ಹಾಸನ || ಜಮೀನಿನಲ್ಲಿ ಉಳುಮೆ ಮಾಡುವಾಗ ಹೃದಯಾಘಾತ, ಸೈನಿಕ ಸಾ*

ಹಾಸನ || ಜಮೀನಿನಲ್ಲಿ ಉಳುಮೆ ಮಾಡುವಾಗ ಹೃದಯಾಘಾತ, ಸೈನಿಕ ಸಾ*

ಹಾಸನ: ಜಿಲ್ಲೆಯಲ್ಲಿ ಸಾವಿನ ಸೂತಕದ ಛಾಯೆ ಮುಂದುವರೆದಿದ್ದು, ಹೃದಯಾಘಾತಕ್ಕೆ ಸೈನಿಕನೋರ್ವ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, ಒಂದೇ ವಾರದಲ್ಲಿ 6 ಮಂದಿ ಮೃತಪಟ್ಟಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮದ ಲೋಹಿತ್ ಅಲಿಯಾಸ್ ಪುಚ್ಚಿ (38) ಮೃತಪಟ್ಟ ಸೈನಿಕ. ಕಳೆದ 18 ವರ್ಷಗಳಿಂದ ಸೈನಿಕರಾಗಿ ದೇಶಸೇವೆ ಮಾಡಿದ್ದರು. ಕಳೆದ 7 ವರ್ಷದ ಹಿಂದೆ ಮದುವೆಯಾಗಿದ್ದು, 3 ವರ್ಷದ ಹೆಣ್ಣು ಮಗಳಿದ್ದಾಳೆ.

ರಜೆಗೆ ಬಂದಿದ್ದ ಸೈನಿಕ : 18 ವರ್ಷ ದೇಶಸೇವೆ ಮೂಲಕ ಸೈನಿಕ ವೃತ್ತಿ ಮಾಡಿದ್ದ ಲೋಹಿತ್ ಮುಂದಿನ ವರ್ಷ ನಿವೃತ್ತಿಯಾಗಿ ಊರಿಗೆ ಬಂದು ಮಡದಿ ಮಕ್ಕಳೊಂದಿಗೆ ವಾಸವಿರಬೇಕು ಎಂದುಕೊಂಡಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿದೆ. ಹೆಂಡತಿ ಮತ್ತು ಮಗಳನ್ನು ನೋಡಲು ರಜೆ ಮೇಲೆ ಬಂದಿದ್ದ ಯೋಧ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಯೋಧ ಲೋಹಿತ್ ಅವರು ಜುಲೈ 03ರಂದು ವಾಪಸ್ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಹಾಗಾಗಿ ಜು.3ರಂದು ರೈಲಿನಲ್ಲಿ ಹೊರಡಲು ಟಿಕೆಟ್ ಕೂಡಾ ಬುಕ್ ಮಾಡಿದ್ದರು.

ಟ್ರ್ಯಾಕ್ಟರ್ ನಲ್ಲಿ ಉಳುಮೆ ಮಾಡುವ ವೇಳೆ ಹೃದಯಾಘಾತ : ಜೂ.28ರಂದು ತಮ್ಮ ಜಮೀನಿನಲ್ಲಿ ಟ್ರ್ಯಾಕ್ಟರ್ ಮೂಲಕ ಜಮೀನನ್ನು ಉಳುಮೆ ಮಾಡುವ ವೇಳೆ ಹೃದಯಾಘಾತವಾಗಿತ್ತು. ಆಗ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿ ಹೊಡೆದ ಹಿನ್ನೆಲೆ ಲೋಹಿತ್ ಅವರಿಗೆ ಸಣ್ಣಪುಟ್ಟ ಗಾಯಗಳೂ ಆಗಿದ್ದವು. ತಕ್ಷಣ ಸ್ಥಳೀಯರು ಲೋಹಿತ್ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದ್ರೆ ದುರಾದೃಷ್ಟವಶಾತ್ ಚಿಕಿತ್ಸೆಗೆ ಸ್ಪಂದಿಸದೆ ಲೋಹಿತ್ ಭಾನುವಾರ (ಜೂ.29) ಮಧ್ಯಾಹ್ನ ಮೃತಪಟ್ಟಿದ್ದಾರೆ.

ಮೃತ ಲೋಹಿತ್ ಹಾಸನ ಜಿಲ್ಲೆಯ ಕೆಂಬಾಳು ಗ್ರಾಮದ ಜಿಲ್ಲಾ ಸಹಕಾರಿ ಬ್ಯಾಂಕ್ ನ ಕಾರ್ಯದರ್ಶಿಯಾಗಿದ್ದ ಪುನೀತ್ ಸಹೋದರರಾಗಿದ್ದು, ಕುಟುಂಬದಲ್ಲಿ ಸಾವಿನಿಂದ ದುಃಖ ಮಡುಗಟ್ಟಿದೆ.

Leave a Reply

Your email address will not be published. Required fields are marked *