ಗುಬ್ಬಿ: ಕೇಂದ್ರ ಸರ್ಕಾರದ ಬಹು ಕನಸಿನ ಯೋಜನೆ ಗ್ರಾಮೀಣ ಜನರಿಗೆ ಕುಡಿಯುವ ನೀರನ್ನು ಒದಗಿಸಲು ಮಾಡಿರುವ ಜಲಜೀವನ್ ಮಿಷನ್ ಕಾಮಗಾರಿ ಜನರಿಗೆ ನೀರು ತಲುಪಿಸುವಲ್ಲಿ ವಿಫಲವಾಗಿದೆ. ಗುಬ್ಬಿ ತಾಲೂಕು ಕಸಬಾ ಹೋಬಳಿ ಜಿ.ಹೊಸಹಳ್ಳಿಯಲ್ಲಿ ಕಳೆದ ಒಂದು ವರ್ಷದಿಂದಲೂ ಕಾಮಗಾರಿ ನೆಡೆಯುತ್ತಿದ್ದು ಈ ಕಾಮಗಾರಿಯಲ್ಲಿ ಬಾರಿ ಅವ್ಯವಹಾರ ನೆಡೆದಿದೆ ಎಂದು ಇಲ್ಲಿನ ನಾಗರಿಕರು ಆರೋಪಿಸಿದ್ದಾರೆ.
ಕಾಮಗಾರಿಯನ್ನೇ ಮಾಡದೆ ಗುತ್ತಿಗೆದಾರರು ಹಣ ಪಡೆದು ಕಾಣೆಯಾಗಿದ್ದಾರೆ. ಈ ಬಗ್ಗೆ ಸಂಬOಧಪಟ್ಟ ಎಂಜಿನಿಯರ್ ಅವರನ್ನು ಕಂಡು ದೂರು ನೀಡಿದರು ಪ್ರಯೋಜನವಾಗಿಲ್ಲ. ಇದುವರೆಗೂ ಜನರಿಗೆ ಕುಡಿಯುವ ನೀರು ಒದಗಿಸಲು ಸಾಧ್ಯವಾಗಿಲ್ಲ. ಗ್ರಾಮದ ಮನೆಗಳ ಮುಂದೆ ಹಾಗೂ ಮನೆಗಳ ಕಾಂಪೌಂಡ್ ಒಳಗೆ ನಲ್ಲಿಗಳನ್ನು ಅಳವಡಿಸಿದ್ದು ಅದಕ್ಕೆ ಕೊಡಬೇಕಾದ ಸಂಪರ್ಕವನ್ನು ಇನ್ನು ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಗುತ್ತಿಗೆದಾರರು ಪಭಾವಶಾಲಿಯಾಗಿದ್ದು, ಅವರು ಇನ್ನೊಬ್ಬರಿಗೆ ಕೆಲಸ ನಿರ್ವಹಿಸಲು ಅನಧಿಕೃತವಾಗಿ ಕೊಟ್ಟು ಆತ ಕೆಲಸವನ್ನೇ ಮಾಡದೆ ಈಗಾಗಲೇ ಹಣ ಪಡೆದುಕೊಂಡು ಕಾಣೆಯಾಗಿದ್ದಾನೆ ಎಂದು ಹೆಸರು ಹೇಳದ ಪಂಚಾಯತ್ ಸದಸ್ಯರೊಬ್ಬರು ಆರೋಪಿಸಿದ್ದಾರೆ.
ಮೂಲಭೂತ ಸೌಕರ್ಯವನ್ನು ಒದಗಿಸುವ ಸಲುವಾಗಿ ಕೇಂದ್ರ ಸರ್ಕಾರ ಮಾಡಿರುವ ಯೋಜನೆಯನ್ನು ಮನೆ ಮನೆ ಗಂಗೆ ಎಂಬ ಹೆಸರುಳ್ಳ ನಳಗಳನ್ನು ಅಳವಡಿಸುವುದಕ್ಕೆ ಮಾತ್ರ ಸೀಮಿತ ಮಾಡಿಕೊಂಡಿದ್ದಾರೆ. ಸುಮಾರು 370 ಮನೆಗಳಿರುವ ಈ ಗ್ರಾಮದಲ್ಲಿ 3೦೦ ನಳಗಳನ್ನು ಅಳವಡಿಸಲು ಯೋಜನೆ ಸಿದ್ಧಪಡಿಸಿದ್ದು ಕೆಲವೇ ಕೆಲವು ಮನೆಗಳ ಮುಂದೆ ಮನೆ ಮನೆ ಗಂಗಾ ಎಂಬ ನಾಮ ಫಲಕ ವುಳ್ಳ ಕಾಲಿ ನಳಗಳು ನಿಂತು ನೀರಿಗಾಗಿ ಕಾದಿವೆ.
ಈ ಬಗ್ಗೆ ಶುಕ್ರವಾರ ಕೇಂದ್ರ ಜಲ ಶಕ್ತಿ ಸಚಿವ ಹಾಗೂ ತುಮಕುರೂ ಸಂಸದ ವಿ.ಸೋಮಣ್ಣ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಒಂದೆಡೆ ಕೂರಿಸಿ ಜನರ ಕಷ್ಟ ಆಲಿಸುವ ಜನ ಸಂಪರ್ಕ ಸಭೆ ನೆಡೆಸಿದರು. ಈ ಸಭೆಯಲ್ಲಿ ಗ್ರಾಮದ ಕೆಲವರು ಜಲ ಜೀವನ್ ಮಿಷನ್ ಕಾಮಗಾರಿ ವಿಫಲವಾಗಿರುವುದನ್ನು ಸಚಿವರ ಗಮನಕ್ಕೆ ತರಲು ಪ್ರಯತ್ನಿಸಿದರು. ಆದರೆ ಕೆಲವು ಅಧಿಕಾರಿಗಳು ಸಚಿವರ ಗಮನಕ್ಕೆ ಈ ವಿಷಯ ತರದಂತೆ ದೂರುದಾರರ ಮನವೊಲಿಸುವಲ್ಲಿ ಸಫಲರಾಗಿದ್ದು, 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ನೀರು ನೀಡುವುದಾಗಿ ಹೇಳಿದ್ದಾರೆ.
ಆದರೆ ಒಂದೂವರೆ ವರ್ಷಗಳಿಂದ ಕಾಣೆಯಾಗಿರುವ ಗುತ್ತಿಗೆದಾರ ಇನ್ನು 15 ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸುವನೇ ಎಂಬುದೇ ಜನರಲ್ಲಿ ಕಾಡುವ ಪ್ರಶ್ನೆ.