ಗುಬ್ಬಿ : ಗುಬ್ಬಿ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಇರುವ ರೈಲ್ವೆ ಕೇಳಸೇತುವೆ ಮಾರ್ಗದಲ್ಲಿ ಇತ್ತೀಚೆಗೆ ನೂರಾರು ವಾಹನಗಳು ಸಂಚರಿಸುತ್ತಿದ್ದು ವಾಹನ ದಟ್ಟಣೆ ಹೆಚ್ಚಾಗಿದೆ. ಈ ರಸ್ತೆ ಗುಬ್ಬಿಯಿಂದ ರಾಷ್ಟ್ರೀಯ ಹೆದ್ದಾರಿಯ ಗುಬ್ಬಿ ಬೈಪಾಸ್ ರಸ್ತೆ ಸಂಪರ್ಕಿಸುತ್ತದೆ ಮತ್ತು ರಾಜ್ಯ ಹೆದ್ದಾರಿ 84 ರ ಮೂಲಕ ಸಿರಾ ಎನ್ ಹೆಚ್ 4 ಸಂಪರ್ಕಿಸುವ ಮುಖ್ಯ ರಸ್ತೆಯಾಗಿರುತ್ತದೆ. ಕಳೆದ ಮಳೆಗಾಲದಿಂದ ಮಳೆ ನೀರು ಈ ಸೇತುವೆಯ ಮೇಲೆ ಹಾದು ಹೋದ ಕಾರಣ ರಸ್ತೆಯಲ್ಲಿ ಸಣ್ಣ ಸಣ್ಣ ಗುಂಡಿಗಳು ಬಿದ್ದಿದ್ದವು. ಇತ್ತೀಚೆಗೆ ಇಲ್ಲಿನ ಖಾಸಗಿ ಶಾಲೆಯೊಂದರ ತ್ಯಾಜ್ಯದ ನೀರು ರಸ್ತೆಗೆ ಹರಿದು ಬರುತ್ತಿದ್ದು, ಇದರಿಂದ ಸೇತುವೆಯ ಕೆಳಗೆ ದೊಡ್ಡ ಗುಂಡಿಗಳೇ ಬಿದ್ದಿವೆ. ದ್ವಿಚಕ್ರ ವಾಹನಗಳು ಮತ್ತು ಕಾರ್ಗಳು ಇಲ್ಲಿ ಚಲಿಸುವುದೇ ಕಷ್ಟವಾಗಿದೆ. ಈ ಕಾರಣಕ್ಕೆ ನಿತ್ಯ ಜನ ಈ ಮಾರ್ಗವಾಗಿ ಚಲಿಸುವಾಗ ಹೈರಾಣಾಗಿದ್ದಾರೆ.
ಆದರೆ ಇದರ ರಿಪೇರಿ ರೈಲ್ವೆ ಇಲಾಖೆಯವರು ಮಾಡಬೇಕಾ ರಾಜ್ಯ ಹೆದ್ದಾರಿಯವರು ಮಾಡಬೇಕಾ ಎನ್ನುವುದೇ ಪ್ರಶ್ನೆಯಾಗಿದೆ, ಸಾರ್ವಜನಿಕರ ದೂರಿನ ಮೇರೆಗೆ ಇಲ್ಲಿನ ರೈಲ್ವೆ ಸಿವಿಲ್ ಎಂಜಿನಿಯರ್ ರವರಿಗೆ ಗುಬ್ಬಿಯ ಪಟ್ಟಣ ಪಂಚಾಯಿತಿ ಸದಸ್ಯ ಜಿ ಆರ್ ಶಿವಕುಮಾರ್ ಮನವಿ ಮಾಡಿದ್ದಾರೆ. ಚೇಳೂರಿನಿಂದ ಗುಬ್ಬಿಗೆ ಬರುವಾಗ ಖುದ್ದು ಇವರ ಕಾರ್ ಈ ಹಳ್ಳದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಆಗ ಶಿವಕುಮಾರ್ ಖುದ್ದು ದೂರವಾಣಿ ಮೂಲಕ ಅಧಿಕಾರಿಗಳ ಜೊತೆ ಮಾತನಾಡಿ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುವಂತೆ ಕೋರಿದ್ದ ಮೇರೆಗೆ ಅಧಿಕಾರಿಗಳು ಸ್ಪಂದಿಸಿ ಮುಂದಿನ ಒಂದು ವಾರದ ಒಳಗೆ ಈ ಹಳ್ಳಗಳಿಗೆ ಕಾಂಕ್ರೀಟ್ ತುಂಬಿಸಿ ರಸ್ತೆ ರಿಪೇರಿ ಮಾಡಿಸುವುದಾಗಿ ತಿಳಿಸಿದ್ದಾರೆ. ಖಾಸಗಿ ಶಾಲೆಯೊಂದರ ತ್ಯಾಜ್ಯದ ನೀರು ಮತ್ತು ಮಳೆಗಾಲದಲ್ಲಿ ರಾಯವಾರ ಕಡೆಯಿಂದ ಬರುವ ಭಾರಿ ನೀರಿಗೆ ಪೈಪ್ ಅಳವಡಿಸಿ ನೀರು ರಸ್ತೆಯ ಕೆಳಗೆ ಹೋಗುವಂತೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಹಿಂದೊಮ್ಮೆ ಇದೇ ಸೇತುವೆಯಲ್ಲಿ ಹಾದು ಹೋಗುವ ನೀರಿನಲ್ಲಿ ಕೆಎಸ್ಆರ್ಟಿಸಿ ಬಸ್ ಸಿಕ್ಕಿಹಾಕಿಕೊಂಡಿತ್ತು. ಇದರಲ್ಲಿದ್ದ ಜನರನ್ನು ಅಗ್ನಿಶಾಮಕ ದಳದವರು ದಡ ಸೇರಿಸಿದ್ದರು. ಇಷ್ಟೆಲ್ಲಾ ಅನಾಹುತವಾಗಿದ್ದರೂ ಸಂಬಂಧಪಟ್ಟ ಇಲಾಖೆಯವರು ಕ್ರಮ ತೆಗೆದುಕೊಳ್ಳದೇ ಇರುವುದು ವಿಪರ್ಯಾಸ.