ಹಾವೇರಿ: ಸಂಸ್ಕೃತಿ ಹಾಗೂ ಸಂಸ್ಕಾರ ಬೆಳೆಸಿಕೊಳ್ಳಲು ಮಠ ಮಾನ್ಯಗಳು ಬಹಳ ಮುಖ್ಯ. ಯಾವ ದೇಶದಲ್ಲಿ ಸಂಸ್ಕಾರ, ಸಂಸ್ಕೃತಿ ಇದೆಯೋ ಆ ದೇಶಕ್ಕೆ ಒಳ್ಳೆಯ ಭವಿಷ್ಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಅವರು ಇಂದು ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಶ್ರೀ ಗುರು ಶರಣ ಬಸವೇಶ್ವರರ 156ನೇ ಪುಣ್ಯಾರಾಧನೆ ಮತ್ತು ಧರ್ಮ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಶರಣ ಬಸವೇಶ್ವರರ 156 ನೇ ಪುಣ್ಯಾರಾಧನೆ ದಿನ ಭಕ್ತಿ ಭಾವದಿಂದ ಆಚರಣೆ ಮಾಡಿದ್ದೀರಿ. ಈ ಮಠ ಇನ್ನಷ್ಟು ಅಭಿವೃದ್ಧಿ ಆಗಬೇಕು. ಹಿಂದಿನ ಶಾಸಕರು ಅನುದಾನ ನೀಡಿದ್ದಾರೆ. ಪೂರ್ಣ ಕೆಲಸ ಆಗಬೇಕು. ಅದನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು. ಸಭಾ ಭವನ ನಿರ್ಮಾಣಕ್ಕೆ ತಮ್ಮ ಅನುದಾನದಲ್ಲಿ ಹಣ ಒದಗಿಸಲಾಗುವುದು ಎಂದು ಹೇಳಿದರು.
ನಮಗೆ ಸಂಸ್ಕೃತಿ ಹಾಗೂ ಸಂಸ್ಕಾರ ಬೆಳೆಸಿಕೊಳ್ಳಲು ಮಠ ಮಾನ್ಯಗಳು ಬಹಳ ಮುಖ್ಯ. ಗುರುಗಳು ಇದ್ದರೆ ಮಾತ್ರ ಮಠ, ಆದಷ್ಟು ಬೇಗನೇ ಈ ಮಠಕ್ಕೆ ಗುರುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾವ ದೇಶದಲ್ಲಿ ಸಂಸ್ಕಾರ, ಸಂಸ್ಕೃತಿ ಇದೆಯೋ ಆ ದೇಶಕ್ಕೆ ಒಳ್ಳೆಯ ಭವಿಷ್ಯ ಇದೆ. ಸಂಸ್ಕೃತಿ ಸಂಸ್ಕಾರ ಇಲ್ಲದಿರುವ ದೇಶದಲ್ಲಿ ಶಾಂತಿ ಇರುವುದಿಲ್ಲ. ಶಾಂತಿ ಇಲ್ಲದ ದೇಶದಲ್ಲಿ ಅಭಿವೃದ್ಧಿ ಆಗುವುದು ಇಲ್ಲ. ಮನುಷ್ಯ ಸಂಘ, ಸಮಾಜದಲ್ಲಿ ಬದುಕಬೇಕಾದರೆ ಇನ್ನೊಬ್ಬರನ್ನು ಗೌರವಿಸಬೇಕು. ಇತ್ತೀಚೆಗೆ ಧರ್ಮ ಧರ್ಮದಲ್ಲಿ ಯುದ್ಧ ನಡೆಯುತ್ತಿದೆ. ವಿಶ್ವದಲ್ಲಿ ನಿಜವಾದ ಧರ್ಮ ಮಾನವ ಧರ್ಮ, ಉಳಿದ ಧರ್ಮಗಳು ಮಾನವ ನಿರ್ಮಿತ ಧರ್ಮಗಳು, ನಮ್ಮ ಜೊತೆಗೆ ಹುಟ್ಟುವುದು ಆತ್ಮಸಾಕ್ಷಿ. ನಮ್ಮ ಆತ್ಮಸಾಕ್ಷಿಗೆ ತಕ್ಕಹಾಗೆ ಚಿಂತನೆ ಮಾಡಿದರೆ ಮಾನವೀಯತೆಯೇ ನಮ್ಮ ಧರ್ಮವಾಗುತ್ತದೆ. ಅದಕ್ಕೆ ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಎಂದು ಹೇಳಿದ್ದಾರೆ ಎಂದರು.
ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ. ಯಾವುದು ನಮ್ಮ ಕೈಯಲ್ಲಿ ಇಲ್ಲವೋ ಅದರ ಬಗ್ಗೆ ಯೋಚನೆ ಮಾಡುತ್ತೇವೆ. ಬದುಕು ನಮ್ಮ ಕೈಯಲ್ಲಿದೆ. ಆ ಬಗ್ಗೆ ಯೋಚನೆ ಮಾಡುವುದಿಲ್ಲ. ಹುಟ್ಟಿನಿಂದ ದೊಡ್ಡವರಲ್ಲ. ನಮ್ಮ ಕರ್ಮ, ಕಾಯಕದಿಂದ ದೊಡ್ಡವರಾಗುತ್ತೇವೆ. ಈ ಬದುಕಿನ ಒಟ್ಟು ಗುರಿ ಭಗವಂತ ನಮ್ಮನ್ನು ಯಾಕೆ ಹುಟ್ಟಿಸಿದ್ದಾನೆ ಎಂದು ನಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಬೇಕು. ಈ ಪ್ರಶ್ನೆಗಳಿಗೆ ನಾವೇ ಉತ್ತರ ಕಂಡುಕೊಂಡರೆ ಬದುಕು ಬಹಳ ಸಮಾಧಾನವಾಗಿರುತ್ತದೆ. ಹುಟ್ಟಿದಾಗ ನಾವೆಲ್ಲರೂ ಮನುಷ್ಯರಾಗಿ ಹುಟ್ಟುತ್ತೇವೆ. ಕೆಲವೇ ಕೆಲವರು ಮಾತ್ರ ಮಾನವರಾಗುತ್ತಾರೆ. ಕಾಮ, ಕೋಧ, ಮೋಹ, ಮದ, ಮತ್ಸರದ ಸಂಕೋಲೆಯಲ್ಲಿ ಸಿಲುಕಿದವನು ಮನುಷ್ಯ ಪ್ರೀತಿ, ವಿಶ್ವಾಸ, ನಂಬಿಕೆಯ ಸಂಕೋಲೆಯಲ್ಲಿ ಸಿಲುಕಿದವನು ಮಾನವ, ಮನುಷ್ಯನಿಂದ ಮಾನವನಾಗುವುದೇ ಬದುಕು. ಭಕ್ತರಿದ್ದರೆ ಮಠ ಇಲ್ಲದಿದ್ದರೆ ಮಠಗಳು ಇರುವುದಿಲ್ಲ. ಗುರು ಮತ್ತು ಭಕ್ತರ ನಡುವೆ ಒಂದು ಸಂಬಂಧ ಇರಬೇಕು. ಗುರು ಏನು ನುಡಿಯುತ್ತಾನೆ. ಅದರಂತೆ ಮಾಡಿ ತೋರಿಸಬೇಕು. ಗುರು ನುಡಿದಂತೆ ನಡೆದರೆ ಭಕ್ತರು ಅದನ್ನು ಮಾಡುತ್ತಾರೆ. ಗುರುವಿನಲ್ಲಿ ಕರಗಿ ಲೀನವಾಗುವುದು ಭಕ್ತಿ. ಅದು ಉತ್ಕೃಷ್ಟವಾದ ಪ್ರೀತಿ. ತಾಯಿ ಮಗುವಿನ ಪ್ರೀತಿ, ಗೆಳೆಯರ ಪ್ರೀತಿ ಉತ್ಕೃಷ್ಟವಾದ ಪೀತಿ, ಅಂತಹ ಸಂಸ್ಕಾರ ಈ ಊರಿನಲ್ಲಿ ಆಗಲಿ ಎಂದು ಹೇಳಿದರು.
ಕಾಕೋಳ ಗ್ರಾಮಕ್ಕೆ ನಿರಂತರ ಜ್ಯೋತಿ ಯೋಜನೆ ಜಾರಿಗೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ನಿಲುಗಡೆ ಬೇಕು ಅಂತ ಕೇಳಿದ್ದಾರೆ ಅದನ್ನು ಕೂಡ ಆದಷ್ಟು ಬೇಗ ಮಾಡಿಕೊಡಲಾಗುವುದು ಎಂದು ಹೇಳೀದರು.
ಕಾರ್ಯಕ್ರಮದಲ್ಲಿ ವಿಜಯಪುರದ ಅಭಿನವ ಸಿದ್ದರಾಮೇಶ್ವರ ಶಿವಯೋಗಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಗ್ರಾಮದ ಹಿರಿಯರಾದ ರಾಜಶೇಖರಗೌಡ ಪಾಟೀಲ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ರೇಣುಕಾ ಜಾಧವ ಹಾಗೂ ಮತ್ತಿತರು ಪಾಲ್ಗೊಂಡಿದ್ದರು