ಹಾವೇರಿ: ಪಟ್ಟಣದ ಚರಂಡಿಯಲ್ಲಿ ಬಾಲಕ ನಿವೇದನ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಪೌರಾಯುಕ್ತ ಮತ್ತು ಕಿರಿಯ ಆರೋಗ್ಯ ನಿರೀಕ್ಷಕನನ್ನು ಅಮಾನಗೊಳಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಮೌಖಿಕ ಆದೇಶದ ಹಿನ್ನೆಲೆ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ಅಮಾನತು ಮಾಡಿದ್ದಾರೆ.
ನಗರಸಭೆ ಪೌರಾಯುಕ್ತ ಪರಶುರಾಮ್ ಎಂ. ಛಲವಾದಿ ಮತ್ತು ಕಿರಿಯ ಆರೋಗ್ಯ ನಿರೀಕ್ಷಕ ರಮೇಶ್ ಆರ್. ಮುಂಜೋಜಿ ಅಮಾನತಾದ ಅಧಿಕಾರಿಗಳು. ಚರಂಡಿ ಕಾಲುವೆ ಮೇಲಿನ ಕಲ್ಲು ಮುಚ್ಚದೇ ನಿರ್ಲಕ್ಷ್ಯ ವಹಿಸಿದ ಕಾರಣ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಗುರುವಾರ ಆದೇಶಿಸಿದ್ದಾರೆ.
ನಗರದಲ್ಲಿ ಎಡೆಬಿಡದೇ ಸುರಿದ ಮಳೆಗೆ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ 10 ವರ್ಷದ ಬಾಲಕ ನಿವೇದನ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗವೇ ಈ ಘಟನೆ ನಡೆದಿದ್ದರಿಂದ ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿತ್ತು.
ಘಟನೆಯ ವಿವರ: ಗುರುವಾರ ಬೆಳಗ್ಗೆ ತನ್ನ ಸ್ನೇಹಿತರ ಜೊತೆ ನಿವೇದನ ಚರಂಡಿಯಲ್ಲಿ ನೀರು ಹರಿಯುತ್ತಿದ್ದನ್ನ ದೃಶ್ಯ ನೋಡುತ್ತ ನಿಂತಿದ್ದ. ಈ ವೇಳೆ ಹಠಾತ್ ಕಾಲುಜಾರಿ ಚರಂಡಿಗೆ ಬಿದ್ದು ನೀರಲ್ಲಿ ಕೊಚ್ಚಿ ಹೋಗಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಪೊಲೀಸರು ಬಾಲಕನ ಪತ್ತೆ ಕಾರ್ಯ ನಡೆಸಿದ್ದರು. ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ದಾನಮ್ಮನವರ್, ಹಾವೇರಿ ಎಸ್ಪಿ ಅಂಶುಕುಮಾರ್ ಕೂಡ ಸ್ಥಳಕ್ಕಾಗಮಿಸಿ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದರು. ಬಾಲಕ ಮುಳುಗಿದ ಸ್ಥಳದಲ್ಲಿಂದ ಹಿಡಿದು ಸುಮಾರು 100 ಮೀಟರ್ ವರೆಗೆ ಚರಂಡಿಯಲ್ಲಿ ಪತ್ತೆ ಕಾರ್ಯ ನಡೆಸಲಾಗಿತ್ತು. ಸತತ ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ಬಾಲಕನ ದೇಹ ಪತ್ತೆಯಾಗಿತ್ತು. ತಕ್ಷಣ ಆ್ಯಂಬುಲೆನ್ಸ್ನಲ್ಲಿ ಬಾಲಕನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೆ ಆತ ಮೃತಪಟ್ಟಿದ್ದನು.
ಯುವಕನ ಸಾವಿಗೆ ಡಿಸಿ ಸಂತಾಪ: ಬಾಲಕನ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್, ಈ ಘಟನೆ ನಡೆಯಬಾರದಿತ್ತು. ಆದರೆ, ನಡೆದು ಹೋಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಮರುಕಳಿಸದಂತೆ ಜಿಲ್ಲಾಡಳಿತ ಮುಂಜಾಗ್ರತೆ ವಹಿಸಲಿದೆ. ಮೃತ ನಿವೇದನ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಎಲ್ಲ ಪರಿಹಾರ ನೀಡುವ ಪ್ರಯತ್ನ ಮಾಡಲಾಗುವುದು. ಆತನ ಆತ್ಮಕ್ಕೆ ದೇವರು ಶಾಂತಿ ನೀಡಲಿ, ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಮನವಿ ಮಾಡಿದರು.