ವಕೀಲನ ಕೈ ಹಿಡಿದ ‘ಗಿನಿಯಾ ಪಿಗ್’

ವಕೀಲನ ಕೈ ಹಿಡಿದ 'ಗಿನಿಯಾ ಪಿಗ್'

ನಾಗಮಂಗಲ ತಾಲ್ಲೂಕಿನ ಬಿಂಡಗನವಿಲೆ ಹೋಬಳಿಯ ಡಿ.ಕೋಡಿಹಳ್ಳಿ ಗ್ರಾಮದ ವಕೀಲ ಕೆ.ಎಸ್.ಕೃಷ್ಣಮೂರ್ತಿ ಅವರು ತಮ್ಮ 5 ಎಕರೆ ಜಮೀನಿನಲ್ಲಿ ಕೃಷಿ ಮತ್ತು ಹೈನುಗಾರಿಕೆ ಅಳವಡಿಸಿಕೊಂಡು ಪ್ರಗತಿ ಸಾಧಿಸುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

ಆರಂಭದಲ್ಲಿ ತಮಿಳುನಾಡಿನಿಂದ ₹2 ಸಾವಿರ ಮೊತ್ತದಲ್ಲಿ ತಂದ 4 ಗಿನಿಯಾ ಪಿಗ್ಗಳೊಂದಿಗೆ ಪ್ರಾರಂಭಗೊಂಡು, ಪ್ರಸ್ತುತ 2,500ಕ್ಕೆ ಏರಿಕೆಯಾಗಿದೆ.

ಈಗ ಇವರು ಸಾಕಿದ ಗಿನಿಯಾ ಪಿಗ್ಗಳಿಗೆ ಅಪಾರ ಬೇಡಿಕೆಯಿದೆ. ಅದರಂತೆ ಪುಣೆ, ಹೈದರಾಬಾದ್, ಹರಿಯಾಣ, ರಾಜಸ್ಥಾನ, ಬೆಂಗಳೂರು ಮತ್ತು ತುಮಕೂರು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಾರೆ.

ಪ್ರಸ್ತುತ ತಿಂಗಳಿಗೆ ಎರಡು ಸಾವಿರ ಗಿನಿಯಾ ಪಿಗ್ಗಳನ್ನು ದೇಶದ ವಿವಿಧ ರಾಜ್ಯಗಳ ಮಾರುಕಟ್ಟೆಗೆ ರಪ್ತು ಮಾಡುತ್ತಾರೆ. ಜೊತೆಗೆ ಇವರು 35-45 ದಿನಗಳಿಗೆ ರಪ್ತು ಮಾಡುವ ಗಿನಿಯಾ ಪಿಗ್ಗೆ ₹550-650 ರವರೆಗೆ ಬೆಲೆ ಸಿಗುತ್ತದೆ. ತಾಲ್ಲೂಕಿನಲ್ಲಿ ಆಸಕ್ತಿ ಹೊಂದಿರುವ ಸ್ಥಳೀಯ ಯುವಕರಿಗೂ ಮತ್ತು ರೈತರಿಗೂ ಸಹ ತರಬೇತಿ ನೀಡುತ್ತಿದ್ದಾರೆ.

ಇವರ ಕೃಷಿ, ಹೈನುಗಾರಿಕೆ, ತೋಟಗಾರಿಕೆ ನೋಡುವುದಾದರೆ, ಕಡಲೆಕಾಯಿ, ಕೊಬ್ಬರಿ ಎಣ್ಣೆ ಮತ್ತು ಕೋಳಿ ಮೊಟ್ಟೆಯನ್ನು ಬೆಂಗಳೂರಿನ ಕಂಪನಿಗಳಲ್ಲಿ ನೇರ ಮಾರಾಟ ಮಾಡುತ್ತಾರೆ.

ಜಮೀನಿನಲ್ಲಿ ಪ್ರತ್ಯೇಕವಾಗಿ 1,000 ತೈವಾನ್ ಸೀಬೆ ಪಿಂಕ್, 50 ಸೇಬು, 100 ಚಕ್ಕೆ, 20 ಮೂಸಂಬಿ, 50 ಪಪ್ಪಾಯ, ತೆಂಗು 150, 100 ಅಡಿಕೆ,100 ವೀಳ್ಯದೆಲೆ, 300 ಅಗಸೆ, 20 ನುಗ್ಗೆ, 10 ಬೆಣ್ಣೆ ಹಣ್ಣು, 10 ಚೆರ್ರಿ, 10 ಅಂಜೂರ, ರುದ್ರಾಕ್ಷಿ, ಬಾದಾಮಿ, ವಾಲ್ನಟ್, ಕರಿಬೇವು, ಗೆಣಸು, ಲಕ್ಷ್ಮಣ ಫಲ, ಡ್ರ್ಯಾಗನ್ ಫ್ರೂಟ್, ಬಿಳಿ ಜಂಬುನೇರಳೆ, ಖರ್ಜೂರ, ಒಂದೆಲಗ, ಜ್ಯೂಸ್ ಹಣ್ಣು, ನಕ್ಷತ್ರ ಹಣ್ಣಿನ ಸಸಿಗಳನ್ನು ಬೆಳೆಸಿದ್ದಾರೆ.

ನಾರಿ ಸುವರ್ಣ ತಳಿಯ 25 ಕುರಿಗಳನ್ನು ಸಾಕಿದ್ದು, ಈ ತಳಿಯು ವರ್ಷಕ್ಕೆ ಎರಡು ಮರಿಗೆ ಜನ್ಮ ನೀಡುವುದರಿಂದ ಇಳುವರಿ ಹೆಚ್ಚಾಗುತ್ತದೆ. ಅಲ್ಲದೇ ಪ್ರತಿ ಹೆಣ್ಣು ಕುರಿಯು 30-40 ಕೆ.ಜಿ., ಗಂಡು ಕುರಿಯು 50-60 ಕೆ.ಜಿ ತೂಗುತ್ತದೆ. 380 ಕೋಳಿಗಳನ್ನು ಸಾಕಾಣಿಕೆ ಮಾಡಿದ್ದು, ಅವು ವರ್ಷ ಪೂರ್ತಿ ಮೊಟ್ಟೆ ಇಡುತ್ತವೆ. ಜೊತೆಗೆ ಗೃಹ ಬಳಕೆಗಾಗಿ ಎರಡು ಮಲೆನಾಡು ಗಿಡ್ಡ ಹಸುಗಳನ್ನು ಸಹ ಸಾಕಿದ್ದಾರೆ.

ಕುರಿಗಳ ಜೊತೆ ವಕೀಲ ಕೆ.ಎಸ್.ಕೃಷ್ಣಮೂರ್ತಿ

‘ವಕೀಲರಾಗಿರುವ ಕೆ.ಎಸ್.ಕೃಷ್ಣಮೂರ್ತಿ ಅವರು ಗಿನಿಯಾ ಪಿಗ್ ಸಾಕಾಣಿಕೆ ಮಾಡುತ್ತಿದುದ್ದನ್ನು ಕಂಡು ಪ್ರೇರಣೆ ಪಡೆದಿರುವೆ. ಮಾಹಿತಿ ಮತ್ತು ಮಾರ್ಗದರ್ಶನವನ್ನು ಅವರಿಂದಲೇ ಪಡೆದ ನಾನು ಗಿನಿಯಾ ಪಿಗ್ ಸಾಕಾಣಿಕೆ ಮಾಡುತ್ತಿರುವೆ’ ಎಂದು ಅಣಕನಹಳ್ಳಿ ಯುವ ರೈತ ಆನಂದ್ ಮೆಚ್ಚುಗೆ ವ್ಯಕ್ತಪಡಿಸಿದರು.

ತಿಂಗಳಿಗೆ ₹4 ಲಕ್ಷ ಆದಾಯ!

‘ಬಾಲ್ಯದಿಂದಲೂ ನನಗೆ ಕೃಷಿಯಲ್ಲಿ ಆಸಕ್ತಿಯಿದ್ದು ಏನಾದರೂ ವಿಭಿನ್ನವಾಗಿ ಮಾಡಬೇಕೆಂಬ ಹಂಬಲದೊಂದಿಗೆ ಕೃಷಿಯತ್ತ ಮುಖ ಮಾಡಿದೆ. ಅದು ನನ್ನ ಕೈಹಿಡಿದಿದೆ. ಈಗ ತಿಂಗಳಿಗೆ ಖರ್ಚು ಕಳೆದು ₹4 ಲಕ್ಷ ಉಳಿಸುತ್ತಿರುವೆ. ಸ್ವಾವಲಂಬಿ ರೈತ ಎನಿಸಿಕೊಳ್ಳುವ ಬಯಕೆಯಾಗಿದೆ’ ಎಂದು ಪ್ರಗತಿಪರ ರೈತ ಕೆ.ಎಸ್.ಕೃಷ್ಣಮೂರ್ತಿ ಹೇಳಿದರು.

Leave a Reply

Your email address will not be published. Required fields are marked *