ಹಾವೇರಿ : ಜಿಲ್ಲಾ ಕೇಂದ್ರ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬಟ್ಟೆ ಅಂಗಡಿ, ಫರ್ನೀಚರ್ ಅಂಗಡಿ ಸೇರಿದಂತೆ ನಾಲ್ಕು ಅಂಗಡಿಗಳಲ್ಲಿ ಬೆಂಕಿಬಿದ್ದಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ.

ಮೆಹಬೂಬ ಸಾಬ್ ನೆಗಳೂರು ಅವರ ಫರ್ನೀಚರ್ ಅಂಗಡಿ ಹಾಗೂ ಸುಲೆಮಾನ್ ನದಾಫ್ ಅವರ ಮೊಬೈಲ್ ಅಂಗಡಿಗಳು ಬೆಂಕಿ ಅವಘಡಕ್ಕೆ ಸುಟ್ಟುಕರಕಲಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ನಂತರ ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಹಾಗೂ ಎಎಸ್ಪಿ ಶಿರಕೋಳ್ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
”ಕೇಂದ್ರ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಬಾಡಿಗೆಗೆ ಕೊಟ್ಟಿದ್ದ ಎರಡು ಮಳಿಗೆಗಳು ಬೆಂಕಿಗೆ ಆಹುತಿಯಾಗಿವೆ. ಫರ್ನಿಚರ್ಸ್ ಹಾಗೂ ಬೆಡ್ಸ್ ಇದ್ದಿದ್ದರಿಂದ ಬೆಂಕಿ ಬಹಳ ಬೇಗ ಹೊತ್ತಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಜೀವಹಾನಿಯಾಗಿಲ್ಲ” ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಹೇಳಿದ್ದಾರೆ.
ಈ ಬಗ್ಗೆ ಅಗ್ನಿಶಾಮಕದಳದ ಅಧಿಕಾರಿ ವಿನಾಯಕ ಕಟ್ಟೇಗೌಡರ ಮಾತನಾಡಿ, ‘ಮಳಿಗೆಯಲ್ಲಿನ ಬೆಂಕಿಯನ್ನು ಹತೋಟಿಗೆ ತಂದಿದ್ದೇವೆ. ಮಳಿಗೆಯಲ್ಲಿದ್ದ ಸಾಮಗ್ರಿಗಳನ್ನು ಹೊರತೆಗೆದು ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡರೆ ಮರಳು ಅಥವಾ ಮಣ್ಣಿನಿಂದ ಬೆಂಕಿಯನ್ನು ನಂದಿಸಿ ಮುಂದಾಗುವ ಅನಾಹುತ ತಪ್ಪಿಸಿ’ ಎಂದು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡರು.