ಬಿಜೆಪಿ ಒಕ್ಕಲಿಗ ನಾಯಕರ ನಾಶಕ್ಕೆ ಹೆಚ್ ಡಿ ಕುಮಾರಸ್ವಾಮಿ ಯತ್ನ: ಸ್ಟೋಟಕ ಹೇಳಿಕೆ ನೀಡಿದ ಯೋಗೇಶ್ವರ್

ಬಿಜೆಪಿ ಒಕ್ಕಲಿಗ ನಾಯಕರ ನಾಶಕ್ಕೆ ಹೆಚ್ ಡಿ ಕುಮಾರಸ್ವಾಮಿ ಯತ್ನ: ಸ್ಟೋಟಕ ಹೇಳಿಕೆ ನೀಡಿದ ಯೋಗೇಶ್ವರ್

ಬೆಂಗಳೂರು : ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಉಪಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಂಗೇರಿದ್ದು, ಚನ್ನಪಟ್ಟಣ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಲ್ಲಿ ಮಹಾ ಬಿರುಕು ಮೂಡುವ ಸಾಧ್ಯತೆ ಹೆಚ್ಚಾಗಿದೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಎನ್ಡಿಎ ಕೂಟದ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಬಿರುಕಿಗೆ ಕಾರಣವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಡಾ. ಮಂಜುನಾಥ್ ಅವರ ಗೆಲುವಿಗೆ ಸೈನಿಕ ಸಿ ಪಿ ಯೋಗೇಶ್ವರ್ ಅವರು ಹೆಚ್ಚು ಶ್ರಮಿಸಿದ್ರು. ಇದೀಗ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಸಿಗಲಿದೆ ಎಂಬ ಭರವಸೆಯಲ್ಲಿ ಸಿ ಪಿ ಯೋಗೇಶ್ವರ್ ಇದ್ದರು. ಆದರೆ, ಪುತ್ರನ ರಾಜಕೀಯ ಭವಿಷ್ಯವನ್ನ ರೂಪಿಸುವ ನಿಟ್ಟಿನಲ್ಲಿ ಹೆಚ್ ಡಿ ಕುಮಾರಸ್ವಾಮಿ ಪಣ ತೊಟ್ಟಿದ್ದು, ಸಿ ಪಿ ಯೋಗೇಶ್ವರ್ ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಅನುಮಾನವಾಗಿದೆ. ಈ ನಿಟ್ಟಿನಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಸಿ ಪಿ ಯೋಗೇಶ್ವರ್ ಅವರು ಗಂಭೀರವಾದ ಆರೋಪ ಮಾಡಿದ್ದಾರೆ.

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಸಿ ಪಿ ಯೋಗೇಶ್ವರ್ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಮತ್ತು ಬಿಜೆಪಿಯ ಒಕ್ಕಲಿಗ ನಾಯಕರನ್ನು ವ್ಯವಸ್ಥೆತವಾಗಿ ಮುಗಿಸಲು ಹೊರಟ್ಟಿದ್ದಾರೆ ಎಂದು ಬಿಜೆಪಿಯ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗಂಭೀರವಾಗಿ ಆಪಾದಿಸಿದ್ದಾರೆ. ಅಲ್ಲದೇ ಬಿಜೆಪಿಗೆ ಜೆಡಿಎಸ್ ಅನಿವಾರ್ಯವಲ್ಲ. ಆದರೆ, ಜೆಡಿಎಸ್ಗೆ ಬಿಜೆಪಿ ಆನಿವಾರ್ಯ ಎನ್ನುವುದನ್ನು ಮನಗಾಣಬೇಕು ಎಂದೂ ತೀಕ್ಷ್ಯವಾಗಿ ಸಿ ಪಿ ಯೋಗೇಶ್ವರ್ ಅವರು ಹೇಳಿದ್ದಾರೆ.

ನಾನು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಕುಮಾರಸ್ವಾಮಿ ನನಗೆ ಮೋಸ ಮಾಡಿದ ಮೇಲೆ ನಾನು ಸ್ಪರ್ಧಿಸಲೇಬೇಕು. ಬುಧವಾರ ಚನ್ನಪಟ್ಟಣದಲ್ಲಿ ಪಕ್ಷದ ಪ್ರಮುಖರ ಸಭೆ ಕರೆದಿದ್ದೇನೆ. ಅಲ್ಲಿ ನನ್ನ ಮುಂದಿನ ರಾಜಕೀಯ ಹೆಜ್ಜೆಯ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಮತ್ತು ಬಿಜೆಪಿಯ ಒಕ್ಕಲಿಗ ಸಮುದಾಯದ ನಾಯಕರನ್ನು ಮುಗಿಸಬೇಕು ಎಂಬುದೇ ಕುಮಾರಸ್ವಾಮಿ ಅವರ ಮುಖ್ಯ ಉದ್ದೇಶವಾಗಿದೆ. ಮಂಡ್ಯದಲ್ಲಿ ಸುಮಲತಾ ಅಂಬರೀಷ್, ಹಾಸನದಲ್ಲಿ ಪ್ರೀತಂಗೌಡ, ಮೈಸೂರಿನಲ್ಲಿ ಪ್ರತಾಪ್ ಸಿಂಹ, ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಮುಗಿಸಿದ ಮೇಲೆ ಈಗ ರಾಮನಗರದಲ್ಲಿ ನನ್ನನ್ನು ಮುಗಿಸಲು ಮುಂದಾಗಿದ್ದಾರೆ ಎಂದು ಸಿ ಪಿ ಯೋಗೇಶ್ವರ್ ಅವರು ಗಂಭೀರವಾಗಿ ಆರೋಪಿಸಿದರು.

ಈ ಸಮಸ್ಯೆ ನಗರ ಪ್ರದೇಶದಲ್ಲಿರುವ ಬಿಜೆಪಿಯ ಒಕ್ಕಲಿಗನಾಯಕರಾದ ಆರ್.ಅಶೋಕ್, ಅಶ್ವತ್ಥನಾರಾಯಣ ಅವರಿಗೆ ಎದುರಾಗುವುದಿಲ್ಲ. ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ನಗರ ಪ್ರದೇಶದಲ್ಲಿನ ಒಕ್ಕಲಿಗ ನಾಯಕರನ್ನು ಮುಗಿಸುವುದು ಸಾಧ್ಯವಿಲ್ಲ ಎಂಬುದು ಗೊತ್ತಿದೆ. ಆದರೆ, ಗ್ರಾಮೀಣ ಪ್ರದೇಶದ ಬಿಜೆಪಿಯ ಒಕ್ಕಲಿಗ ನಾಯಕರಿಗೆ ಈಗ ಸಮಸ್ಯೆ ಉಂಟಾಗಿದೆ. ಬಿಜೆಪಿ ನಾಶ ಮಾಡಿ ಜೆಡಿಎಸ್ ಗಟ್ಟಿಗೊಳಿಸಲು ಹೊರಟರೆ ಪಕ್ಷದ ನೂರಾರು ಆಕಾಂಕ್ಷಿಗಳ ರಾಜಕೀಯ ಭವಿಷ್ಯ ಏನು ಎಂದು ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಹರಿಹಾಯ್ದಿದ್ದಾರೆ.

ನಾನು ಐದು ಸಲ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಇದರಲ್ಲಿ ಒಂದು ಬಾರಿ ಗೆದ್ದು, ನಾಲ್ಕು ಬಾರಿ ಸೋತಿದ್ದೇನೆ. ರಾಮನಗರ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಇರುವ ಕ್ಷೇತ್ರ ಯಾವುದಾದರೂ ಇದ್ದರೆ ಅದು ಚನ್ನಪಟ್ಟಣ ಮಾತ್ರ. ಮಿತ್ರ ಪಕ್ಷವಾಗಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ ಈ ಬಗ್ಗೆ ಯೋಚಿಸಿ ಚನ್ನಪಟ್ಟಣವನ್ನ ಬಿಟ್ಟು ಕೊಡಬೇಕು ಎಂದು ಒತ್ತಾಯಿಸಿದರು.

ಚನ್ನಪಟ್ಟಣ ಕ್ಷೇತ್ರವನ್ನು ತಮ್ಮ ಜೆಡಿಎಸ್ಗೆ ಉಳಿಸಿಕೊಳ್ಳಲು ಕುಮಾರಸ್ವಾಮಿ ತೀರ್ಮಾನಿಸಿದ್ದಾರಂತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯೋಗೇಶ್ವರ್, ಅವರು ತೀರ್ಮಾನ ಮಾಡಿದ್ದರೆ ಸಂತೋಷ, ಟಿಕೆಟ್ ಯಾರು ಬೇಕಾದರೂ ತೀರ್ಮಾನ ಮಾಡಬಹುದು. ಆದರೆ, ಫಲಿತಾಂಶ ತೀರ್ಮಾನ ಮಾಡುವುದು ಕ್ಷೇತ್ರದ ಜನರು ಮಾತ್ರ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.

Leave a Reply

Your email address will not be published. Required fields are marked *