ಹಾಸನ: ಜನವಿರೋಧಿ, ಬಡವರ ವಿರೋಧಿ, ರೈತ ವಿರೋಧಿ ಕಾಂಗ್ರೆಸ್ ಸರಕಾರವನ್ನು ಬುಡಸಮೇತ ಕಿತ್ತು ಹಾಕುವ ಸಂಕಲ್ಪ ಮಾಡಿ ಮೈಸೂರು, ಮಂಡ್ಯದ ಮೂಲಕ ಜನಾಕ್ರೋಶ ಯಾತ್ರೆಯು ಹಾಸನಕ್ಕೆ ತಲುಪಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ‘ಜನಾಕ್ರೋಶ ಯಾತ್ರೆ’ಯು ಇಂದು ಸಂಜೆ ಹಾಸನದ ಹಳೇ ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಾರಂಭಗೊಂಡಿತು. ನಂತರ ಎನ್.ಆರ್ ವೃತ್ತದ ಮಾರ್ಗವಾಗಿ ಮಹಾವೀರ ವೃತ್ತದ ಬಳಿ ಬಹಿರಂಗ ಪ್ರತಿಭಟನಾ ಸಮಾವೇಶ ನಡೆಸಲಾಯಿತು. ‘ಈ ಜನಾಕ್ರೋಶ ಯಾತ್ರೆಗೆ ವರುಣದೇವನೂ ಬಿಜೆಪಿಯವರಿಗೆ ಜಯವಾಗಲಿ ಎಂದು ಆಶೀರ್ವಾದ ಮಾಡಿದ್ದಾರೆ’ ಎಂದು ವಿಜಯೇಂದ್ರ ಅವರು ವಿಶ್ಲೇಷಿಸಿದರು.
ಅಭಿವೃದ್ಧಿ ಮಾಡುತ್ತೇವೆ; ಜನಪರ ಸರಕಾರ ಕೊಡುವುದಾಗಿ ತಿಳಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿನ ಸರಕಾರ ಬಂದಾಗಿನಿಂದ 50 ಕ್ಕೂ ಹೆಚ್ಚು ಜನಸಾಮಾನ್ಯರು ಬಳಸುವ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿದ್ದಾರೆ ಎಂದು ಟೀಕಿಸಿದರು.
ಈ ಸರಕಾರ ಬೀಳಿಸಲು ಕಾಂಗ್ರೆಸ್ ಶಾಸಕರೇ ಸಾಕು..
ಸರಕಾರ ಮನಬಂದಂತೆ- ಜನವಿರೋಧಿಯಾಗಿ ವರ್ತಿಸುತ್ತಿದೆ. ಈ ಸರಕಾರದ ಕಿವಿ ಹಿಂಡುವ ಕಾರ್ಯವನ್ನು ವಿಪಕ್ಷದ ನೆಲೆಯಲ್ಲಿ ಮಾಡುತ್ತಿದ್ದೇವೆ ಎಂದು ವಿಜಯೇಂದ್ರ ಅವರು ವಿವರಿಸಿದರು. ಚುನಾವಣೆ ಬಂದಿದೆ ಎಂದು ಈ ಯಾತ್ರೆಯಲ್ಲ ಎಂದರು.
ಈ ಸರಕಾರ ಬೀಳಿಸಲು ಕಾಂಗ್ರೆಸ್ ಪಕ್ಷದ ಶಾಸಕರೇ ಸಾಕು ಎಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇನೆ. ಕಾಂಗ್ರೆಸ್ಸಿನ ಆರ್.ವಿ.ದೇಶಪಾಂಡೆಯವರು, ಶಾಸಕರಾಗಿ 20 ತಿಂಗಳಾದರೂ ಅಭಿವೃದ್ಧಿಗೆ ಅನುದಾನ ಸಿಕ್ಕಿಲ್ಲ ಎನ್ನುತ್ತಾರೆ. ಬೆಳಗಾವಿಯ ಹಿರಿಯ ಕಾಂಗ್ರೆಸ್ ಶಾಸಕ ರಾಜು ಕಾಗೆಯವರು ಅನುದಾನ ಸಿಗದ ಕುರಿತು ಆತ್ಮಹತ್ಯೆ ಮಾಡಿಕೊಳ್ಳುವಂತಾಗುತ್ತಿದೆ ಎಂದಿದ್ದಾರೆ ಎಂದು ಗಮನ ಸೆಳೆದರು. ಅಭಿವೃದ್ಧಿ ಕಾರ್ಯಗಳು ರಾಜ್ಯದ ಎಲ್ಲೂ ಆಗುತ್ತಿಲ್ಲ ಎಂದು ವಿವರಿಸಿದರು.
ಸರಕಾರಿ ಕಾಮಗಾರಿಗಳಲ್ಲಿ ಮುಸಲ್ಮಾನರಿಗೆ ಶೇ 4ರಷ್ಟು ಮೀಸಲಾತಿ ಕೊಟ್ಟಿದ್ದಾರೆ. ಮುಸಲ್ಮಾನರ ಮಕ್ಕಳು ವಿದೇಶಕ್ಕೆ ಓದಲು ಹೋಗುವುದಾದರೆ 20 ಲಕ್ಷದ ಬದಲಾಗಿ 30 ಲಕ್ಷಕ್ಕೆ ಏರಿಸಿದ್ದಾರೆ. ಹಿಂದೂಗಳ ಮಕ್ಕಳಿಗೆ ಆ ಸೌಕರ್ಯ ಇಲ್ಲ. ಮುಲ್ಲಾಗಳಿಗೆ ಸಂಬಳ ಹೆಚ್ಚಿಸಿದ್ದಾರೆ. ಹಿಂದೂಗಳಲ್ಲಿ ಅರ್ಚಕರ ವೇತನ ಹೆಚ್ಚಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ಪಡೆದ ಕಾಂಗ್ರೆಸ್ಸಿಗರು, ಸಿದ್ದರಾಮಯ್ಯನವರು, ಪರಿಶಿಷ್ಟ ಜಾತಿ, ಪಂಗಡಗಳ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟ 38,500 ಕೋಟಿ ರೂಪಾಯಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಈ ಜನಾಕ್ರೋಶ ಯಾತ್ರೆ ಎಂದು ವಿವರಿಸಿದರು. ಜನರ ಹಣ ಲೂಟಿಗಾಗಿ ಸಿದ್ದರಾಮಯ್ಯನವರ ಸರಕಾರ ತಜ್ಞರ ಸಮಿತಿ ಮಾಡಿಕೊಂಡಿದೆ ಎಂದು ಟೀಕಿಸಿದರು.
ಕಿಸೆಗೆ ಕತ್ತರಿ ಹಾಕುವ ಸರಕಾರ- ಆರ್.ಅಶೋಕ್ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಕಾಂಗ್ರೆಸ್ ಸರಕಾರ ಬೆಲೆ ಏರಿಕೆ ಮೂಲಕ ಎಲ್ಲರ ಜೋಬಿಗೆ ಕತ್ತರಿ ಹಾಕುತ್ತಿದೆ ಎಂದು ಟೀಕಿಸಿದರು. ಇದು ಹೊಲಸು ಸರಕಾರ, ಕೆಟ್ಟ, ಮೋಸದ ಸರಕಾರ ಎಂದು ದೂರಿದರು. ಜನರ ಪಾಲಿಗೆ ಈ ಸರಕಾರ ಸತ್ತು ಹೋಗಿದೆ. ಈ ಕಾಂಗ್ರೆಸ್ಸಿನ ತಿಥಿ ಮಾಡಲು ನಾವು ಮುಂದಾಗುತ್ತಿದ್ದೇವೆ ಎಂದು ತಿಳಿಸಿದರು.
ಗ್ಯಾರಂಟಿಗೆ ಅವರಿಗೆ 60 ಸಾವಿರ ಕೋಟಿ ಬೇಕಿದ್ದರೆ, ಹೆಚ್ಚುವರಿ ತೆರಿಗೆ ಹಾಕಿ 80 ಸಾವಿರ ಕೋಟಿ ಸಂಗ್ರಹಿಸುತ್ತಿದ್ದಾರೆ. ಇನ್ನುಳಿದ 20 ಸಾವಿರ ಕೋಟಿಯಲ್ಲಿ ಡಿಕೆಗೆ 10 ಸಾವಿರ ಕೋಟಿ, ಸಿದ್ದರಾಮಯ್ಯರಿಗೆ 10 ಸಾವಿರ ಕೋಟಿ ಎಂದು ಆರೋಪಿಸಿದರು. ಇವರು ದಲಿತರ ಅಭಿವೃದ್ಧಿ ಬಗ್ಗೆಯೂ ಮಾತನಾಡಿದರು. ಆದರೆ, ಟೋಪಿಗಳಿಗಾಗಿ ಸಂವಿಧಾನ ಬದಲಿಸುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎಂದು ಟೀಕಿಸಿದರು.
ಈ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ.ರವಿ, ಮಾಜಿ ಸಚಿವ ಬಿ.ಶ್ರೀರಾಮುಲು, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ಶಾಸಕರಾದ ಹುಲ್ಲಳ್ಳಿ ಸುರೇಶ್, ಸಿಮೆಂಟ್ ಮಂಜುನಾಥ್, ಹಾಸನ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮುಂತಾದ ಅನೇಕ ಹಿರಿಯ ನಾಯಕರು ಹಾಗೂ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.