವತಿ ಕಡ್ಡಾಯ

ಕಟ್ಟಡ ನಿರ್ಮಾಣಕ್ಕು ಮುನ್ನ ಫ್ಲಾಟ್ ಖರೀದಿಸಿದರೆ ಜಿಎಸ್ಟಿ ಪಾವತಿ ಕಡ್ಡಾಯ

ಬೆಂಗಳೂರು: ‘ವಸತಿ ಸಂಕೀರ್ಣದ ಕಟ್ಟಡ ನಿರ್ಮಾಣಕ್ಕೂ ಮುನ್ನವೇ ಫ್ಲ್ಯಾಟ್ ಕಾಯ್ದಿರಿಸಿದ್ದರೆ ಅಂತಹ ಸಮಯದಲ್ಲಿ ಖರೀದಿದಾರರು; ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸುವುದು ಕಡ್ಡಾಯ’ ಎಂದು ಹೈಕೋರ್ಟ್ ಆದೇಶಿಸಿದೆ.

‘ಕೇಂದ್ರ, ಸರಕು ಮತ್ತು ಸೇವಾ ತೆರಿಗೆ ಕಾಯ್ದೆ-2017ರ (ಸಿಜಿಎಸ್‌ಟಿ) ಅನ್ವಯ ಫ್ಲ್ಯಾಟ್ ನೋಂದಣಿಗೂ ಮುನ್ನ ಜಿಎಸ್‌ಟಿ ಪಾವತಿಸಬೇಕು’ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನೀಡಿದ್ದ ನೋಟಿಸ್ ಪ್ರಶ್ನಿಸಿ ಮಲ್ಲತ್ತಹಳ್ಳಿಯ ಬಿ.ಜಿ.ಪರಮೇಶ್ವರ ಸೇರಿದಂತೆ ಇತರರು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಕಟ್ಟಡದ ಸಿಸಿ (ಕಂಪ್ಲಿಶನ್ ಸರ್ಟಿಫಿಕೇಟ್-ಪೂರ್ಣತಾ ಪ್ರಮಾಣ ಪತ್ರ) ವಿತರಣೆಗೂ ಮುನ್ನ ಭಾಗಶಃ ಅಥವಾ ಪೂರ್ಣ ಹಣ ಪಾವತಿಸಿದ್ದರೆ ಅದು ಸೇವೆಯಾಗಲಿದೆ. ಹಾಗಾಗಿ, ಅದಕ್ಕೆ ಜಿಎಸ್‌ಟಿ ಅನ್ವಯವಾಗುತ್ತದೆ’ ಎಂದು ತಿಳಿಸಿದೆ.

ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ‘ಸಿಜಿಎಸ್‌ಟಿ ನಿಬಂಧನೆ ಅನುಸಾರ; ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಮೊದಲೇ ಒಪ್ಪಂದ ಮಾಡಿಕೊಂಡರೆ ಅದು ಕೆಲಸದ ಒಪ್ಪಂದ ಎನಿಸುತ್ತದೆ. ಅದಕ್ಕೆ ನಿರ್ದಿಷ್ಟ ದರದಲ್ಲಿ ಸೇವಾ ತೆರಿಗೆ ಪಾವತಿಸಲೇಬೇಕಾಗುತ್ತದೆ’ ಎಂದು ವಿವರಿಸಿದೆ.

ಎಲ್ಲ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಪೀಠ, ‘ಅರ್ಜಿದಾರರು ಈಗಾಗಲೇ ಫ್ಲ್ಯಾಟ್ ಹಂಚಿಕೆಯ ನೋಂದಣಿ ಮಾಡಿಸಿಕೊಂಡಿಲ್ಲ ಎಂದಾದರೆ ಬಿಡಿಎ ಕೋರಿರುವ ಜಿಎಸ್‌ಟಿಯನ್ನು ಕಾನೂನಿನ ಪ್ರಕಾರ ಪಾವತಿಸಿದ ನಂತರ ಫ್ಲ್ಯಾಟ್ ವಿತರಣೆ ಸೇರಿದಂತೆ ವಹಿವಾಟು ಪೂರ್ಣಗೊಳಿಸಿಕೊಳ್ಳಲು ಅರ್ಹರಾಗಿರುತ್ತಾರೆ’ ಎಂದು ಸ್ಪಷ್ಟಪಡಿಸಿದೆ.

ಪ್ರಕರಣವೇನು?: ಅರ್ಜಿದಾರರಿಗೆ ವಳಗೆರೆಹಳ್ಳಿ 6ನೇ ಹಂತದ ಬಿಡಿಎ ವಸತಿ ಸಂಕೀರ್ಣದಲ್ಲಿ 2018ರ ಏಪ್ರಿಲ್ 9ಕ್ಕೆ ಎರಡು ಬೆಡ್ ರೂಂಗಳ ಫ್ಲ್ಯಾಟ್ ಹಂಚಿಕೆ ಮಾಡಲಾಗಿತ್ತು. ಫ್ಲ್ಯಾಟ್ ನಿರ್ಮಾಣವಾಗುತ್ತಿದ್ದ ಸಮಯದಲ್ಲೇ ಅದರ ಖರೀದಿಗೆ ಮುಂದಾಗಿದ್ದ ಅರ್ಜಿದಾರರು ಭಾಗಶಃ ಹಣ ಪಾವತಿಸಿದ್ದರು. 2018ರ ಡಿಸೆಂಬರ್ 31ರಂದು ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು. ತದನಂತರ ನೋಂದಣಿಗೆ ಮುಂದಾದಾಗ ಬಿಡಿಎ: ‘ಸಿಜಿಎಸ್‌ಟಿ ಕಾಯ್ದೆ-2017ರ ಅನ್ವಯ ಜಿಎಸ್‌ಟಿ ಸೇರಿಸಿ. ಉಳಿದ ಹಣ ಪಾವತಿಸಿ, ಫ್ಲ್ಯಾಟ್ ನೋಂದಣಿ ಮಾಡಿಕೊಳ್ಳಬೇಕು’ ಎಂದು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

Leave a Reply

Your email address will not be published. Required fields are marked *