ಗುಬ್ಬಿ: ಸರ್ಕಾರದ ಮೇಲೆ ಆಪಾದನೆ ಮಾಡಲೆಬೇಕು ಎನ್ನುವವರು ಮೊಸರಲ್ಲಿ ಕಲ್ಲು ಹುಡುಕುವವರು. ಈ ಸರ್ಕಾರವನ್ನು ತೆಗಳಬೇಕು ಅಷ್ಟೆ. ಈಗಾಗಲೇ ಸರಕಾರ ಎಲ್ಲಾ ಶಾಸಕರ 224 ಕ್ಷೇತ್ರಗಳಿಗೂ ಸುಮಾರು 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು. ಅವರು ಮುದಿಗೆರೆ, ಹೇರೂರು, ರಂಗನಾಥಪುರ, ಸಿ ನಂದಿಹಳ್ಳಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷರ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ವೇದಿಕೆಯಲ್ಲಿ ಮಾತನಾಡುವಾಗ ಅಧ್ಯಕ್ಷರನ್ನು ಯಾವಾಗ ಮಾಡಬೇಕು ಎಂಬುದು ನನಗೆ ಗೊತ್ತಿದೆ, ಆರು ತಿಂಗಳಲ್ಲಿ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದೆ. ಮಾತಿನ ರಭಸದಲ್ಲಿ ಮಾತನಾಡಿದ್ದೇನೆ, ಮುಂದಿನ ದಿನದಲ್ಲಿ ಕಾದು ನೋಡೋಣ ಎಂದರು.
ಬಗರ್ ಹುಕುಂ ಜಮೀನು ಮಂಜೂರಾತಿ, ಜಮೀನು ದುರಸ್ತಿಯಂತಹ ಕೆಲಸಗಳು ಕಂದಾಯ ಇಲಾಖೆಯಲ್ಲಿ ಬಾಕಿ ಇದ್ದು ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ವಸತಿ ಯೋಜನೆಯಲ್ಲಿ ತಾಲೂಕಿಗೆ ಸುಮಾರು ನಾಲ್ಕು ಸಾವಿರ ಮನೆಗಳನ್ನು ನೀಡಬೇಕೆಂದು ಮನವಿ ಮಾಡಿದ್ದೇನೆ. ಸರ್ಕಾರವು ಹಿಂದೆ ಒಂದೂವರೆ ಲಕ್ಷ ನೀಡುತ್ತಿತ್ತು. ಈಗ ಅದನ್ನು ೩ ಲಕ್ಷಕ್ಕೆ ಏರಿಸಿ ಬಡವರ ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ರಾಜ್ಯಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರದ ಮಟ್ಟದಲ್ಲಿ ಅವರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಕೆ ಆರ್ ವೆಂಕಟೇಶ್, ಸಿ ಎಸ್ ಪುರ ವಿಎಸ್ಎಸ್ಎನ್ ಅಧ್ಯಕ್ಷ ಜೆ ಪಿ ಬಸವರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೇಶ್, ಗ್ರಾಮ ಪಂಚಾಯಿತಿ ಸದಸ್ಯ ಶಿವಶಂಕರ್, ವೆಂಕಟೇಶ್,ಶಿವಕುಮಾರ್, ಮನು, ರಮೇಶ್, ಸುರೇಶ್, ಮಧು, ರವಿ, ನರಸಿಂಹರಾಜು ಸೇರಿದಂತೆ ಇತರರು ಇದ್ದರು.