ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು : ಡಕಾಯಿತನ ಮೇಲೆ ಪೊಲೀಸ್ ಫೈರಿಂಗ್

ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು : ಡಕಾಯಿತನ ಮೇಲೆ ಪೊಲೀಸ್ ಫೈರಿಂಗ್

ಹುಬ್ಬಳ್ಳಿ: ಡಕಾಯಿತಿ ಗ್ಯಾಂಗ್ ಸದಸ್ಯನ ಮೇಲೆ ಗೋಕುಲ್ ರೋಡ್ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಘಟನೆ ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ಗೋಕುಲ್ ಗ್ರಾಮದ ಬಳಿ ನಡೆದಿದೆ.

ಮಹೇಶ್ ಸೀತಾರಾಮ್ ಕಾಳೆ ಬಂಧಿತ ಆರೋಪಿ. ಸೋಮವಾರ ನಸುಕಿನ ಜಾವ ಮಹೇಶ್ ಮತ್ತು ಈತನ ಗ್ಯಾಂಗ್ ಮನೆ ಕಳ್ಳತನಕ್ಕೆ ಇಳಿದಿತ್ತು. ಈ ವಿಚಾರ ತಿಳಿದು ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿ ಮಹೇಶ್ ಕಾಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಉಳಿದವರು ಪರಾರಿಯಾಗಿದ್ದರು. ಉಳಿದ ಡಕಾಯಿತರು ಇರುವ ಜಾಗ ತೋರಿಸುತ್ತೇನೆ ಅಂತ ಆರೋಪಿ ಮಹೇಶ್ ಪೊಲೀಸರನ್ನು ಕರೆದುಕೊಂಡು ಹೋಗಿ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದ.

ಪ್ರಾಣ ರಕ್ಷಣೆಗಾಗಿ ಗೋಕುಲ್ ರೋಡ್ ಪೊಲೀಸ್ ಠಾಣೆಯ ಪಿಎಸ್ಐ ಸಚಿನ ದಾಸರೆಡ್ಡಿ ಮಹೇಶ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡು ತಿಂದು ನೋವಿನಿಂದ ಒದ್ದಾಡುತ್ತಿದ್ದ ಮಹೇಶ್ನನ್ನು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಗೋಕುಲ ರೋಡ್ ಪೊಲೀಸ್ ಠಾಣೆಯ ಪಿಎಸ್ಐ ಸಚಿನ್ ಮತ್ತು ಪೇದೆ ವಸಂತ ಗುಡಿಗೇರಿಗೆ ಅವರಿಗೆ ಗಾಯವಾಗಿದೆ.

ನಗರದ ಕೆಎಂಆರ್ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಆರೋಗ್ಯ ವಿಚಾರಣೆ ಮಾಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದು, “ಸೋಮವಾರ ಮುಂಜಾನೆ 3 ಗಂಟೆ ಸುಮಾರಿಗೆ ಮನೆಗಳ್ಳತನಕ್ಕೆ ಐದಾರು ಜನರ ತಂಡ ಹೊಂಚು ಹಾಕಿತ್ತು. ಗೋಕುಲ್ ಗ್ರಾಮದ ಹೊರವಲಯದ ಹೊಸ ಲೆಔಟ್ನಲ್ಲಿ ಕಟ್ಟಿರುವ ಹೊಸ ಮನೆಗೆ ಕಲ್ಲು ಹೊಡೆದಿದ್ದಾರೆ. ಆಗ ಗಾಜು ಒಡೆದ ಸದ್ದು ಕೇಳಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಪೊಲೀಸರು ಸ್ಥಳಕ್ಕೆ ಹೋಗಿ ಕಾಯುತ್ತಿರುವಾಗ ಅನುಮಾನಾಸ್ಪದವಾಗಿ ಬೈಕ್ನಲ್ಲಿ ಹೋಗುತ್ತಿದ್ದ ಮಹೇಶ ಕಾಳೆ ಪೊಲೀಸರ ಕೈಗೆ ಸಿಕ್ಕಿದ್ದಾನೆ. ಮಹೇಶ ಕಾಳೆ ಮೇಲೆ ಮಹಾರಾಷ್ಟ್ರದ ಜೌರಂಗಾಬಾದ್ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ 26 ಕ್ಕೂ ಹೆಚ್ಚು ದರೋಡೆ ಪ್ರಕರಣಗಳು ಈತನ ಮೇಲಿವೆ. ಹೆಚ್ಚಿನ ಪ್ರಮಾಣದ ಡಕಾಯಿತಿ ಕೃತ್ಯಗಳಲ್ಲಿ ಭಾಗಿಯಾಗಿದ್ದ ತಂಡ “ಗಾಯ್ ಪಾರ್ದಿ” ಎಂಬ ತಂಡ ಕಟ್ಟಿಕೊಂಡು ಒಂಟಿ ಮನೆಗೆ ನುಗ್ಗಿ ದರೋಡೆ ಮಾಡುತ್ತಿತ್ತು. ವಿರೋಧ ವ್ಯಕ್ತಪಡಿಸಿದ್ದಾಗ ಮನೆ ಮಾಲೀಕರ ಕೈಕಾಲು ಕಟ್ಟಿ ಡಕಾಯಿತಿ ನಡೆಸಿದೆ” ಎಂದು ಮಾಹಿತಿ ನೀಡಿದರು.

ಇದೇ ತಂಡ 2023ರಲ್ಲಿ ಗೋಕುಲ್ ಗ್ರಾಮದ ರಜನಿಕಾಂತ್ ದೊಡ್ಡಮನಿ ಎಂಬುವರ ಮನೆಯ ಕಿಟಕಿ ಗ್ರಿಲ್ಸ್ ಕಟ್ ಮಾಡಿ ಒಳಗೆ ಹೋಗಿ ಗಂಡ-ಹೆಂಡತಿಯ ಕೈ ಕಾಲು ಕಟ್ಟಿ ಹಾಕಿ ಸುಮಾರು 2 ಕೆಜಿಗೂ ಹೆಚ್ಚು ಚಿನ್ನಾಭರಣ ದೋಚಿದ್ದರು. ಆಗ ಸುನೀಲ್ ಚೌಹಾಣ್ ಎಂಬ ಓರ್ವ ಆರೋಪಿಯನ್ನು ಬಂಧಿಸಲಾಗಿತ್ತು. ಈಗ ಬಂಧಿತನಾಗಿರುವ ಮಹೇಶ್ ಕಾಳೆ ಕೂಡ ಅದೇ ಗ್ಯಾಂಗ್ಗೆ ಸೇರಿದವನಾಗಿದ್ದಾನೆ” ಎಂದರು.

ಇನ್ನೂ ನಾಲ್ಕೈದು ಜನ ಸಿಗಬೇಕಿದೆ. ವಿಚಾರಣೆ ಸಂದರ್ಭದಲ್ಲಿ ಟೀಂ ಕಳ್ಳತನ ಮಾಡಿ ರೇವಡಿಹಾಳ ಬ್ರಿಡ್ಜ್ ಬಳಿ ಸೇರಿ ಲಾರಿ ಮೂಲಕ ಬೆಳಗಾವಿ ಕಡೆ ಹೋಗಲು ಪ್ಲಾನ್ ಮಾಡಿತ್ತು. ಇತರೆ ಆರೋಪಿಗಳು ರೇವಡಿಹಾಳ ಬ್ರಿಡ್ಜ್ ಸುತ್ತ ಮುತ್ತ ಇರಬೇಕು ಎಂದು ಕರೆದುಕೊಂಡು ಹೋದ ಸಂದರ್ಭದಲ್ಲಿ ನಮ್ಮ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಆರೋಪಿ ಯತ್ನ ಮಾಡಿದಾಗ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ” ಎಂದು ಕಮಿಷನರ್ ವಿವರಿಸಿದರು.

ಈ ತಂಡ ಊರ ಹೊರಗೆ ಇರುವ ಒಂಟಿ ಮನೆಗಳನ್ನು ಗುರುತಿಸಿ ಸಿಸಿಟಿವಿ ಇಲ್ಲದಂತ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಒಂದೆರಡು ಕಲ್ಲು ಹೊಡೆಯುತ್ತಾರೆ. ಆಗ ಮನೆ ಮಾಲೀಕರು ಕುಡುಕರು, ಪೋಲಿ ಹುಡುಗರು ಇರಬೇಕು ಅಂತ ಹೊರಗಡೆ ಬಂದಾಗ ಹಲ್ಲೆ ಮಾಡಿ ಮನೆ ಒಳಗೆ ನುಗ್ಗಿ ದರೋಡೆ ಮಾಡುವುದು ಇವರ ಕಾರ್ಯವೈಖರಿ. ಬೆಳಗಾವಿ, ವಿಜಯಪುರ, ಕಲಬುರಗಿ ಮುಂಬೈ ಕರ್ನಾಟಕ ಭಾಗದಲ್ಲಿ ಇವರು ಹೆಚ್ಚು ದರೋಡೆ ಮಾಡಿದ್ದಾರೆ. ಈಗಾಗಲೇ 18-20 ಜನರ ಹೆಸರನ್ನು ಬಾಯ್ಬಿಟ್ಟಿದ್ದು, ಹೆಚ್ಚು ಪ್ರಕರಣಗಳು ಇನ್ನೂ ಪತ್ತೆಯಾಗಬೇಕಿದೆ” ಎಂದರು.

ಇವರು ಊರಲ್ಲಿ ಇರುವುದಿಲ್ಲ. ಊರ ಹೊರಗಡೆ ದನಗಳನ್ನು ಕಟ್ಟಿಕೊಂಡು ಜೀವನ ಸಾಗಿಸುವವರಂತೆ ಬರುತ್ತಾರೆ. ವೃದ್ಧರು, ಮಹಿಳೆಯರು, ಮಕ್ಕಳನ್ನು ಬಿಟ್ಟು ನೂರಾರು ಕಿ.ಮೀ ವ್ಯಾಪ್ತಿಯ ಒಳಗೆ ಇಂತ ಕೃತ್ಯ ಮಾಡಿಕೊಂಡಿರುತ್ತಾರೆ. ಈ ತಂಡದ ಉಳಿದ ಸದಸ್ಯರ ಬಂಧನ ಮಾಡಲಾಗುವುದು. ಆದರೆ ಈ ಗ್ಯಾಂಗ್ ಕುಗ್ರಾಮಗಳಲ್ಲಿ ಇರುತ್ತಾರೆ. ಬಂಧಿಸಲು ಹೋದ ಸಿಬ್ಬಂದಿಗಳ ಮೇಲೆ ಮಾರಕಾಸ್ತ್ರ್ರಗಳಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳುತ್ತಾರೆ. ಆದಷ್ಟು ಬೇಗ ಉಳಿದ ಆರೋಪಿಗಳನ್ನು ಬಂಧಿಸುವುದಾಗಿ” ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು.

Leave a Reply

Your email address will not be published. Required fields are marked *